ಹೈದರಾಬಾದ್: ಬಿಗ್ ಬಜೆಟ್ ಮತ್ತು ಸ್ಟಾರ್ ಚಿತ್ರಗಳ ಸ್ಯಾಟಿಲೈಟ್ ಹಕ್ಕುಗಳನ್ನು ಖರೀದಿಸುವುದಕ್ಕೆ ಚಾನಲ್ಗಳು ಪೈಪೋಟಿ ನಡೆಸುವುದು ಹೊಸ ವಿಷಯವೇನಲ್ಲ. ಕೆಲವು ಸ್ಟಾರ್ಗಳ ಚಿತ್ರಗಳು ಒಂದು ಚಾನಲ್ಗೆ ಹೋದರೆ, ಬೇರೆಯವರದ್ದು ಇನ್ನೊಂದು ಚಾನಲ್ಗೆ ಮಾರಾಟವಾಗುತ್ತದೆ. ಇದು ಎಲ್ಲ ಭಾಷೆಗಳಲ್ಲೂ ಸಹಜ.
ಆದರೆ, ಸದ್ಯ ಬಿಡುಗಡೆಯಾಗಬೇಕಿರುವ ಕೆಲವು ದೊಡ್ಡ ಬಜೆಟ್ನ, ದೊಡ್ಡ ಸ್ಟಾರ್ಗಳ ಮತ್ತು ನಿರೀಕ್ಷಿತ ಚಿತ್ರಗಳ ಸ್ಯಾಟಿಲೈಟ್ ಹಕ್ಕುಗಳನ್ನೆಲ್ಲ ಒಂದೇ ಚಾನಲ್ನವರು ಖರೀದಿಸುವುದು ಬಹಳ ಅಪರೂಪ. ಆದರೆ, ಸ್ಟಾರ್ ಮಾ ಎಂಬ ತೆಲುಗು ಚಾನಲ್ ಅಂಥದ್ದೊಂದು ಸಾಧನೆ ಮಾಡಿದೆ.
ಸ್ಟಾರ್ ಸಮೂಹದ ಚಾನಲ್ ಆಗಿರುವ ಸ್ಟಾರ್ ಮಾ, ಸದ್ಯ ತೆಲುಗಿನ ಕೆಲವು ನಿರೀಕ್ಷಿತ ಚಿತ್ರಗಳ ಹಕ್ಕುಗಳನ್ನು ಕಂಡಿದ್ದು, ಆ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಟಿವಿಯಲ್ಲಿ ಪ್ರೀಮಿಯರ್ ಮಾಡಲಿದೆ. ಈ ಪ್ರತಿಷ್ಠಿತ ಚಿತ್ರಗಳ ಹಕ್ಕುಗಳನ್ನು ಖರೀದಿಸುವುದಕ್ಕೆಂದೇ ಚಾನಲ್ ಕೋಟಿ ಕೋಟಿ ಹಣವನ್ನು ಎತ್ತಿಟ್ಟಿದೆ.
ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಅಭಿನಯದ 'ಆರ್ಆರ್ಆರ್', ಮಹೇಶ್ ಬಾಬು ಅವರ 'ಸರಕಾರಿ ವಾರಿ ಪಾಟ', ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ', ಬಾಲಕೃಷ್ಣ ಅಭಿನಯದ 'ಅಖಂಡ', ರವಿತೇಜ ಅಭಿನಯದ 'ಕಿಲಾಡಿ', ಅಖಿಲ್ ನಾಗಾರ್ಜುನ ಅಭಿನಯದ 'ಮೋಸ್ಟ್ ಎಲಿಜಿಬಲ್ ಬ್ಯಾಚಲರ್' ಸೇರಿದಂತೆ ಹಲವು ಪ್ರಮುಖ ಚಿತ್ರಗಳ ಸ್ಯಾಟಿಲೈಟ್ ಹಕ್ಕುಗಳನ್ನು ಖರೀದಿಸಿದೆ. ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರವೊಂದು ಈ ಪಟ್ಟಿಯಲ್ಲಿಲ್ಲ.
ಬಹುಶಃ ಅದು ಸಹ ಮುಂದಿನ ದಿನಗಳಲ್ಲಿ ಪಟ್ಟಿಗೆ ಸೇರಿದರೆ, ಅಲ್ಲಿಗೆ ಈ ಸೀಸನ್ನ ಎಲ್ಲ ನಿರೀಕ್ಷಿತ ಚಿತ್ರಗಳನ್ನು ಒಂದೇ ಚಾನಲ್ನಲ್ಲಿ ನೋಡಬಹುದಾಗಿದೆ.