ಸಿನಿವಾಣಿ

ಬ್ಯಾಟ್​ಮ್ಯಾನ್​ ಬಘೀರ ; ಕತ್ತಲಲ್ಲಿ ಬಂದು ದುಷ್ಟರ ಬೇಟೆಯಾಡುವ ಕನ್ನಡದ ಸೂಪರ್​ಹೀರೋ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಮದಗಜ' ಚಿತ್ರ ತೆರೆಗೆ ಬಂದ ಮೂರು ವರ್ಷಗಳ ಬಳಿಕ ಶ್ರೀಮುರಳಿ ನಟಿಸಿರುವ ಹೊಸ ಸಿನಿಮಾ "ಬಘೀರ'. ಡಾ. ಸೂರಿ ಆ್ಯಕ್ಷನ್​-ಕಟ್​ ಹೇಳಿರುವ ಈ ಚಿತ್ರದಲ್ಲಿ ಶ್ರೀಮುರಳಿ ಸೂಪರ್​ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೆ ಟ್ರೇಲರ್​ ರಿಲೀಸ್​ ಮಾಡಲಾಗಿದೆ. ಚಿತ್ರದ ಬಗ್ಗೆ ಅವರು, "ಸಣ್ಣ ವಯಸ್ಸಿನಲ್ಲಿ ಬ್ಯಾಟ್​ಮ್ಯಾನ್​, ಐರನ್​ ಮ್ಯಾನ್​, ಸ್ಪೈಡರ್​ಮ್ಯಾನ್​, ಸೂಪರ್​ಮ್ಯಾನ್​ನಂತಹ ಸೂಪರ್​ಹೀರೋಗಳನ್ನು ನೋಡಿ ನಾನೂ ಸೂಪರ್​ಹೀರೋ ಆಗಬೇಕು ಅಂತ ಆಸೆಪಡುತ್ತಿದ್ದೆ. "ಬಘೀರ' ಕಥೆ ಕೇಳಿದ ತಕ್ಷಣ ತುಂಬ ಖುಷಿಯಾಯಿತು. ಮೊದಲ ಬಾರಿ ಕಾಸ್ಟ್ಯೂಮ್​ ಧರಿಸಿದಾಗ, ನನಗೆ ಇಷ್ಟದ ತಿಂಡಿ, ತಿನಿಸುಗಳನ್ನು ತೊರೆದು, ವರ್ಕೌಟ್​ ಮಾಡಲೇಬೇಕು ಅಂತ ಸಿದ್ಧತೆ ಮಾಡತೊಡಗಿದೆ' ಎಂದು ಮಾಹಿತಿ ನೀಡುತ್ತಾರೆ ನಾಯಕ ಶ್ರೀಮುರಳಿ.

ನಾಯಕಿ ರುಕ್ಮಿಣಿ ವಸಂತ್​, "ಪಾತ್ರದ ಬಗ್ಗೆ ಹೆಚ್ಚು ಹೇಳಲಾರೆ. ಆದರೆ, ಈ ಚಿತ್ರದಲ್ಲಿ ಒಂದೊಳ್ಳೆ ಪರಿಣಾಮಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಸವಾಲಿನ ಸೀನ್​ಗಳಿದ್ದವು. ಒಂದು ಉತ್ತಮ ಅನುಭವ ನೀಡಿದ ಚಿತ್ರ' ಎಂದರು. ನಿರ್ದೇಶಕ ಡಾ. ಸೂರಿ, "ಕರಿಚಿರತೆಗಳನ್ನು "ಬಘೀರ' ಎನ್ನುತ್ತಾರೆ. ಪ್ರಶಾಂತ್​ ನೀಲ್​ ಈ ಕಥೆಯನ್ನು ಹೇಳಿದಾಗ, ನನಗೆ ಮೊದಲು ಹೊಳೆದಿದ್ದೇ ಈ ಟೈಟಲ್​. ಹಗಲಿನಲ್ಲಿ ನಿಷ್ಠಾವಂತ ಪೊಲೀಸ್​ ಆಫೀಸರ್​ ಒಬ್ಬ, ದುಷ್ಟರಲ್ಲಿ ಸದೆಬಡೆಯಲು ಕರಿಚಿರತೆಯಾಗಿ ರಾತ್ರಿ ಸಮಯದಲ್ಲಿ ಹೊಂಚು ಹಾಕುವಕಥೆಯಿದು. ಹಗಲಿನಲ್ಲಿ ಕರಿಚಿರತೆ ಮತ್ತು ಹುಲಿ ಕಾದಾಡಿದರೆ, ಹುಲಿ ಈಸಿಯಾಗಿ ಕರಿಚಿರತೆಯನ್ನು ಸೋಲಿಸಿಬಿಡುತ್ತಂತೆ. ಆದರೆ, ರಾತ್ರಿ ವೇಳೆ ಕರಿಚಿರತೆಯೇ ಹುಲಿಯನ್ನು ಹಿಮ್ಮೆಟ್ಟಿಸುತ್ತಂತೆ. ಕಥೆ ಕೇಳಿದಾಗ ಮೊದಲು ಹೊಳೆದ ಟೈಟಲ್​ ಇದು. ಮತ್ತೆ ಬದಲಿಸಬೇಕು ಅಂತ ಅನ್ನಿಸಲಿಲ್ಲ' ಎಂದು ಮಾಹಿತಿ ನೀಡುತ್ತಾರೆ. ಸಂಗೀತ ನಿರ್ದೇಶಕ ಅಜನೀಷ್​ ಲೋಕನಾಥ್​, "ಮೊದಲ ಬಾರಿ ಆ್ಯಕ್ಷನ್​ ಎಂಟರ್​ಟೇನರ್​ ಚಿತ್ರದಲ್ಲಿ ಕೆಲಸ ಮಾಡಿರುವ ಖುಷಿ' ಹಂಚಿಕೊಂಡರು.

ಹಿಂದಿ ರಿಲೀಸ್​ ಆಗುತ್ತಾ?
"ಬಘೀರ' ಘೋಷಣೆಯಾದಾಗ, ಸಿನಿಮಾ ಬಹುಭಾಷೆಗಳಲ್ಲಿ, ಪ್ಯಾನ್​ ಇಂಡಿಯಾ ರಿಲೀಸ್​ ಆಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಅ. 31ರಂದು ರಿಲೀಸ್​ ಮಾಡಲು ಚಿತ್ರತಂಡ ಪ್ಲಾ$್ಯನ್​ ಮಾಡಿಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಡಾ. ಸೂರಿ, "ಬಾಲಿವುಡ್​ನಲ್ಲಿ "ಭೂಲ್​ ಬುಲಯ್ಯಾ 3', "ಸಿಂಂ ಅಗೇನ್​' ಚಿತ್ರಗಳು ರಿಲೀಸ್​ ಆಗುತ್ತಿವೆ. ದೊಡ್ಡಸ್ತಿಕೆ ತೋರಿಸಲು ಹೋಗಿ ಬಿಡುಗಡೆ ಮಾಡುತ್ತೇವೆ ಅಂದರೆ, ಹಿಂದಿ ಬೆಲ್ಟ್​ನಲ್ಲಿ ಒಂದೂ ಥಿಯೇಟರ್​ ಸಿಗುವುದಿಲ್ಲ. ಹೀಗಾಗಿ ಚಿತ್ರಕ್ಕೆ ಕನ್ನಡ, ತೆಲುಗಿನಲ್ಲಿ ಉತ್ತಮ ರೆಸ್ಪಾನ್ಸ್​ ಸಿಕ್ಕರೆ, ಒಂದು ವಾರದ ಬಳಿಕ ಹಿಂದಿಯಲ್ಲೂ ರಿಲೀಸ್​ ಮಾಡುವ ಪ್ಲಾನ್​ ಇದೆ' ಎಂದು ಹೇಳಿಕೊಂಡರು.

ಎಮೋಷನಲ್​ ಆ್ಯಕ್ಷನ್​ ಥ್ರಿಲ್ಲರ್​ ಚಿತ್ರವಿದು. ಆ್ಯಕ್ಷನ್​ ಎಷ್ಟಿದೆಯೋ ಭಾವನಾತ್ಮಕ ಮತ್ತು ಡ್ರಾಮಾ ಅಂಶಗಳೂ ಸಾಕಷ್ಟಿದೆ. "ಲಕ್ಕಿ' ಬಳಿಕ ಈ ಸಿನಿಮಾ ನಿರ್ದೇಶಿಸುತ್ತಿದ್ದೇನೆ. ಕಳೆದ 10 ವರ್ಷಗಳಿಂದ ಪ್ರಶಾಂತ್​ ನೀಲ್​ ಅವರ ಜತೆ ಕೆಲಸ ಮಾಡಿ ಸಾಕಷ್ಟು ಕಲಿತೆ. ಅವರು ಒಂದು ರೀತಿಯ ಯೂನಿವರ್ಸಿಟಿ ಇದ್ದಂತೆ. ಕೆಲಸ ಮಾಡುವ, ಯೋಚಿಸುವ ರೀತಿಗಳೇ ಬದಲಾಗಿಬಿಡುತ್ತವೆ.
- ಡಾ. ಸೂರಿ, ನಿರ್ದೇಶಕ

ಪ್ರತಿ ವರ್ಷ ಎರಡು, ಮೂರು ಸಿನಿಮಾ ಮಾಡಬೇಕು ಅಂತ ನಾನೂ ಪ್ಲಾನ್​ ಮಾಡುತ್ತೇನೆ. ಆದರೆ, ಸಾಧ್ಯವಾಗಲಿಲ್ಲ. ತುಂಬ ಗ್ಯಾಪ್​ ಆಗುತ್ತಿದೆ. ಈ ಚಿತ್ರದ ವೇಳೆ ಸ್ವಲ್ಪ ಪೆಟ್ಟು ಬಿತ್ತು. ಇದುವರೆಗೂ ಸಣ್ಣ ಪ್ರಯತ್ನ ಅನ್ನುತ್ತಿದ್ದೆ. ಆದರೆ, "ಬಘೀರ' ಒಂದು ದೊಡ್ಡ ಪ್ರಯತ್ನ. ಇದು ಕನ್ನಡ ಚಿತ್ರರಂಗ ಹೆಮ್ಮೆಪಡುವ ಸಿನಿಮಾ.
- ಶ್ರೀಮುರಳಿ, ನಾಯಕ