ಸಿನಿವಾಣಿ

ಸುದೀಪಿಸಂಗೆ 25 ವರ್ಷ ... ನಡೆದು ಬಂದ ಹಾದಿಯನ್ನು ನೆನೆದ ಕಿಚ್ಚ

ಬೆಂಗಳೂರು: ‘ಕಿಚ್ಚ’ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. 1996ರ ಇದೇ ದಿನ ಅವರು ಮೊದಲ ಬಾರಿಗೆ ಸಿನಿಮಾಗಾಗಿ ಕ್ಯಾಮೆರಾ ಎದುರಿಸಿದ್ದು. ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಸುದೀಪ್​ ಅಭಿಮಾನಿಗಳು ತೀರ್ಮಾನಿಸಿದ್ದಾರೆ. ಇದರ ಮೊದಲ ಹಂತವಾಗಿ ಭಾನುವಾರ (ಜನವರಿ 31), 'ಸುದೀಪ್​ 25' ಸಂಭ್ರಮಾಚಾರಣೆ ಶುರುವಾಗಲಿದೆ. ಜತೆಗೆ ವಿಶ್ವದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ 'ವಿಕ್ರಾಂತ್​ ರೋಣ' ಚಿತ್ರದ ಟೈಟಲ್ ಲೋಗೋ ಬಿಡುಗಡೆಯಾಗಲಿದೆ.

25 ವರ್ಷಗಳ ಸಿನಿಮಾ ಪಯಣವನ್ನು ಸುದೀಪ್​ ದುಬೈನಿಂದಲೇ ವರ್ಚುವಲ್ ಸುದ್ದಿಗೋಷ್ಠಿ ಮೂಲಕ ಹಂಚಿಕೊಂಡಿದ್ದಾರೆ. ತಾವು ನಡೆದು ಬಂದ ಹಾದಿಯನ್ನು ವಿವರಿಸಿದ್ದಾರೆ.

ಈ 25 ವರ್ಷದ ಪಯಣವನ್ನು ಯಾವತ್ತೂ ರಿವೈಂಡ್ ಮಾಡಲ್ಲ ಎನ್ನುವ ಸುದೀಪ್​, 'ಎಲ್ಲವೂ ನಿನ್ನೆ ಮೊನ್ನೆ ನಡೆದಂತಿದೆ. ಕಂಠೀರವದಲ್ಲಿ ಅಂದು ಮೇಕಪ್ ಮಾಡಿದ ಗುರು, ಇವತ್ತೂ ನನಗೆ ಬಣ್ಣ ಹಚ್ಚುತ್ತಿದ್ದಾರೆ. ಇದೆಲ್ಲದರ ನಡುವೆ ಆವತ್ತು ನನ್ನ ಗಮನ ಮಾತ್ರ, ಒಂದು ಹೌಸ್​ಫುಲ್​ ಪ್ರದರ್ಶನದತ್ತ ನೆಟ್ಟಿತ್ತು. ಹುಚ್ಚ ಸಿನಿಮಾ ಅದನ್ನು ನನಸು ಮಾಡಿತು. ಮೇನಕಾ ಚಿತ್ರಮಂದಿರದಲ್ಲಿ ಕೇವಲ 5 ಜನರಿದ್ದಾಗ ಎಲ್ಲವೂ ಮುಗಿಯಿತು ಅಂದುಕೊಂಡಿದ್ದೆ. ಅದಾದ ಬಳಿಕ ಬಂದ ಜನಸಾಗರ ಒಂದು ಕ್ಷಣ ನನ್ನನ್ನು ಕನಸು ಎನ್ನುವಂತೆ ಮಾಡಿತು. ಪ್ರೇಕ್ಷಕರ ಜತೆಗೆ ಸಿನಿಮಾ ನೋಡಿ, ಅವರ ಜತೆಗೆ ಕೆಳಗಿಳಿದೆ. ಯಾರೋ ಒಬ್ಬರು ಕಿಚ್ಚ ಕಿಚ್ಚ ... ಅಂದ್ರು, ಎಲ್ಲರೂ ಸೇರಿ ಕಾರ್ ಮೇಲೆ ಎತ್ತಿ ಕೂರಿಸಿದರು. ಆ ನೆನಪು ಇನ್ನೂ ಹಾಗೇ ಇದೆ. 10 ಸಾವಿರ ಬುರ್ಜ್ ಖಲೀಫಾ ಕೊಟ್ರು ಆ ಒಂದು ಕ್ಷಣವನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಅಂದಿನಿಂದ ಪ್ರಾರಂಭವಾದ ಆ ಪ್ರೀತಿ ಇವತ್ತಿಗೂ ಕಡಿಮೆ ಆಗಿಲ್ಲ' ಎನ್ನುತ್ತಾರೆ ಸುದೀಪ್​.

ಈ ಸುದೀರ್ಘ 25 ವರ್ಷದ ಅವಧಿಯಲ್ಲಿ ಸುದೀಪ್​ ಯಾವತ್ತೂ ಯಾಕೆ ಈ ಸಿನಿಮಾದಲ್ಲಿ ನಟಿಸಿದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲಿಲ್ಲವಂತೆ. 'ಯಾವುದೇ ಚಿತ್ರವಾಗಲಿ, ಆ ಸಂದರ್ಭದಲ್ಲಿ ನಾನು ಆ ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟೇ ಸಿನಿಮಾ ಮಾಡಿರುತ್ತೇನೆ. ಹಾಗಾಗಿ ಎಲ್ಲವೂ ನನ್ನಿಷ್ಟದ ಪಾತ್ರಗಳೇ. ನಾಯಕನಾಗಿ ನಟಿಸುವುದರ ಜತೆಗೆ ಖಳ ಪಾತ್ರವೂ ನನ್ನನ್ನು ಅರಸಿ ಬಂದವು. ಹಾಗಂತ ಅದನ್ನು ನಾನು ಕೈ ಬಿಡಲಿಲ್ಲ. ನನ್ನ ದ್ವಿಪಾತ್ರದ ‘ವಾಲಿ’ ಸಿನಿಮಾದಲ್ಲಿ ಖಳನಾಗಿ ಕಾಣಿಸಿಕೊಂಡೆ, ಅದಾದ ಬಳಿಕ ‘ಸ್ವಾತಿಮುತ್ತು’ ಸಿನಿಮಾದಲ್ಲಿ 70 ವರ್ಷದ ವೃದ್ಧನ ಪಾತ್ರವನ್ನೂ ಮಾಡಿದ್ದೇನೆ. ಹಾಗಾಗಿ ಅವುಗಳ ಬಗ್ಗೆ ನಾನು ಹಿಂದೇಟು ಹಾಕಲಿಲ್ಲ' ಎಂದು ಹೇಳಿಕೊಂಡಿದ್ದಾರೆ ಸುದೀಪ್​.