ಸಿನಿವಾಣಿ

ನಾಳೆಯಿಂದ ಕೃಷ್ಣಾವತಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಈ ದಸರಾಗೆ ಮೊದಲು ಘೋಷಣೆಯಾದ ಚಿತ್ರವೆಂದರೆ, ಅದು ‘ಡಾರ್ಲಿಂಗ್’ ಕೃಷ್ಣ ಅಭಿನಯದ ‘ಶ್ರೀಕೃಷ್ಣಃಜಿಮೇಲ್ ಡಾಟ್​ಕಾಮ್. ಆದರೆ, ‘ಕೋಟಿಗೊಬ್ಬ 3’ ಮತ್ತು ‘ಸಲಗ’ ಚಿತ್ರಗಳ ಪೈಪೋಟಿ ನಡುವೆ ಹೆಚ್ಚು ಸುದ್ದಿಯಾಗಲಿಲ್ಲ. ಈಗ ಚಿತ್ರತಂಡದವರು ಮೊದಲ ಬಾರಿಗೆ, ಚಿತ್ರದ ಬಗ್ಗೆ ಒಂದಿಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಶುಕ್ರವಾರ (ಅ.15) ‘ಶ್ರೀಕೃಷ್ಣಃಜಿಮೇಲ್ ಡಾಟ್​ಕಾಮ್ ಬಿಡುಗಡೆಯಾಗುತ್ತಿದೆ ಎಂಬ ವಿಷಯವನ್ನು ಹಂಚಿಕೊಳ್ಳಲೆಂದೇ ಇತ್ತೀಚೆಗೆ ನಿರ್ವಪಕ ಸಂದೇಶ್ ನಾಗರಾಜ್, ನಿರ್ದೇಶಕ ನಾಗಶೇಖರ್ ಮತ್ತು ಕೃಷ್ಣ ಮಾಧ್ಯಮದವರೆದುರು ಬಂದಿದ್ದರು. ಮೊದಲು ಮಾತನಾಡಿದ ಸಂದೇಶ್ ನಾಗರಾಜ್, ‘ದಸರಾಗೆ ಸಾಲುಸಾಲು ರಜೆ ಇದ್ದು, ಇದು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಲು ಅನುಕೂಲವಾಗುತ್ತದೆ. ಹಾಗಾಗಿ, ವಿಜಯದಶಮಿಯಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಚಿತ್ರಕ್ಕೆ ಎಲ್ಲರ ಪೋ›ತ್ಸಾಹವಿರಲಿ’ ಎಂದರು. ಕೃಷ್ಣ ಸಹ ಮೈಸೂರಿನವರಾದ್ದರಿಂದ ಚಿಕ್ಕಂದಿನಿಂದ ನಿರ್ವಪಕರು ಗೊತ್ತಂತೆ. ‘ಅವರ ಹೋಟೆಲ್ ಗೆ ಹೋಗುತ್ತಿದ್ದೆ. ಈಗ ಅವರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ನಾಗಶೇಖರ್ ನಿರ್ದೇಶನ ಅಂದ ಮೇಲೆ ಕಥೆ, ಹಾಡುಗಳು ಎಲ್ಲ ಚೆನ್ನಾಗಿರುತ್ತವೆ. ಈ ಚಿತ್ರ ಕೂಡ ತುಂಬಾ ಚೆನ್ನಾಗಿದೆ’ ಎನ್ನುತ್ತಾರೆ ಕೃಷ್ಣ. ಇದೊಂದು ವಿಭಿನ್ನ ಕಥೆ ಎನ್ನುವ ನಾಗಶೇಖರ್, ಚಿತ್ರಕಥೆಯನ್ನು ಪ್ರೀತಂ ಗುಬ್ಬಿ ಜತೆಗೆ ಸೇರಿ ಬರೆದಿದ್ದಾರಂತೆ. ‘ಇಲ್ಲಿ ಕೃಷ್ಣಗೆ ಭಾವನಾ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ರಿಷಭ್ ಶೆಟ್ಟಿ ಸ್ವತಃ ತಾವೊಬ್ಬ ನಾಯಕ, ನಿರ್ದೇಶಕರಾಗಿದ್ದರೂ ನಾವು ಕೇಳಿದ ತಕ್ಷಣ ಒಪ್ಪಿಕೊಂಡು ನಟಿಸಿದ್ದಾರೆ. ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.

ಇಂದು ಕೋಟಿಗೊಬ್ಬನ ಆಗಮನ

ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರವು ದಸರಾ ಹಬ್ಬದ ಪ್ರಯುಕ್ತ ಇಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿ ರಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಕೋಟಿಗೊಬ್ಬ 2’ರ ಮುಂದುವರಿದ ಭಾಗವಾಗಿರುವ ಈ ಚಿತ್ರವನ್ನು ಶಿವಕಾರ್ತಿಕ್ ಬರೆದು ನಿರ್ದೇಶಿಸಿದ್ದಾರೆ. ಇನ್ನು, ಸುದೀಪ್ ಸತ್ಯ ಮತ್ತು ಶಿವ ಪಾತ್ರಗಳನ್ನು ಮುಂದುವರಿಸುವುದರ ಜತೆಗೆ ಘೋಸ್ಟ್ ಎಂಬ ಇನ್ನೊಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸುದೀಪ್​ಗೆ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್ ನಟಿಸಿದ್ದು ಮಿಕ್ಕಂತೆ ಅಭಿರಾಮಿ, ರವಿಶಂಕರ್ ಮುಂತಾದವರು ನಟಿಸಿದ್ದಾರೆ. ಸೂರಪ್ಪ ಬಾಬು ನಿರ್ವಿುಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.