ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ನಲ್ಲಿ ಸಾಕಷ್ಟು ಬೆಳವಣಿಗೆಗಳು, ಬದಲಾವಣೆಗಳಾದವು. ಅದರಲ್ಲೂ ಸಿನಿಮಾ ಹಿನ್ನೆಲೆಯಿಂದ ಬಂದ ಸ್ಟಾರ್ ಕುಡಿಗಳನ್ನು ನೋಡುವ ದೃಷ್ಟಿಯೇ ಬೇರೆಯಾಯಿತು. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಆಹಾರವಾದರು. ಒಂದಷ್ಟು ಸ್ಟಾರ್ಗಳು ಕಮೆಂಟ್ ಬಾಕ್ಸ್ ಬ್ಲಾಕ್ ಮಾಡಿದರೆ, ಇನ್ನು ಕೆಲವರು ಜಾಲತಾಣವನ್ನೇ ಬಿಟ್ಟು ಹೊರನಡೆದರು. ಅದರಲ್ಲಿ ಸೋನಾಕ್ಷಿ ಸಿನ್ಹಾ ಸಹ ಒಬ್ಬರು. ಇದೀಗ ಇದೇ ನಟಿ ‘ಆಗಿದ್ದು ಒಳ್ಳೆಯದೇ ಆಗಿದೆ’ ಎಂದಿದ್ದಾರೆ.
ಎರಡು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಿಂದ ದೂರವಾಗಿದ್ದ ಸೋನಾಕ್ಷಿ, ಈ ಅವಧಿಯಲ್ಲಿ ಸಾಕಷ್ಟು ಕಲಿತಿದ್ದಾರಂತೆ. ಜಾಲತಾಣ ಕೈಬಿಟ್ಟಿದ್ದಕ್ಕೆ ಜೀವನವೇ ಬದಲಾಗಿದೆಯಂತೆ. ‘ಟ್ವಿಟರ್ ಎಂಬುದು ನೆಗೆಟಿವಿಟಿಯ ಮೈದಾನವಿದ್ದಂತೆ’ ಎನ್ನುವ ಅವರು, ಆ ಮೈದಾನ ಬಿಟ್ಟು ಹೊರಬಂದ ನಂತರ ನೆಮ್ಮದಿಯಾಗಿದ್ದಾರಂತೆ. ‘ನನ್ನ ಜೀವನ ಈ ಹಿಂದಿನಂತಿಲ್ಲ. ತುಂಬ ತುಂಬ ಬದಲಾಗಿದೆ. ತುಂಬ ಸ್ವಚ್ಛವಾಗಿದೆ. ನನ್ನ ವಿರುದ್ಧ ಯಾವುದೇ ಅಪವಾದಗಳಿಲ್ಲ.
ಇನ್ಸ್ಟಾ ಗ್ರಾಂ ಕಮೆಂಟ್ ಬಾಕ್ಸ್ ಸಹ ಬ್ಲಾಕ್ ಮಾಡಿರುವುದರಿಂದ ನೆಗೆಟಿವಿಟಿಯ ಸುಳಿವೇ ಇಲ್ಲ’ ಎಂದಿದ್ದಾರೆ ಸೋನಾಕ್ಷಿ. ಅದೇ ರೀತಿ ಇಂಡಸ್ಟ್ರಿ ಒಳಗಿನವ, ಹೊರಗಿನವ ಎಂಬ ವಾದಕ್ಕೂ ಉತ್ತರಿಸುವ ಅವರು, ‘ಸಿನಿಮಾದವರೆಂಬ ಕಾರಣಕ್ಕೆ ಬರೀ ನಿಂದನೆಗಳನ್ನು ಕೇಳಲು ಇಷ್ಟಪಡುವುದಿಲ್ಲ. ಹಾಗಂತ ಸಿನಿಮಾ ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾ? ಇಂದು ಸಿನಿಮಾರಂಗದಲ್ಲಿ ಒಳಗಿನವರಿಗಿಂತ ಹೊರಗಿನವರೇ ಹೆಚ್ಚಾಗಿದ್ದಾರೆ. ಈ ಸ್ವಜನಪಕ್ಷಪಾತವನ್ನೂ ಅವರೇ ಬೆಳೆಸುತ್ತಿದ್ದಾರೆ’ ಎಂದಿದ್ದಾರೆ.