ಸಿನಿವಾಣಿ

JP Thuminad Interview; ಜೆಪಿ ತುಮಿನಾಡ್​ ಹೊಸ ಕಥೆ- ನಟನೆಗೂ ಸೈ, ನಿರ್ದೇಶನಕ್ಕೂ ಜೈ ಎಂದ ಸು ಫ್ರಮ್ ಸೋ ಅಶೋಕ

| ಹರ್ಷವರ್ಧನ್​ ಬ್ಯಾಡನೂರು, ಬೆಂಗಳೂರು

"ಸು ಫ್ರಮ್​ ಸೋ'. ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳಿಗೆ ಹೆಸರಾದ ಸಿನಿಮಾ. ಈ ವರ್ಷ 100 ಕೋಟಿ ರೂ. ಕ್ಲಬ್​ ಸೇರಿದ ಮೊದಲ ಸ್ಯಾಂಡಲ್​ವುಡ್​ ಚಿತ್ರ. 100 ಕೋಟಿ ಕ್ಲಬ್​ ರೂ. ಸೇರಿದ ಕನ್ನಡದ ಅತಿ ಕಡಿಮೆ ಬಜೆಟ್​ ಸಿನಿಮಾ. ಈ ವರ್ಷ ಇದುವರೆಗೆ ಅತಿಹೆಚ್ಚು ಪ್ರೇಕ್ಷಕರು ನೋಡಿದ ಕನ್ನಡ ಸಿನಿಮಾ. ಸ್ಟಾರ್​ಗಳಿಲ್ಲದೇ 100 ಕೋಟಿ ರೂ. ಗಳಿಕೆ ಮಾಡಿಕೊಂಡ ಚಿತ್ರ. ಆನ್​ಲೈನ್​ನಲ್ಲಿ ಅತಿಹೆಚ್ಚು ಅರ್ಥಾತ್​ 15 ಲಕ್ಷಕ್ಕೂ ಅಧಿಕ ಟಿಕೆಟ್​ ಮಾರಾಟವಾದ ಕನ್ನಡ ಸಿನಿಮಾ... ಹೀಗೆ ಸಾಲು ಸಾಲು ದಾಖಲೆಗಳಿಗೆ ಜೆ.ಪಿ. ತುಮಿನಾಡ್​ ನಟಿಸಿ, ನಿರ್ದೇಶಿಸಿರುವ ಚಿತ್ರ ಸಾಕ್ಷಿಯಾಗಿದೆ.

ಶನೀಲ್​ ಗೌತಮ್​, ರಾಜ್​ ಬಿ. ಶೆಟ್ಟಿ, ಪ್ರಕಾಶ್​ ತುಮಿನಾಡ್​, ಸಂಧ್ಯಾ ಅರೆಕೆರೆ, ದೀಪಕ್​ ರೈ ಪಣಾಜೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಸು ಫ್ರಮ್​ ಸೋ' ಇದೀಗ ಒಟಿಟಿಯಲ್ಲೂ ಬಿಡುಗಡೆಯಾಗಿದ್ದು, ಸದ್ಯ ಚಿತ್ರತಂಡದ ಎಲ್ಲ ಸದಸ್ಯರು ಮುಂದಿನ ಸಿನಿಮಾಗಳತ್ತ ಗಮನಹರಿಸಿದ್ದಾರೆ. ನಾಯಕ, ನಿರ್ದೇಶಕ ಜೆ.ಪಿ. ತುಮಿನಾಡ್​, "ನಾನು ಈಗಾಗಲೇ ಒಂದು ತುಳು ಚಿತ್ರದಲ್ಲಿ ನಟಿಸಿದ್ದು, ಜನವರಿಯಲ್ಲಿ ತೆರೆಗೆ ಬರಲಿದೆ. "ಸು ಫ್ರಮ್ ಸೋ' ಬಿಡುಗಡೆ ಆದಾಗಿನಿಂದಲೂ ಕಥೆ ಹೇಳಬೇಕು ಅಂತ ಹಲವರು ಹೇಳಿದ್ದಾರೆ. ಸಮಯ ತೆಗೆದುಕೊಂಡು ಒಂದೊಂದಾಗಿ ಕತೆ ಕೇಳುತ್ತಿದ್ದೇನೆ. ಆದರೆ, ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲ' ಎಂದು ಮಾಹಿತಿ ನೀಡುತ್ತಾರೆ.

ಕಥೆಗೆ ಮೊದಲ ಆದ್ಯತೆ

ಜೆ.ಪಿ. ತುಮಿನಾಡ್​, ಈ ಹಿಂದೆಯೇ ಎರಡು ಕಥೆಗಳನ್ನು ರೆಡಿ ಮಾಡಿಕೊಂಡಿದ್ದರಂತೆ. ಆದರೆ, ಕಹಾನಿ ಮೆ ಟ್ವಿಸ್ಟ್​ ಎಂಬಂತೆ, "ಆ ಕಥೆಗಳಿಗೆ ಅದರದ್ದೇ ಸಮಯ ಬರಬೇಕು. ಕಥೆಗಳು ನನ್ನನ್ನು ಖುಷಿಪಡಿಸಬೇಕು, ಆ ನಿಟ್ಟಿನಲ್ಲಿ ಕೆಲ ಬದಲಾವಣೆ ಮಾಡಬೇಕು. ಹೀಗಾಗಿ, ಅವೆರಡನ್ನೂ ಬಿಟ್ಟು ಹೊಸ ಕಥೆ ಬರೆಯಬೇಕು ಅಂತ ಪ್ಲ್ಯಾನ್​​ ಮಾಡುತ್ತಿದ್ದೇನೆ. ಬೇರೆ ರೀತಿಯ ಕಥೆ ಮಾಡಬೇಕು ಅಂತ ಯೋಚಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ "ಸು ಫ್ರಮ್ ಸೋ' ರಿಲೀಸ್​ಗೂ ಮುನ್ನವೇ ಬರವಣಿಗೆ ಪ್ರಾರಂಭಿಸಿದ್ದೆ. ಆದರೆ, ಸ್ಕ್ರಿಪ್ಟ್​ಗೆ ಅದರದ್ದೇ ಆದ ಸಮಯ ಬೇಕು. ಅವಸರದಲ್ಲಿ ಸಿನಿಮಾ ಮಾಡಲ್ಲ. ಹಾಗಂತ "ಸು ಫ್ರಮ್​​ ಸೋ'ಗೆ ತೆಗೆದುಕೊಂಡಷ್ಟು ಸಮಯವನ್ನೂ ತೆಗೆದುಕೊಳ್ಳುವುದಿಲ್ಲ' ಎನ್ನುವ ಜೆ.ಪಿ. ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಘೋಷಿಸಿದರೂ ಆಶ್ಚರ್ಯವಿಲ್ಲ.

ಬರವಣಿಗೆ ಗೊತ್ತು, ಜಾನರ್​ ಅಲ್ಲ

"ನನಗೆ ಕಥೆ ಬರೆಯುವುದಷ್ಟೇ ಗೊತ್ತು' ಎನ್ನುವ ತುಮಿನಾಡ್​, "ಜಾನರ್​ ಬಗ್ಗೆ ಗೊತ್ತಿಲ್ಲ. ಕಥೆ ಬರೆದ ಬಳಿಕ "ಸು ಫ್ರಮ್​ ಸೋ' ಹಾರರ್​ ಕಾಮಿಡಿ ಜಾನರ್​ ಅಂತ ಬೇರೆಯವರು ಹೇಳಿದ್ದು. ನನಗೆ ಏನು ಹೇಳಬೇಕು ಅಂತ ಅನ್ನಿಸುತ್ತದೆಯೋ ಅದನ್ನು ಬರೆಯುತ್ತಾ ಹೋಗುತ್ತೇನೆ. ಪೂರ್ಣಗೊಂಡ ಬಳಿಕ ಜಾನರ್​ ಯಾವುದು ಅಂತ ತೀರ್ಮಾನಿಸುತ್ತೇನೆ. ಇನ್ನು ಹೀರೋನೇ ಆಗಬೇಕು ಅಂತೇನಿಲ್ಲ. ಒಳ್ಳೆ ಪಾತ್ರ ಸಿಕ್ಕರೆ ಖಂಡಿತಾ ನಟಿಸುವೆ' ಎನ್ನುತ್ತಾರೆ.