ಕನ್ನಡದ ನಟಿ ಶ್ರೀಲೀಲಾ ಇತ್ತೀಚೆಗೆ ತೆಲುಗು ಸಿನಿರಂಗದಲ್ಲಿ ಸಿನಿಮಾ ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಮುದ್ದು ಮುಖದ ನಟಿ ಈಗಾಗಲೇ ತಮ್ಮ ಮೊದಲ ತೆಲುಗು ಸಿನಿಮಾ 'ಪೆಳ್ಳಿ ಸಂದಡಿ' ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಇದೀಗ, ಟಾಲಿವುಡ್ನ ಮಾಸ್ ಮಹಾರಾಜ ನಟ ರವಿತೇಜ ಅವರ 'ಧಮಾಕಾ' ಸಿನಿಮಾದಲ್ಲಿ ಶ್ರೀಲೀಲಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಪ್ರೇಮಿಗಳ ದಿನದ ವಿಶೇಷವಾಗಿ ಇಂದು ಈ ಸಿನಿಮಾದ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಲಾಗಿದೆ.
ಈ ಪೋಸ್ಟರ್ನಲ್ಲಿ ನಟ ರವಿತೇಜ ಹಾಗೂ ನಟಿ ಶ್ರೀಲೀಲಾ ಮಾತನಾಡಿಕೊಳ್ಳುತ್ತಿರುವ ಒಂದು ಫೋಟೋ ಕಾಣಿಸಿಕೊಂಡಿದೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ ತೊಡಗಿದೆ. ಮತ್ತೊಂದೆಡೆ, ನಟಿ ಶ್ರೀಲೀಲಾ ಅವರು ನಟ ಜೂ.ಎನ್.ಟಿ.ಆರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಅದೇನೇ ಇರಲಿ, ನಟಿ ಶ್ರೀ ಲೀಲಾ ತೆಲುಗಿನಲ್ಲಿ ಇಷ್ಟು ಬ್ಯೂಸಿಯಾಗಿರುವುದು ಅವರ ಅಭಿಮಾನಿಗಳಿಗೂ ಸಂತಸ ತಂದಿದೆ.