ಸಿನಿವಾಣಿ

ಡಾನ್ಸಿಂಗ್​ ಕ್ವೀನ್​ ಶ್ರೀಲೀಲಾ; "ಪುಷ್ಪ 2: ದ ರೂಲ್​' ಚಿತ್ರದಲ್ಲಿ "ಕಿಸ್​' ಹುಡುಗಿಯ "ಕಿಸಿಕ್​'!

"ಪುಷ್ಪ : ದ ರೈಸ್​' ಚಿತ್ರದಲ್ಲಿ "ಊ ಅಂಟಾವಾ' ಹಾಡಿನ ಮೂಲಕ ಸಮಂತಾ ರುತ್​ ಪ್ರಭು ಪ್ಯಾನ್​ ಇಂಡಿಯಾ ಸದ್ದು ಮಾಡಿದ್ದರು. ಇದೀಗ ಮೂರು ವರ್ಷಗಳ ಬಳಿಕ "ಪುಷ್ಪ 2: ದ ರೂಲ್​'ನಲ್ಲಿ ಸಮಂತಾ ಜಾಗಕ್ಕೆ ಕನ್ನಡದ ಹುಡುಗಿ ಶ್ರೀಲೀಲಾ ಬಂದಿದ್ದಾರೆ. ಕೆಲ ದಿನಗಳ ಹಿಂದೆಯೇ ಶ್ರೀಲೀಲಾ "ಪುಷ್ಪ 2'ನ ಸ್ಪೆಷಲ್​ ಸಾಂಗ್​ನಲ್ಲಿ ಕುಣಿಯಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದ್ದಾರೂ, ಚಿತ್ರತಂಡ ಆ ಬಗ್ಗೆ ಅಧಿಕೃತ ಘೋಷಣೆ ಮಾಡಿರಲಿಲ್ಲ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್​ ಮತ್ತು ಶ್ರೀಲಿಲಾ ಸೆಟ್​ನಲ್ಲಿ ಡಾನ್ಸ್​ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ತಡ ಮಾಡುವುದು ಬೇಡವೆಂದು ಚಿತ್ರತಂಡ ಶ್ರೀಲೀಲಾ ಲುಕ್​ ರಿವೀಲ್​ ಮಾಡಿದೆ.

ಶ್ರೀಲೀಲಾರನ್ನು ಡಾನ್ಸಿಂಗ್​ ಕ್ವೀನ್​ ಎಂದಿರುವ ಹೊಚ್ಚ ಹೊಸ ಪೋಸ್ಟರ್​ ರಿಲೀಸ್​ ಮಾಡಿರುವ "ಪುಷ್ಪ' ಟೀಮ್​, ಈ ವಿಶೇಷ ಹಾಡನ್ನು " 2024ರ ಕಿಸಿಕ್​ ಸಾಂಗ್​' ಎಂದು ಕರೆದಿದೆ. ಕನ್ನಡದಲ್ಲಿ "ಕಿಸ್​', "ಬೈಟೂ ಲವ್​', ತೆಲುಗಿನ "ಧಮಾಕಾ' ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಶ್ರೀಲೀಲಾ ಸದ್ಯ ಟಾಲಿವುಡ್​ನಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಜತೆಗೆ ತಮ್ಮ ಹೈಪರ್​ ಸ್ಟೆಪ್ಸ್​ ಮೂಲಕ ಉತ್ತಮ ಡಾನ್ಸರ್​ ಆಗಿಯೂ ಗುರುತಿಸಿಕೊಂಡಿದ್ದಾರೆ.

ಹೀಗಾಗಿಯೇ ಅವರನ್ನು "ಪುಷ್ಪ 2' ಸ್ಪೆಷಲ್​ ಸಾಂಗ್​ಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಶ್ರೀಲೀಲಾ ಮತ್ತು ಅಲ್ಲು ಅರ್ಜುನ್​ ನಡುವೆ ಒಂದೊಳ್ಳೆ ಡಾನ್ಸ್​ ಶೋಡೌನ್​ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದಹಾಗೆ ಈ ಸೀಕ್ವೆಲ್​ ಇದೇ ಡಿ. 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.