ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ, ಎಲ್ಲರ ನೆಚ್ಚಿನ ಲೀಲಮ್ಮ ಇಂದು ಸಂಜೆ ವಯೋಸಹಜ ಕಾಯಿಲೆಯಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕನ್ನಡ ಚಿತ್ರರಂಗದ ನಕ್ಷತ್ರವೊಂದು ಮಿಂಚಿ ಮರೆಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಸುದ್ದಿ ಕೇಳಿ ಮುನಸ್ಸಿಗೆ ದುಖವಾಯಿತು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಕಲಾರಂಗ ಒಬ್ಬ ಮನೆಯ ಹಿರಿಯರನ್ನು ಕಳೆದುಕೊಂಡು ಬಡವಾದಂತಾಗಿದೆ. ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜಕುಮಾರ್ ಸೇರಿದಂತೆ ಎಲ್ಲ ದಿಗ್ಗಜ ನಟರೊಂದಿಗೆ ವಿಭಿನ್ನ ಪಾತ್ರಗಳನ್ನು ಮಾಡಿ ಎಲ್ಲರ ಮನೆ ಮಾತಾಗಿದ್ದರು. ಅವರ ಪುತ್ರ ವಿನೋದ್ ರಾಜ್ ಅವರಿಗೆ ತಾಯಿಯ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು. ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ. ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದಕ್ಷಿಣ ಭಾರತದ ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿ ವರ್ಗದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.
ಹೀಗೆ ಸಾಕಷ್ಟು ರಾಜಕೀಯ ಗಣ್ಯರು ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶ್ರದ್ಧಾಂಜಲಿ ಪೋಸ್ಟ್ಗಳು ಈ ಕೆಳಕಂಡಂತಿದೆ.