ಸಿನಿವಾಣಿ

ಸೋನಾಕ್ಷಿಗೆ ಮನೆಯಲ್ಲಿರುವುದು ಅಭ್ಯಾಸವಾಗಿ ಹೋಗಿದೆಯಂತೆ

ಮುಂಬೈ: ಒಂದು ಕಾಲದಲ್ಲಿ ಸತತ ಬಿಜಿಯಾಗಿದ್ದು ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದ ಸೋನಾ, ಲಾಕ್​ಡೌನ್​ ನಂತರ ಮನೆಯಲ್ಲಿರುವುದು ಅಭ್ಯಾಸವಾಗಿ ಹೋಗಿದೆಯಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಬರೆದುಕೊಂಡಿರುವ ಅವರು, "ಇವತ್ತಿಗೆ ಯಾವ ಸ್ಥಿತಿಗೆ ಬಂದಿದ್ದೇನೆಂದರೆ, ಮನೆಯಲ್ಲಿ ಇರುವುದು ಅಭ್ಯಾಸವಾಗಿ ಹೋಗಿದೆ' ಎಂದು ಹೇಳಿದ್ದಾರೆ. ಸೋನಾ ಅವರ ಈ ಪೋಸ್ಟ್​ಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿದೆ.

ಮೊದಲ ಲಾಕ್​ಡೌನ್​ ಮುಗಿದು, ಬಾಲಿವುಡ್​ನ ಹಲವು ಜನಪ್ರಿಯ ನಟಿಯರು ಚಿತ್ರೀಕರಣಕ್ಕೆ ಹಾಜರಾದರೂ, ಅದ್ಯಾಕೋ ಸೋನಾ ಸಿನ್ಹಾ ಮಾತ್ರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿಲ್ಲ. 2019ರಲ್ಲಿ ಸೋನಾ ಅಭಿನಯದ ಆರು ಚಿತ್ರಗಳು ಬಿಡುಗಡೆಯಾಗಿದ್ದವು. ಹಾಗೆ ಬಿಡುಗಡೆಯಾದ ಕೊನೆಯ ಚಿತ್ರ ಎಂದರೆ ಅದು, ಸಲ್ಮಾನ್​ ಖಾನ್​ ಅಭಿನಯದ "ದಬಾಂಗ್​ 3'. ಆ ನಂತರ "ಭುಜ್​' ಎಂಬ ಚಿತ್ರದಲ್ಲಿ ಸೋನಾ ಅಭಿನಯಿಸಿದ್ದಾರಾದರೂ, ಆ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಕಳೆದ ವರ್ಷವೇ ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್​ನಿಂದಾಗಿ ಚಿತ್ರವನ್ನು ಇದೇ ಆಗಸ್ಟ್​ 15ರಂದು ಡಿಸ್ನಿ ಹಾಟ್​ಸ್ಟಾರ್​ ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ.

ಈ ಮಧ್ಯೆ, ಸೋನಾ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಳ್ಳದ ಕಾರಣ, ಕಳೆದ ಒಂದು ವರ್ಷದಿಂದ ಮನೆಯಲ್ಲೇ ಇರುವಂತಾಗಿದೆ.