ಬೆಂಗಳೂರು: ಪುರಾಣ ಕಾಲದ ಭರತ-ಬಾಹುಬಲಿ ಪಾತ್ರಗಳ ಹಿನ್ನೆಲೆಯಲ್ಲಿ ಆಧುನಿಕ ಭರತ-ಬಾಹುಬಲಿಗಳ ಅವಾಂತರಗಳನ್ನು ಹೇಳುತ್ತ ಮನರಂಜನೆಯ ಜತೆಗೇ ತ್ಯಾಗದ ಮಹತ್ವ ತಿಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಂಜು ಮಾಂಡವ್ಯ.
‘ಇನ್ನೊಬ್ಬರನ್ನು ಯೂಸ್ ಮಾಡಿಕೊಂಡು ಬದುಕುವ ಬದಲು ಇನ್ನೊಬ್ಬರಿಗೆ ಯೂಸ್ ಆಗುವಂತೆ ಬದುಕಬೇಕು’ ಎಂದು ಚಿತ್ರದಲ್ಲಿ ಸಂಭಾಷಣೆಯೊಂದು ಬರುವಷ್ಟರಲ್ಲಿ ಸಿನಿಮಾದ ಕಥೆಯಲ್ಲಿ ಒಂದು ಟ್ವಿಸ್ಟ್ ಕಾಣಿಸಿಕೊಳ್ಳುತ್ತದೆ. ಇಬ್ಬರ ಮನಸ್ಸಲ್ಲೂ ಒಂದು ಬದಲಾವಣೆ ಉಂಟಾಗುತ್ತದೆ. ಇದಕ್ಕೆ ಕಾರಣ ಪುನರ್ಜನ್ಮದ ಬಗ್ಗೆ ತಿಳಿಯುವ ಸಲುವಾಗಿ ವಿದೇಶದಿಂದ ಭಾರತಕ್ಕೆ ಬರುವ ‘ಶ್ರೀ’. ಇಲ್ಲಿ ಸಾರಾ ಹರೀಶ್ ‘ಶ್ರೀ’ ಪಾತ್ರಕ್ಕೆ ಸೂಕ್ತ ಆಯ್ಕೆ. ಮಾಡ್ನೆಸ್ ಹಾಗೂ ತಮ್ಮ ಹೈ-ಫೈ ಭಾಷೆಯಿಂದಲೇ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಸಾರಾ. ಶ್ರೀನಿವಾಸಮೂರ್ತಿ, ಭವ್ಯಾ, ಅಚ್ಯುತ್ಕುಮಾರ್ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸಿದ್ದಾರೆ.
ಅಂತಿಮವಾಗಿ ಪುನರ್ಜನ್ಮದ ಹಿನ್ನೆಲೆ ತಿಳಿಯಲು ಬರುವ ಹುಡುಗಿಗೆ ವಿದೇಶದಲ್ಲಿರುವ ತಂದೆ-ತಾಯಿ ತನ್ನ ನಿಜವಾದ ತಂದೆ-ತಾಯಿ ಅಲ್ಲ ಎಂಬುದು ತಿಳಿಯುತ್ತದೆ. ಬಳಿಕ ಪುನರ್ಜನ್ಮ ಬಿಟ್ಟು ಈ ಜನ್ಮದ ಹಿನ್ನೆಲೆ ತಿಳಿಯಲು ಹೊರಟ ಆಕೆಗೆ ನಿಜವಾದ ಅಪ್ಪ-ಅಮ್ಮ ಸಿಗುತ್ತಾರಾ? ಎಂಬುದೇ ಈ ಚಿತ್ರದಲ್ಲಿನ ಕೌತುಕದ ಅಂಶ. ಈ ಮಧ್ಯೆ ಸಂಬಂಧ-ತ್ಯಾಗದ ಮಹತ್ವ ಸಾರುವ ‘ಶ್ರೀಭರತ ಬಾಹುಬಲಿ’ಯಲ್ಲಿ ಮನರಂಜನೆಗಂತೂ ಕೊರತೆ ಇಲ್ಲ.
| ರವಿಕಾಂತ ಕುಂದಾಪುರ