ಅದ್ಯಾವ ಘಳಿಗೇಲಿ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಸೋನಾಕ್ಷಿ ಸಿನ್ಹಾ, ‘ರಾಮಾಯಣ’ದ ಕುರಿತಾದ ಪ್ರಶ್ನೆಗೆ ಎಡವಟ್ಟು ಮಾಡಿಕೊಂಡರೋ, ಅಲ್ಲಿಂದ ಅವರ ಗ್ರಹಚಾರವೇ ಸರಿ ಇಲ್ಲ. ಕಳೆದ ಕೆಲವು ತಿಂಗಳುಗಳಿಂದ, ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಷಯವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೇ ಇರುವ ಸೋನಾಕ್ಷಿ, ಈಗ ತಮ್ಮ ಕಾಲೆಳೆಯುತ್ತಿರುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಇತ್ತೀಚೆಗೆ ಮತ್ತೆ ಯಾರೋ, ‘ಆಂಜನೇಯ ಸಂಜೀವಿನಿ ಪರ್ವತ ತಂದಿದ್ದು ಯಾರ ಚಿಕಿತ್ಸೆಗಾಗಿ?’ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.
ಅಸಲಿಗೆ, ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಸೋನಾಕ್ಷಿಗೆ ಕೇಳಿದ್ದು ಇದೇ ಪ್ರಶ್ನೆಯನ್ನ. ಆ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿಲ್ಲದೆ ಲೈಫ್ಲೈನ್ ಬಳಸಿಕೊಂಡಿದ್ದ ಸೋನಾಕ್ಷಿ, ಎಲ್ಲರ ಟೀಕೆಗೂ ಗುರಿಯಾಗಿದ್ದರು. ಈಗ ಮತ್ತೆ ಅದೇ ಪ್ರಶ್ನೆ ಅವರ ಎದುರಾದಾಗ, ಸೋನಾಕ್ಷಿ ತಲೆ ಕೆಡಿಸಿಕೊಳ್ಳಲಿಲ್ಲ. ‘ಬಹಳಷ್ಟು ಜನರಿಗೆ ರಾಮಾಯಣದ ಕುರಿತಾಗಿ ಹಲವು ಪ್ರಶ್ನೆಗಳಿವೆ. ಹೇಗೂ ದೂರದರ್ಶನದಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ನೋಡಿ, ಉತ್ತರ ತಿಳಿದುಕೊಳ್ಳೀ. ಜೈ ಭಜರಂಗ ಬಲಿ’ ಎಂದು ಉತ್ತರಿಸುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಇದಕ್ಕೂ ಮುನ್ನ ‘ಮಹಾಭಾರತ’ದ ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ಸಹ ಸೋನಾಕ್ಷಿ ಹೆಸರು ಎತ್ತದೆ ಕಿಚಾಯಿಸಿದ್ದರು, ‘ಪೌರಾಣಿಕ ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವುದರಿಂದ, ಪುರಾಣದ ಬಗ್ಗೆ ಗೊತ್ತಿಲ್ಲದವರಿಗೆ ಅನುಕೂಲವಾಗುತ್ತದೆ’ ಎಂದು ಕಾಲೆಳೆದಿದ್ದರು. ಇದನ್ನು ಕೇಳಿ ಸಿಟ್ಟಾದ ಸೋನಾಕ್ಷಿ ಅಪ್ಪ ಶತ್ರುಘ್ನ ಸಿನ್ಹಾ, ತಮ್ಮದೇ ರೀತಿಯಲ್ಲಿ ಮುಕೇಶ್ ಖನ್ನಾ ಬೆವರಿಳಿಸಿದ್ದರು. ಈಗ ತಮ್ಮ ಕಾಲೆಳೆಯುತ್ತಿರುವವರಿಗೆ ದೂರದರ್ಶನ ನೋಡಿ ಎಂದು ಸೋನಾಕ್ಷಿ ಬೆವರಿಳಿಸಿದ್ದಾರೆ. ಇನ್ನಾದರೂ ಇವೆಲ್ಲಾ ನಿಲ್ಲುತ್ತದಾ ಎಂಬುದನ್ನು ನೋಡಬೇಕು.