ಸಿನಿವಾಣಿ

ಶ್ರೀರಾಮ್​, ಎಲ್ಸಾ ನಟಿಸಿರುವ ರೊಮ್ಯಾಂಟಿಕ್​ ರುದ್ರವೀಣ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಇತ್ತೀಚಿನ ವರ್ಷಗಳಲ್ಲಿ ಬಹುಭಾಷಾ ಪ್ಯಾನ್​ ಇಂಡಿಯಾ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದೊಡ್ಡ ಸ್ಟಾರ್​ಗಳ, ಬಹುಕೋಟಿ ಬಜೆಟ್​ ಸಿನಿಮಾಗಳು ಮಾತ್ರವಲ್ಲದೇ ಹೊಸಬರ ಚಿತ್ರಗಳೂ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿವೆ. ಅದಕ್ಕೆ ಉತ್ತಮ ಉದಾಹರಣೆ ರುದ್ರವೀಣ. ಮಧುಸೂದನ್​ ರೆಡ್ಡಿ ನಿರ್ದೇಶಿಸಿರುವ ಶ್ರೀರಾಮ್​ ನಿಮ್ಮಲ, ಎಲ್ಸಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಹೀಗೆ ನಾಲ್ಕು ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ.

ಯುವಕರಿಗೆ ಭಾವನೆ, ಹಿರಿಯರಿಗೆ ಬಾಂದವ್ಯ, ಪ್ರೇಮಿಗಳಿಗೆ ಪ್ರಣಯ, ತುಂಟರಿಗೆ ಐಟಂ ಸಾಂಗ್ಸ್, ಬೇಸರ ಮರೆಸುವ ಸಕ್ಕತ್ ಕಾಮಿಡಿ, ಹುರುಪಲ್ಲಿ ಬಂದ ಪ್ರೇಕ್ಷಕನಿಗೆ ಮತ್ತೊಮ್ಮೆ ನೋಡುವಂತಹ ಮಾಸ್ ಮತ್ತು ಕ್ಲಾಸ್ ಶೇಡ್ ಹೊಂದಿರುವ ಮನರಂಜನಾತ್ಮಕ ಚಿತ್ರ. ಟ್ವಿಸ್ಟ್ ಗಳು ಮತ್ತು ಹಾಡುಗಳನ್ನು ಸೇರಿದಂತೆ ರೊಮ್ಯಾಂಟಿಕ್ ದೃಶ್ಯಗಳೊಂದಿಗೆ ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ವಿಶೇಷ ಅಂದರೆ ಮೆಗಾಸ್ಟಾರ್ ಚಿರಂಜೀವಿ ರುದ್ರ ವೀಣಾ ಸಿನಿಮಾದ ಟೀಸರ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದರು. ಶ್ರೀರಾಮ್​, ಎಲ್ಸಾ ಜತೆಗೆ ಲೇಡಿ ವಿಲನ್​ ಪಾತ್ರದಲ್ಲಿ ಸೋನಿಯಾ ನಟಿಸಿದ್ದು, ರಘು ಕುಂಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರಕ್ಕೆ ಮಹಾವೀರ್​ ಸಂಗೀತವಿದ್ದು, ಯಾನಂ, ಲಾಲಪ್ಪ ಸೇರಿ ಹಲವು ಸುಂದರ ರಮಣೀಯ ಲೊಕೇಷನ್​ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾ ಇಂದು ತೆಲುಗಿನಲ್ಲಿ ರಿಲೀಸ್​ ಆಗುತ್ತಿದ್ದು, ಎರಡು ವಾರಗಳ ನಂತರ ಕನ್ನಡದಲ್ಲೂ ಬಿಡುಗಡೆ ಮಾಡುವ ಪ್ಲ್ಯಾನ್​ ಚಿತ್ರತಂಡದ್ದು.