ಸಿನಿವಾಣಿ

ಕನ್ನಡದಲ್ಲಿ ಬಿಗ್ ಸಕ್ಸಸ್ ಬಳಿಕ ತೆಲುಗಿಗೆ ಡಬ್​ ಆದ ಸು ಫ್ರಮ್ ಸೋ : ಯಾವಾಗ ರಿಲೀಸ್?

ಶಿವಮಲ್ಲಯ್ಯ ಸ್ಥಾವರಮಠ

ಬೆಂಗಳೂರು: ರಾಜ್ ಬಿ.ಶೆಟ್ಟಿ ನಿರ್ಮಾಣದ ಹಾಗೂ ಜೆ.ಪಿ.ತುಮಿನಾಡು ನಟಿಸಿ, ಮೊದಲ ಬಾರಿಗೆ ನಿರ್ದೇಶಿಸಿರುವ ‘ಸು ಫ್ರಮ್ ಸೋ’ ಸಿನಿಮಾ ರಿಲೀಸ್ ಆದಾಗಿನಿಂದಲೂ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಅತಿ ಹೆಚ್ಚು ಟಿಕೆಟ್ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದ್ದ ಚಿತ್ರವು ಗಳಿಕೆಯಲ್ಲೂ ದಾಖಲೆ ನಿರ್ಮಿಸಿ, ಗೆಲುವಿನ ಓಟ ನಾಗಾಲೋಟವನ್ನು ಮುಂದುವರಿಸಿದೆ. ಸಿನಿಮಾ ರಿಲೀಸ್ ಆದ 11 ದಿನಕ್ಕೆ ಈ ಚಿತ್ರ ಸುಮಾರು 30 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಮಾಹಿತಿ.ಈ ಮಧ್ಯೆ, ಮಲಯಾಳಂಗೆ ಡಬ್ಬಿಂಗ್ ಆಗಿ ಅ. 1ರಂದು ರಿಲೀಸ್ ಆಗಿತ್ತು. ಕೇರಳದಲ್ಲಿ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಅಮೆರಿಕ, ಜಪಾನ್ ಹಾಗೂ ಕುವೈತ್ ರಾಷ್ಟ್ರಗಳಲ್ಲಿ ರಿಲೀಸ್ ಆಗಿ ಸು ಫ್ರಮ್​ ಸೋ ಸಾಗರದಾಚೆಯಲ್ಲೂ ಕೂಡ  ಗೆಲುವಿನ ಬಾವುಟ ನೆಟ್ಟಿತ್ತು. ಇದು ಚಿತ್ರತಂಡದ ಖುಷಿಗೆ ಕಾರಣವಾಗಿತ್ತು. ಇದೇ ಖುಷಿಯಲ್ಲಿರುವ ಚಿತ್ರತಂಡಕ್ಕೆ ಮತ್ತಷ್ಟು ಸಂತೋಷದ ಸುದ್ದಿ ಸಿಕ್ಕಿದೆ. ಇದೀಗ ‘ಸು ಫ್ರಮ್ ಸೋ’ ತೆಲುಗಿಗೂ ಡಬ್ ಆಗುತ್ತಿದೆ. ಹೌದು, ಈ ಬಗ್ಗೆ ಚಿತ್ರತಂಡವೇ ಖಚಿತಪಡಿಸಿದ್ದು, ಇದೇ ಅಗಸ್ಟ್ 8ಕ್ಕೆ ತೆಲುಗು ವರ್ಷನ್ ಸಿನಿಮಾ ಬಿಡುಗಡೆಯಾಗಲಿದೆ. ಮೈತ್ರಿ ಮೂವೀ ಸಂಸ್ಥೆಯು ತೆಲುಗು ವಿತರಣೆಗೆ ಹಕ್ಕನ್ನು ಪಡೆದಿದೆ. ಈ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲು ಕನ್ನಡ ಸಿನಿಮಾ ಸಿದ್ಧವಾಗಿದೆ. ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಹಂತ ಹಂತವಾಗಿ ಬೇರೆ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ‘ಕಾಂತಾರ’ ಕೂಡ ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ, ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದೇ ಹಾದಿಯಲ್ಲಿ ’ಸು ಫ್ರಮ್ ಸೋ’ ಸಾಗುತ್ತಿದೆ. ಸನೀತ್​ ಗೌತಮ್​, ಜೆಪಿ ತುಮಿನಾಡು, ಸಂಧ್ಯಾ ಅರಕೆರೆ, ಮೈಮ್​ ರಾಮ್​ದಾಸ್, ಪ್ರಕಾಶ್ ತುಮಿನಾಡು ಸೇರಿ ಹಲವು ಕರಾವಳಿ ಕಲಾವಿದರು ಈ ಚಿತ್ರದಲ್ಲಿದ್ದಾರೆ.