ಸಿನಿವಾಣಿ

ರಾಬರ್ಟ್​ಗೆ ಜತೆಯಾದ ಸೋನಲ್

malli

ಬೆಂಗಳೂರು:  ‘ರಾಬರ್ಟ್’ಗೆ ಈಗ ಕರಾವಳಿ ಬೆಡಗಿ ಜತೆಯಾಗಿರುವ ಸುದ್ದಿ ಬಹಿರಂಗಗೊಂಡಿದೆ. ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದಲ್ಲಿ ನಟಿ ಸೋನಲ್ ಮೊಂತೆರೊ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಾಬರ್ಟ್ ಬಳಗದಲ್ಲಿ ಸೋನಲ್ ಮೊಂತೆರೊ ಕಾಣಿಸಿಕೊಂಡು ಕೆಲವು ದಿನಗಳಾಗಿದ್ದರೂ ಆ ವಿಷಯವನ್ನು ಚಿತ್ರತಂಡ ಗುಟ್ಟಾಗಿರಿಸಿತ್ತು.

ಆದರೆ ಈಗ ಅದು ಬಹಿರಂಗಗೊಂಡಿದ್ದರೂ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಹಸ್ಯವಾಗಿಯೇ ಉಳಿದಿದೆ. ‘ಈ ಸಿನಿಮಾದಲ್ಲಿ ನಾನು ಒಂದು ಅತಿ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನಗಿಲ್ಲಿ ಪ್ರೇಕ್ಷಕರ ನೆನಪಲ್ಲಿ ಪೂರ್ತಿಯಾಗಿ ಉಳಿಯುವಂಥ ಪಾತ್ರ ಸಿಕ್ಕಿದೆ. ನನ್ನ ಪಾತ್ರದ ಶೂಟಿಂಗ್ ಕೂಡ ಮುಗಿದುಹೋಗಿದೆ’ ಎನ್ನುವ ಸೋನಲ್, ಅದು ಯಾವ ಪಾತ್ರ ಏನು ಎತ್ತ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಈ ಮೂಲಕ ರಾಬರ್ಟ್ ಬಳಗಕ್ಕೆ ಮೂವರು ನಾಯಕಿಯರು ಸೇರಿಕೊಂಡಂತಾಗಿದೆ.

ರಾಬರ್ಟ್​ಗೆ ನಾಯಕಿಯಾಗಿ ಆಶಾ ಭಟ್ ಈಗಾಗಲೇ ಆಯ್ಕೆ ಆಗಿದ್ದರು. ಬಳಿಕ ನಟಿ ತೇಜಸ್ವಿನಿ ಪ್ರಕಾಶ್ ಕೂಡ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ಇದೀಗ ಸೋನಲ್ ಕೂಡ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿರುವುದರಿಂದ ಚಿತ್ರದ ಕುರಿತ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

‘ರಾಬರ್ಟ್’ ಚಿತ್ರದ ಶೂಟಿಂಗ್ ಮುಗಿಸಿಕೊಂಡಿರುವ ಸೋನಲ್, ಜಯತೀರ್ಥ ಅವರ ನಿರ್ದೇಶನದ ‘ಬನಾರಸ್’ ಸಿನಿಮಾದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. 2015ರಲ್ಲಿ ತೆರೆ ಕಂಡ ‘ಎಕ್ಕ ಸಕ’ ತುಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿರುವ ಸೋನಲ್, ಯೋಗರಾಜ್ ಭಟ್ ನಿರ್ದೇಶನ ‘ಪಂಚತಂತ್ರ’ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಇದೀಗ ಭಟ್ಟರ ನಿರ್ದೇಶನದ ‘ಗಾಳಿಪಟ 2’ ಚಿತ್ರದಲ್ಲೂ ನಾಯಕಿಯರಲ್ಲಿ ಒಬ್ಬರಾಗಿ ಆಯ್ಕೆ ಆಗಿರುವ ಇವರು, ಉಪೇಂದ್ರ ಅಭಿನಯದ ‘ಬುದ್ಧಿವಂತ 2’ ಶೂಟಿಂಗ್​ನಲ್ಲೂ ಬಿಜಿ ಆಗಿದ್ದಾರೆ. ಇವಲ್ಲದೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಸೋನಲ್, ಸದ್ಯ ಸಾಕಷ್ಟು ಬೇಡಿಕೆಯಲ್ಲಿದ್ದಾರೆ.

ನನ್ನ ಕರಿಯರ್​ನಲ್ಲಿ ಇಷ್ಟು ಬೇಗ ದರ್ಶನ್ ಅವರ ಜತೆ ನಟಿಸುವ ಅವಕಾಶ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ. ರಾಬರ್ಟ್ ಸೆಟ್​ನಲ್ಲಿ ಅವರು ನನ್ನನ್ನು ಹೊಸಬಳ ಥರ ನೋಡಿಲ್ಲ. ದರ್ಶನ್ ಹಾಗೂ ತರುಣ್ ಸುಧೀರ್ ಇಬ್ಬರೂ ತುಂಬ ಸಪೋರ್ಟಿವ್ ಆಗಿದ್ದರು. | ಸೋನಲ್ ಮೊಂತೆರೊ ನಟಿ