ಬೆಂಗಳೂರು: ನಟ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳ ಜತೆ ಜತೆಗೆ ಬೇರೆ ಕಲಾವಿದರ ಚಿತ್ರಗಳ ಹಾಡಿಗೂ ಧ್ವನಿಯಾಗಿದ್ದಾರೆ. ಸುದೀಪ್ ತಮ್ಮದೇ ನಟನೆಯ ‘ವಾಲಿ’ ಚಿತ್ರದ ‘ಓ ಸೋನಾ’ ಸಾಂಗ್ ಮೂಲಕ ಗಾಯಕರಾಗಿ ಪರಿಚಿತರಾದರು. ಬಳಿಕ ‘ನಲ್ಲ’, ‘ರಂಗ ಎಸ್‌ಎಸ್‌ಎಲ್‌ಸಿ’, ‘ಕೆಂಪೇಗೌಡ’ ಸೇರಿ ಬೇರೆ ಕಲಾವಿದರ ‘ರಿಂಗ್ ರೋಡ್’, ‘ರಾಟೆ’, ‘ಟೈಗರ್’ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. 2017ರಲ್ಲಿ ತೆರೆಕಂಡಿದ್ದ ‘ನಾ ಪಂಟ ಕಣೋ’ ಸಿನಿಮಾದ ‘ಇವಳೇ ನನ್ನ ಹುಡುಗಿ’ ಸಾಂಗ್ ಹಾಡಿದ್ದು ಕೊನೆ. ಇದೀಗ ಒಂಬತ್ತು ವರ್ಷಗಳ ಬಳಿಕ ಸುದೀಪ್ ಕನ್ನಡದ ‘ಫ್ಲರ್ಟ್’ ಚಿತ್ರದ ಸಾಂಗ್ ಹಾಡಿದ್ದಾರೆ. ‘ಪ್ರೇಮ ಬರಹ’ ಖ್ಯಾತಿಯ ಚಂದನ್ ಕುಮಾರ್ ನಟಿಸಿ, ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರವಿದು. ‘ನನ್ನ ಜೀವ ನೀನು’ ಎಂಬ ಸೊಗಸಾದ ಫ್ರೆಂಡ್‌ಶಿಪ್ ಆ್ಯಂಥೆಮ್‌ಗೆ ಸುದೀಪ್ ಧ್ವನಿಯಾಗಿದ್ದಾರೆ. ಸ್ವತಃ ಚಂದನ್ ಅವರೇ ಈ ಹಾಡನ್ನು ರಚಿಸಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ‘‘ಫ್ಲರ್ಟ್’ ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಫ್ರೆಂಡ್‌ಶಿಪ್, ಲವ್ ಹಾಗೂ ಎಮೋಷನ್ ಇದರ ಜೀವಾಳ. ‘ಫ್ಲರ್ಟ್’ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ, ಗಾಢವಾದ ಪ್ರೀತಿ ಕೂಡ ಹೌದು. ಈ ಕಥೆಗೆ ‘ಲವ್ ಮಾಕ್ಟೇಲ್’ ಚಿತ್ರ ಸ್ಫೂರ್ತಿ’ ಎಂದರು ಚಂದನ್. ಇಲ್ಲಿ ಅವರಿಗೆ ಇಬ್ಬರು ನಾಯಕಿಯರಿದ್ದು, ಅಕ್ಷಿತಾ ಬೋಪಯ್ಯ, ನಿಮಿಕಾ ರತ್ನಾಕರ್ ಅಭಿನಯಿಸಿದ್ದಾರೆ. ಸಾಧು ಕೋಕಿಲಾ, ಶ್ರುತಿ, ಗಿರೀಶ್ ಶಿವಣ್ಣ, ಮೂಗು ಸುರೇಶ್ ಕಲಾಬಳಗದಲ್ಲಿದ್ದಾರೆ.
ಸುದೀಪ್ ಸರ್ ಪ್ರೇರಣೆ: ‘ಬಿಗ್‌ಬಾಸ್ ಕನ್ನಡ’ ರಿಯಾಲಿಟಿ ಶೋ, ಸಿಸಿಎಲ್‌ನಿಂದಾಗಿ ನಟ ಸುದೀಪ್ ಆಪ್ತ ಬಳಗದಲ್ಲಿ ಚಂದನ್ ಗುರುತಿಸಿಕೊಂಡಿದ್ದಾರೆ. ಇನ್ನು ಈ ಹಾಡು ರಚಿಸುವಾಗಲೇ ಸುದೀಪ್ ಅವರಿಂದಲೇ ಹಾಡಿಸಬೇಕು ಎಂದು ಚಂದನ್ ನಿರ್ಧರಿಸಿದ್ದರಂತೆ. ‘ನನಗೆ ಎಲ್ಲ ರೀತಿಯಲ್ಲೂ ಸುದೀಪ್ ಸರ್ ಪ್ರೇರಣೆ. ಮೊದಲು ಹಾಡಲು ಅವರು ನಿರಾಕರಿಸಿದರು. ಸುಮಾರು ಮೂರ್ನಾಲ್ಕು ತಿಂಗಳವರೆಗೆ ನೀವೇ ಹಾಡಬೇಕು ಎಂದು ವಿನಂತಿಸಿಕೊಂಡೆ. ಮೊದಲಿಗೆ ಸಾಹಿತ್ಯ ಕಳುಹಿಸಿದಾಗ ಪಿಚ್ ಡೌನ್ ಮಾಡುವಂತೆ ಸೂಚಿಸಿದರು. ಕೊನೆಗೊಂದು ದಿನ ಹಾಡು ಸೆಲೆಕ್ಟ್ ಆಯಿತು. ಬಳಿಕ ಸುದೀಪ್ ಸರ್ ಮೂರು ದಿನದಲ್ಲಿ ಹಾಡಿದರು. ಕೇವಲ ಒಂದು ತಾಸಿನಲ್ಲಿ ಶೂಟಿಂಗ್ ಮುಗಿಸಿಕೊಟ್ಟರು’ ಎಂದು ಮಾಹಿತಿ ಹಂಚಿಕೊಂಡರು.