ಮುಂಬೈ: 'ದಿಲ್ ಚಾಹ್ತಾ ಹೇ' ಚಿತ್ರದ ಮೂಲಕ ಸಾಕಷ್ಟು ಜನಪ್ರಿಯರಾದವರು ಬಾಲಿವುಡ್ ನಟಿ ಸೋನಾಲಿ ಕುಲಕರ್ಣಿ. ಗಿರೀಶ್ ಕಾರ್ನಾಡ್ ನಿರ್ದೇಶನದ ಕನ್ನಡದ 'ಚೆಲುವಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸೋನಾಲಿ ಕುಲಕರ್ಣಿ, ಆ ನಂತರ ಹಿಂದಿಯಲ್ಲಿ ಸಾಕಷ್ಟು ಜನಪ್ರಿಯರಾದರು. ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಸೋನಾಲಿ, ಈಗ ಒಂದು ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದಾರೆ ಮತ್ತು ಕ್ಷಮೆಯನ್ನೂ ಕೇಳಿದ್ದಾರೆ.
ಇತ್ತೀಚೆಗೆ ಮಾತನಾಡುವ ಸಂದರ್ಭದಲ್ಲಿ ಭಾರತದ ಹೆಣ್ಣುಮಕ್ಕಳು ಸೋಮಾರಿಗಳು ಎಂಬರ್ಥದಲ್ಲಿ ಅರು ಮಾತನಾಡಿದ್ದರು. 'ಭಾರತದಲ್ಲಿ ಬಹುತೇಕ ಹೆಣ್ಣುಮಕ್ಕಳು ಸೋಮಾರಿಗಳು ಎಂಬುದನ್ನು ಕೆಲವೊಮ್ಮೆ ಮರೆತುಬಿಡುತ್ತೇವೆ. ಅವರಿಗೆ ಸ್ವಂತ ಮನೆಯಿರುವ, ಚೆನ್ನಾಗಿ ಹಣ ಸಂಪಾದಿಸುವ, ಆಗಾಗ ಸಂಬಳದಲ್ಲಿ ಬಡ್ತಿ ಪಡೆಯುವ ಪತಿ ಅಥವಾ ಬಾಯ್ಫ್ರೆಂಡ್ ಬೇಕು. ಅಂತಹ ಹುಡುಗರ ಹುಡುಕಾಟದಲ್ಲಿ ಹುಡುಗಿಯರು ತಮ್ಮ ನಿಲುವನ್ನೇ ಮರೆತುಬಿಡುತ್ತಾರೆ. ಬಳಿಕ ಭವಿಷ್ಯದಲ್ಲಿ ಅವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿಯೇ ಹೆಣ್ಣುಮಕ್ಕಳು ಸ್ವಯಂ ಅವಲಂಬಿತರಾಗಲು ಎಲ್ಲರೂ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ಆ ಮೂಲಕ ಮನೆಯ ರ್ಖಚನ್ನು ಜತೆಯಲ್ಲಿರುವವರ ಜತೆ ಹಂಚಿಕೊಳ್ಳುವಷ್ಟು ಅರ್ಹರಾಗಬಹುದು' ಎಂದು ಹೇಳಿಕೆ ನೀಡಿದ್ದರು.
ಸೋನಾಲಿ ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುವುದರ ಜತೆಗೆ ವಿವಾದಕ್ಕೀಡಾಯ್ತು. ಕೆಲವರು ಸೋನಾಲಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರೆ, ಕೆಲವರು ಅವರ ಪರ ನಿಂತರು. ಅಂತಿಮವಾಗಿ, ಸೋನಾಲಿ ತಮ್ಮ ಮಾತುಗಳಿಗೆ ಕ್ಷಮೆ ಕೇಳಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ತಮ್ಮ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದ್ದಾರೆ. ತಮ್ಮ ಹೇಳಿಕೆ ಮಹಿಳೆಯರ ಪರವಾಗಿತ್ತೇ ಹೊರತು, ಅನ್ಯಥಾ ಭಾವಿಸಬಾರದು ಎಂದು ಹೇಳಿದ್ದಾರೆ.