ಸಿನಿವಾಣಿ

ಸ್ಟಾರ್​ ಕಳಕಳಿ: ಸೋಷಿಯಲ್​ ಡಿಸ್ಟನ್ಸ್​ ಜತೆಯಲ್ಲೇ ಸೋಷಿಯಲ್​ ಸರ್ವೀಸ್​

ಇಡೀ ಜಗತ್ತನ್ನೇ ಕಾಡುತ್ತಿರುವ ಕರೊನಾ ಎಂತೆಂಥವರನ್ನೂ ಗೃಹಬಂಧನಕ್ಕೆ ಒಳಪಡಿಸಿದೆ. ‘ಕೋವಿಡ್ 19’ ಹೊಡೆತಕ್ಕೆ ಹಾಲಿವುಡ್, ಬಾಲಿವುಡ್, ಸ್ಯಾಂಡಲ್​ವುಡ್ ಮಾತ್ರವಲ್ಲದೆ ಕಾಲಿ, ಟಾಲಿ, ಮಾಲಿ ಸೇರಿ ಎಲ್ಲ ‘ವುಡ್’ಗಳೂ ಮರಗಟ್ಟಿ ಹೋಗಿವೆ. ‘ಇನ್ನೂ ಹತ್ತಿರ, ಹತ್ತಿರ ಬರುವೆಯಾ ...’ ಎಂದು ಗುನುಗುವವರು ಸಹ ‘ನಡುವೆ ಅಂತರವಿರಲಿ’ ಎಂಬಂತಾಗಿದೆ. ಅರ್ಥಾತ್, ಕಣ್ಣಿಗೆ ಕಾಣದ ಕರೊನಾ ವೈರಸ್ ಯಾರು ಕಣ್ಣಿಗೆ ಕಾಣಿಸಿದರೂ ‘ಸೋಷಿಯಲ್ ಡಿಸ್ಟೆನ್ಸ್’ ಕಾಪಾಡಿಕೊಳ್ಳಬೇಕು ಎಂಬುದನ್ನು ಜಾಗೃತಗೊಳಿಸುತ್ತಲೇ ಇದೆ. ವಿಶೇಷವೆಂದರೆ, ಅಂಥದ್ದೊಂದು ಜಾಗೃತಿಯನ್ನು ಸಿನಿಮಾ ತಾರೆಯರೂ ಕೈಗೊಳ್ಳಲಾರಂಭಿಸಿದ್ದಾರೆ. ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಂಡರೂ ಸೋಷಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳು ಹಾಗೂ ಸಿನಿಮಾಪ್ರಿಯರಿಗೆ ಹತ್ತಿರವಾಗುತ್ತಿರುವ ಸ್ಯಾಂಡಲ್​ವುಡ್​ನ ನಟ-ನಟಿಯರು ಕರೊನಾ ಕುರಿತು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ‘ಸೋಷಿಯಲ್ ಕಾಸ್’ನಲ್ಲೂ ತೊಡಗಿಸಿಕೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಚಿತ್ರೋದ್ಯಮ ಸ್ಥಗಿತಗೊಂಡಿರುವ ಕಾರಣ ಸಿನಿಮಾ ಚಟುವಟಿಕೆಗಳಿಂದ ಬಿಡುವಾಗಿರುವ ನಟ-ನಟಿಯರಲ್ಲಿ ಅನೇಕರು ತಂತಮ್ಮ ಊರುಗಳನ್ನು ಸೇರಿ ಸಿನಿಮಾ ಕುರಿತ ಬರವಣಿಗೆ ಹಾಗೂ ಇತ್ಯಾದಿ ಮೂಲಕ ‘ವರ್ಕ್ ಫ್ರಮ್ ಹೋಮ್​ಗೂ ಕೈಜೋಡಿಸಿದ್ದಾರೆ. ಇನ್ನು ಕೆಲವರು ಜನತಾ ಕರ್ಫ್ಯೂಗೂ ಬೆಂಬಲ ಸೂಚಿಸಿದ್ದಾರೆ.

‘ಜನತಾ ಕರ್ಫ್ಯೂ’ಗೆ ‘ರಾಜತ್ರಯ’ರ ಬೆಂಬಲ

ಕರೊನಾ ಸೋಂಕು ತಗುಲದಂತೆ ಹಾಗೂ ಅದು ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನೀಡಿರುವ ‘ಜನತಾ ಕರ್ಫ್ಯೂ’ ಕರೆಗೆ ಡಾ. ರಾಜಕುಮಾರ್ ಅವರ ಪುತ್ರತ್ರಯರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಕೂಡ ಬೆಂಬಲ ಸೂಚಿಸಿದ್ದಾರೆ. ‘ವೈದ್ಯೋ ನಾರಾಯಣೋ ಹರಿಃ ... ಮಾ. 22ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ನಡೆಯಲಿರುವ ಜನತಾ ಕರ್ಫ್ಯೂಗೆ ನಮ್ಮ ಬೆಂಬಲ. ದೇಶದ ಕರೆಗೆ ಸಹಕರಿಸೋಣ ...’ ಎಂಬುದಾಗಿ ತಮ್ಮ ಸಹೋದರರ ಭಾವಚಿತ್ರಗಳೊಂದಿಗೆ ರಾಘವೇಂದ್ರ ರಾಜಕುಮಾರ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ವೈದ್ಯರಿಗೆ ಪುನೀತ್ ಪವರ್

ಕರೊನಾದಂಥ ಸಾಂಕ್ರಾಮಿಕ ಮಹಾಮಾರಿ ಎಗ್ಗಿಲ್ಲದೆ ವ್ಯಾಪಿಸುತ್ತಿದ್ದರೂ ತಮ್ಮ ಜೀವದ ಹಂಗು ತೊರೆದು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ನಿಮಗಾಗಿ ನಾವು ಕೆಲಸದಲ್ಲಿದ್ದೇವೆ, ನಮಗಾಗಿ ನೀವು ಮನೆಯಲ್ಲೇ ಇರಿ’ ಎಂದು ಕರೊನಾ ಸೋಂಕಿತ ಹಾಗೂ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಹಲವಾರು ವೈದ್ಯರೂ ಕೋರಿಕೊಂಡಿದ್ದಾರೆ. ಅಂಥ ವೈದ್ಯರಿಗೆ ಈಗ ಚಿತ್ರರಂಗದಿಂದಲೂ ‘ಪವರ್’ ಸಿಗುತ್ತಿದೆ. ರಿಸ್ಕ್ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿರುವ ವೈದ್ಯರ ಪರವಾಗಿ ಪವರ್ ಸ್ಟಾರ್ ಪುನೀತ್ ರಾಜಕಮಾರ್ ್ಪ್ಟಡಟಛಟ್ಚಠಿಟ್ಟಠ ಎಂಬ ಚಾಲೆಂಜ್ ಆರಂಭಿಸಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವ ಎಲ್ಲರೂ ಕರೊನಾ ‘ಯೋಧ’ರಂತೆ, ಅವರನ್ನು ನಾವೆಲ್ಲ ಒಗ್ಗಟ್ಟಿನಿಂದ ಬೆಂಬಲಿಸೋಣ. ಸಾಂಕ್ರಾಮಿಕವಾಗಿರುವ ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ಅವರಿಗೇ ಅಪಾಯ ಹೆಚ್ಚು. ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಹ್ಯಾಷ್​ಟ್ಯಾಗ್ ಹಂಚಿಕೊಳ್ಳಿ’ ಎಂಬುದಾಗಿ ಪುನೀತ್ ರಾಜಕುಮಾರ್ ಕೋರಿದ್ದಾರೆ. ಇದನ್ನು ನಟ ಧನಂಜಯ್ ಹಂಚಿಕೊಂಡಿದ್ದಾರೆ. ಜತೆಗೆ ಪುನೀತ್ ಅವರ ಅಭಿಮಾನಿಗಳೂ ಚಾಲೆಂಜ್​ಗೆ ಕೈಜೋಡಿಸಿ, ವೈದ್ಯರಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.

ಕರೊನಾ ಉಳ್ಳವರ ‘ಹಾರಾಟ’ದಿಂದ ಹರಡುತ್ತಿರುವ ರೋಗವಾದರೂ ಇದರಿಂದ ಹೆಚ್ಚಿನ ಸಂಕಟ ಅನುಭವಿಸುತ್ತಿರುವುದು ದಿನಗೂಲಿ ಕಾರ್ವಿುಕರು ಹಾಗೂ ಜೀವನೋಪಾಯಕ್ಕಾಗಿ ದೈನಂದಿನ ಸಣ್ಣಪುಟ್ಟ ವ್ಯಾಪಾರ ಹಾಗೂ ಕೆಲಸಗಳನ್ನು ಅವಲಂಬಿಸಿರುವವರು. ಅಂಥವರಿಗೆ ನಾವೆಲ್ಲ ನೆರವಾಗಬೇಕಾದ ಅಗತ್ಯವಿದೆ ಎಂದು ನಟ ಅನಿರುದ್ಧ ಹಾಗೂ ನಟಿ ಹರಿಪ್ರಿಯಾ ಕರೆ ನೀಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ಕರೊನಾ ಹರಡದಂತೆ ಎಲ್ಲವೂ ಬಂದ್ ಆಗಿರುವುದು ತಿಳಿದೇ ಇದೆ. ಇಂಥ ಸಮಯದಲ್ಲಿ ತೀವ್ರ ತೊಂದರೆ ಅನುಭವಿಸುವವರು ದಿನಗೂಲಿಯವರು. ಆ ದಿನ ದುಡಿದರಷ್ಟೇ ಅಂದಿನ ಊಟ ಎಂಬಂತಿರುತ್ತದೆ ಅವರ ಜೀವನಶೈಲಿ. ಆದ್ದರಿಂದ ದಯವಿಟ್ಟು ನಿಮಗೆ ಗೊತ್ತಿರುವ ಅಥವಾ ಅಕ್ಕಪಕ್ಕ ಇರುವ ಅಂಥ ಬಡಕುಟುಂಬಕ್ಕೆ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ. ಅನುಕೂಲ ಇದ್ದವರು ಒಂದೆರೆಡು ವಾರಕ್ಕಾಗುವಷ್ಟು ರೇಷನ್ ನೀಡಿ. ಈ ಪೋಸ್ಟ್ ನೋಡಿದವರು ಕನಿಷ್ಠ ಒಂದು ಕುಟುಂಬಕ್ಕಾದರೂ ಸಹಾಯ ಮಾಡುವಿರಿ ಎಂಬ ನಂಬಿಕೆಯಲ್ಲಿ ...’ ಎಂಬುದಾಗಿ ಅನಿರುದ್ಧ ಕೋರಿಕೊಂಡಿದ್ದಾರೆ. ‘ಎಷ್ಟೋ ಜನರಿಗೆ ಏನು ನಡೆಯುತ್ತಿದೆ ಎಂಬುದೇ ಗೊತ್ತಿರಲಿಕ್ಕಿಲ್ಲ. ಆ ಪೈಕಿ ದಿನಗೂಲಿ ಕಾರ್ವಿುಕರು, ಮನೆಗೆಲಸದವರು, ಸ್ಲಮ್ಲ್ಲಿರುವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದನ್ನು ನಾವು ಊಹಿಸುವುದೂ ಕಷ್ಟ. ಅಂಥ ಒಂದೆರಡು ಕುಟುಂಬಗಳನ್ನು ಗುರುತಿಸಿ ನೆರವಾಗಿ. ಅತಿ ಅಗತ್ಯವಿರುವ ದಿನಸಿ, ಸ್ಯಾನಿಟೈಸರ್ಸ್ ನೀಡಿ. ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆಯೂ ಅವರಲ್ಲಿ ಅರಿವು ಮೂಡಿಸಿ. ನಾನು ನನ್ನ ಕಡೆಯಿಂದಲೂ ಸ್ವಲ್ಪ ಮಾಡುತ್ತಿದ್ದೇನೆ. ತಾವೆಲ್ಲರೂ ತಮ್ಮಿಂದಾದಷ್ಟು ಮಾಡಿ’ ಎಂಬುದಾಗಿ ಹರಿಪ್ರಿಯಾ ಕೇಳಿಕೊಂಡಿದ್ದಾರೆ.

ಹರ್ಷಿಕಾ ಕ್ಲೀನ್ ಹ್ಯಾಂಡ್ ಚಾಲೆಂಜ್

‘ಕ್ಲೀನ್ ಹ್ಯಾಂಡ್’ ಚಾಲೆಂಜ್ ಸ್ವೀಕರಿಸಿರುವ ಬಾಲಿವುಡ್​ನ ಸಿನಿಮಾ ತಾರೆಯರು, ತಮ್ಮ ಸೋಷಿಯಲ್ ಮೀಡಿಯಾ ಫಾಲೋವರ್ಸ್​ಗೂ ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಜಾಲತಾಣಗಳಲ್ಲಿನ ತಂತಮ್ಮ ಖಾತೆಗಳಲ್ಲಿ ಕೈ ತೊಳೆದುಕೊಳ್ಳುತ್ತಿರುವ ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿ, ಜಾಗೃತಿಗೆ ಮುಂದಾಗಿದ್ದಾರೆ. ಅದೇ ರೀತಿ ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ಸಹ ಚಾಲೆಂಜ್ ಸ್ವೀಕರಿಸಿ ಹ್ಯಾಂಡ್​ವಾಶ್ ಮಾಡಿಕೊಳ್ಳುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕರೊನಾ ವೈರಸ್ ಮುಕ್ತಿಗೆ ಆಗಾಗ ಕೈ ತೊಳೆಯುವುದೊಂದೇ ಮದ್ದು. ಹಾಗಾಗಿ ಸಾಧ್ಯವಾದಷ್ಟು ಶುಚಿಯಾಗಿರಿ, ಜನರಿಂದ ಅಂತರ ಕಾಯ್ದುಕೊಳ್ಳಿರಿ ಎಂದಿದ್ದಾರೆ. ಕೆಲ ದಿನಗಳ ಹಿಂದೆ ನಟಿ ರಾಗಿಣಿ ದ್ವಿವೇದಿ, ಕರೊನಾ ಹರಡದಂತೆ ತಡೆಗಟ್ಟಲು ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸುವಂತೆ ಕೋರಿ ಜಾಗೃತಿ ಮೂಡಿಸಿದ್ದರು.

ನಾವೂ- ನೀವೂ ಕೈಜೋಡಿಸೋಣ

‘ಪರಿಸ್ಥಿತಿ ತುಂಬ ಹದಗೆಟ್ಟಿದ್ದು ನಾವೆಲ್ಲ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಸಂದರ್ಭ ಬಂದಿದೆ. ಇಡೀ ಜಗತ್ತೇ ಕಷ್ಟದಲ್ಲಿದೆ, ಎಲ್ಲರೂ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಮತ್ತು ವೈದ್ಯರು ಮಾತ್ರ ಕೆಲಸ ಮಾಡಿದರೆ ಸಾಲದು. ನಾವು ಕೂಡ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಇದು ಎಲ್ಲರೂ ಸೇರಿ ಹೋರಾಡಬೇಕಾದ ಸಮಯ. ಎಲ್ಲರೂ ಸ್ವಚ್ಛವಾಗಿರಿ. ಹಾಗೆಯೇ ಜನತಾ ಕರ್ಫ್ಯೂನಲ್ಲೂ ಭಾಗವಹಿಸಿ, ವೈರಸ್ ಸೋಂಕು ತಡೆಯಲು ಸಹಕರಿಸಿ. ನೆನಪಿರಲಿ, ಹೋರಾಡಬೇಕಾದ್ದು ಸರ್ಕಾರ ಮತ್ತು ವೈದ್ಯರಷ್ಟೇ ಅಲ್ಲ, ನಾವು-ನೀವು ಕೂಡ ...’ ಎಂಬುದಾಗಿ ನಟ ನೀನಾಸಂ ಸತೀಶ್ ವಿನಂತಿ ಮಾಡಿಕೊಂಡಿದ್ದಾರೆ.

ಮದುವೆ ವಾರ್ಷಿಕೋತ್ಸವ ಆಚರಿಸಲ್ಲ

‘ನವರಸ ನಾಯಕ’ ಜಗ್ಗೇಶ್ ಕೂಡ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದು, ಜನರೂ ಕೈಜೋಡಿಸುವಂತೆ ಕೋರಿಕೊಂಡಿದ್ದಾರೆ. ‘ಪ್ರಧಾನಿಯವರು ಮಾ. 22ರಂದು ಜನತಾ ಕರ್ಫ್ಯೂ ನಡೆಸುವಂತೆ ಕರೆ ನೀಡಿದ್ದಾರೆ. ಅಂದು ನನ್ನ ವೆಡ್ಡಿಂಗ್ ಆನಿವರ್ಸರಿ. ಅದನ್ನು ಧಿಕ್ಕರಿಸಿ ಪ್ರಧಾನಿಯವರ ಮಾತಿಗೆ ಮನ್ನಣೆ ಕೊಟ್ಟು ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಮನೆಯಿಂದ ಹೊರಗೆ ಬರುವುದಿಲ್ಲ. ಕರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲ ಮಹನೀಯರಿಗಾಗಿ ಸಂಜೆ ಐದು ಗಂಟೆಗೆ ಕಿಟಕಿ ಮುಖಾಂತರ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸುತ್ತೇನೆ. ಜನತಾ ಕರ್ಫ್ಯೂಗೆ ಬೆಂಬಲ ನೀಡುವ ಕೆಲಸವನ್ನು ನಾನೂ ಮಾಡುತ್ತೇನೆ, ನೀವೂ ಮಾಡಿ ...’ ಎಂದು ಜಗ್ಗೇಶ್ ಮನವಿ ಮಾಡಿಕೊಂಡಿದ್ದಾರೆ.

ಕಾರ್ವಿುಕ ನಿಧಿ ಸ್ಥಾಪನೆ ಆಗಲಿ

ಇತ್ತ ಸಿನಿಮಾ ಕೆಲಸಗಳು ನಿಂತಿದ್ದರಿಂದ ಕಾರ್ವಿುಕರ ಸ್ಥಿತಿ ಅತಂತ್ರವಾಗಿದೆ. ಅವರ ಸ್ಥಿತಿಯನ್ನು ಸರ್ಕಾರವೇ ಮುಂದೆ ಬಂದು ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ನಟ ಪ್ರೇಮ್ ಹೇಳಿದ್ದಾರೆ. ‘ಸದ್ಯ ಸಿನಿಮಾ ಶೂಟಿಂಗ್ ಸ್ಥಗಿತದಿಂದ ನೂರಾರು ಚಿತ್ರಗಳ ನಿರ್ವಪಕರೇ ಸಂಕಷ್ಟದಲ್ಲಿದ್ದಾರೆ. ಸಾಲ ಮಾಡಿ ಬಡ್ಡಿ ತುಂಬುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಲಾವಿದರ ಶೂಟಿಂಗ್ ಡೇಟ್ಸ್ ಸಿಗುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಸಿನಿಮಾ ಕಾರ್ವಿುಕರ ಸ್ಥಿತಿಯೂ ಚಿಂತಾಜನಕವಾಗಿದೆ. ಸಿನಿಮಾ ನಂಬಿಯೇ ಅವರ ಒಂದು ದಿನದ ಹೊಟ್ಟೆ ತುಂಬುತ್ತಿರುತ್ತದೆ. ಇಂಥ ಸ್ಥಿತಿಯನ್ನು ಸರ್ಕಾರ ಗಮನಿಸಬೇಕು. ಸರ್ಕಾರವೇ ಮುತುವರ್ಜಿ ವಹಿಸಿ ಸಿನಿಮಾ ಕಾಮಿಕರಿಗೆ ನಿಧಿ ಸ್ಥಾಪನೆ ಮಾಡಿ ಅದರ ಅವಶ್ಯಕತೆ ಇದ್ದವರಿಗೆ ನೀಡಬೇಕು’ ಎಂದು ‘ಲವ್ಲಿ ಸ್ಟಾರ್’ ಪ್ರೇಮ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಈ ಸಂಬಂಧ ಕಾರ್ವಿುಕ ಒಕ್ಕೂಟದಿಂದ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿತ್ತು.

ಮನೆಯಲ್ಲೇ ರಶ್ಮಿಕಾ ವರ್ಕೌಟ್

ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ, ಸದ್ಯ ಗೃಹಬಂಧಿಯಾಗಿದ್ದಾರೆ. ಅಂದರೆ, ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿದ್ದುಕೊಂಡೇ ಜಿಮ್ ಮೊರೆ ಹೋಗಿದ್ದಾರೆ. ‘ಮನೆಯಲ್ಲಿರಿ, ಶುಚಿಯಾದುದನ್ನು ತಿನ್ನಿ. ಮನಸ್ಸು ಮತ್ತು ಮಿದುಳನ್ನು ಬಿಜಿಯಾಗಿಟ್ಟುಕೊಳ್ಳಿ. ದೇಹಕ್ಕೊಂದಿಷ್ಟು ವ್ಯಾಯಾಮ ಮಾಡಿಸಿ ಎಂದಿರುವ ಅವರು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ’ ಎಂಬ ಸಲಹೆಯನ್ನೂ ನೀಡಿದ್ದಾರೆ. ಸದ್ಯ ಕನ್ನಡದ ‘ಪೊಗರು’ ಸೇರಿ ತೆಲುಗು ಮತ್ತು ತಮಿಳಿನ ಹಲವು ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ವರ್ಕ್ ಫ್ರಮ್ ಹೋಮ್

ಸಿನಿಮಾ ಕೆಲಸಗಳು ಸಂಪೂರ್ಣ ಸ್ತಬ್ಧವಾಗಿವೆ. ಶೂಟಿಂಗ್ ಬದಿಗೆ ಸರಿಸಿ ‘ಮನೆ ಮಂದಿಗೆ ಟೈಮ್ ಕೊಡಲ್ಲ’ ಎಂಬ ಮಾತುಗಳನ್ನು ಕೇಳುತ್ತಿದ್ದ ಸಿನಿಮಾ ಮಂದಿ ಈಗ ಜಾಲಿ ಮೂಡ್​ನಲ್ಲಿ ಮಡದಿ ಮಕ್ಕಳೊಟ್ಟಿಗೆ ‘ಕರೊನಾ’ ದಿನಗಳನ್ನು ಮಜಾ ದಿನಗಳಂತೆ ಕಳೆಯುತ್ತಿದ್ದಾರೆ. ನಟ, ನಿರ್ದೇಶಕ ಮತ್ತು ನಿರ್ವಪಕ ರಿಷಬ್ ಶೆಟ್ಟಿ, ತಮ್ಮ ಹುಟ್ಟೂರು ಕುಂದಾಪುರದ ಕೆರಾಡಿಯಲ್ಲಿ ಬಿಡಾರ ಹೂಡಿದ್ದಾರೆ. ಬಿಡುವಿನ ಸಮಯವನ್ನು ಮಗ ರನ್ವಿಕ್ ಜತೆ ಕಳೆಯುತ್ತಿದ್ದಾರೆ. ಕಾಲುಗಳ ಮೇಲೆ ಪುತ್ರನನ್ನು ಮಲಗಿಸಿಕೊಂಡು, ಅಭ್ಯಂಜನ ಮಾಡಿಸಿದ್ದಾರೆ. ‘ಊರೂರೇ ಖಾಲಿಯಾಗಿದೆ. ಆಫೀಸ್​ಗೆ ಬೀಗ ಹಾಕಿದೆ. ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲ ಆತಂಕಗಳನ್ನು ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನ್ ಬೆಳೆದಿದ್ ಮನೇಲಿ ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ! ಒಟ್ಟಾಗಿ ಎಲ್ಲರ ಥರ ನಮ್ದೂ ‘ವರ್ಕ್ ಫ್ರಮ್ ಹೋಮ್ ಜೋರಾಗಿ ನಡೆಯುತ್ತಿದೆ’ ಎಂದು ರಿಷಬ್ ಹೇಳಿಕೊಂಡಿದ್ದಾರೆ.

ಡೈನಿಂಗ್ ‘ಟೇಬಲ್’ ಮೇಲೆ ಗಣೇಶ್ ‘ಟೆನಿಸ್’

‘ಗೋಲ್ಡನ್ ಸ್ಟಾರ್’ ಗಣೇಶ್ ರಾಜರಾಜೇಶ್ವರಿ ನಗರದ ಮನೆಯಲ್ಲಿ ಮಸ್ತ್ ಮೂಡ್​ನಲ್ಲಿದ್ದಾರೆ. ಒಟ್ಟಿಗೆ ಕೂತು ಊಟ ಮಾಡುವ ಡೈನಿಂಗ್ ಟೇಬಲ್​ಅನ್ನೇ ಟೇಬಲ್ ಟೆನ್ನಿಸ್ ಕೋರ್ಟ್ ಮಾಡಿಕೊಂಡು ಪತ್ನಿ ಶಿಲ್ಪಾ ಜತೆ ಆಟ ಆಡಿದ್ದಾರೆ. ಅಪ್ಪ-ಅಮ್ಮನ ಆಟವನ್ನು ಪುತ್ರ ವಿಹಾನ್, ಪುತ್ರಿ ಚಾರಿತ್ರ್ಯ ಎಂಜಾಯ್ ಮಾಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿರುವುದರಿಂದ ಗಣೇಶ್ ನಾಯಕತ್ವದ ‘ಗಾಳಿಪಟ 2’ ಸಿನಿಮಾ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿದೆ. ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಚಿತ್ರದಲ್ಲೂ ಗಣೇಶ್ ನಟಿಸುತ್ತಿದ್ದು, ಆ ಚಿತ್ರದ ಶೂಟಿಂಗ್ ಕೂಡ ಮುಂದೂಡಲ್ಪಟ್ಟಿದೆ. ಹೀಗಾಗಿ ಈ ಬಿಡುವಿನ ಸಮಯವನ್ನು ಮನೆಯಲ್ಲೇ ಕಳೆಯುತ್ತಿದ್ದಾರೆ ಗಣಿ. ಅದೇ ವಿಡಿಯೋವನ್ನು ಶಿಲ್ಪಾ ಗಣೇಶ್ ಸಹ ಶೇರ್ ಮಾಡಿಕೊಂಡಿದ್ದು, ಮನೆಯಲ್ಲೇ ಸುರಕ್ಷಿತವಾಗಿರಿ ಎಂದಿದ್ದಾರೆ.

ನಡುವೆ ಅಂತರವಿರಲಿ

ಜನತಾ ಕರ್ಫ್ಯೂ ಬಗ್ಗೆ ಹಲವು ಬಾಲಿವುಡ್ ನಟ-ನಟಿಯರು ತಮ್ಮ ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಎಲ್ಲಾ ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಕಲಾವಿದರು ಪುರುಸೊತ್ತಿನಲ್ಲಿರುವುದಷ್ಟೇ ಅಲ್ಲ, ಮನೆಯಲ್ಲೇ ಬಂಧಿಯಾಗಿದ್ದಾರೆ. ಸಿಕ್ಕಿರುವ ಅಮೂಲ್ಯ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೆ ಬಹಳಷ್ಟು ಸೆಲೆಬ್ರಿಟಿಗಳು ಮುಂದಾಗಿದ್ದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಪ್​ಡೇಟ್​ಗಳನ್ನು ಕೊಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಸಮಯವನ್ನು ತಮ್ಮ ಮುದ್ದಿನ ನಾಯಿಯೊಂದಿಗೆ ಕಳೆಯುತ್ತಿದ್ದು, ನಾಯಿಯೊಂದಿಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಇಂಥ ಸಂದರ್ಭದಲ್ಲಿ ಮನೆಯಲ್ಲಿರುವುದು ಹೆಚ್ಚು ಸುರಕ್ಷಿತ’ ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕಾರ ಸಮೀಪದ ಪ್ರತಿಸ್ಪರ್ಧಿ ಎಂದೇ ಯಾವಾಗಲೂ ಬಿಂಬಿತರಾಗುವ ದೀಪಿಕಾ ಪಡುಕೋಣೆ ಸಹ ಇದರಿಂದ ಹೊರತಲ್ಲ. ಅವರು ತಮ್ಮ ಸಮಯವನ್ನು ವಾರ್ಡ್​ರೋಬ್ ಕ್ಲೀನ್ ಮಾಡುವುದಕ್ಕೆ ಮೀಸಲಿಟ್ಟಿದ್ದಾರೆ. ಇನ್​ಸ್ಟಾಗ್ರಾಮ್ಲ್ಲಿ ಒಂದು ಫೋಟೋ ಹಂಚಿಕೊಂಡಿರುವ ಅವರು, ‘ಕ್ಲೀನಿಂಗ್ ವಾರ್ಡ್​ರೋಬ್’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಇನ್ನು, ಅಪ್ಪಟ ಪುಸ್ತಕಪ್ರೇಮಿಯಾಗಿರುವ ಸೈಫ್ ಅಲಿ ಖಾನ್, ಎಲ್ಲರಿಂದ ದೂರವಾಗಿ ಪುಸ್ತಕದಲ್ಲಿ ಕಳೆದು ಹೋಗಿದ್ದಾರೆ. ಅಲಿಯಾ ಭಟ್ ಸಹ ಪುಸ್ತಕ ಕೈಗೆತ್ತಿಕೊಂಡಿದ್ದು, ‘ಮನೆಯಲ್ಲೇ ಇದ್ದು ಪುಸ್ತಕ ಓದಿ’ ಎಂದು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಜನತಾ ಕರ್ಫ್ಯೂಗೆ ಜೈ

ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಕುರಿತು ಬಾಲಿವುಡ್​ನಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಿಂದಿ ಚಿತ್ರರಂಗದ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬೆಂಬಲ ಸೂಚಿಸುವುದರ ಜತೆಗೆ, ಸಹಕರಿಸುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ. ಪ್ರಮುಖವಾಗಿ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿ, ಇಂಥದ್ದೊಂದು ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಶಾರುಖ್ ಖಾನ್, ಶಬಾನಾ ಆಜ್ಮಿ, ಅಕ್ಷಯ್ ಕುಮಾರ್, ಅನುಪಮ್ ಖೇರ್, ಅನುಷ್ಕಾ ಶರ್ಮ, ವರುಣ್ ಧವನ್, ಕರಣ್ ಜೋಹರ್, ಶಿಲ್ಪಾ ಶೆಟ್ಟಿ, ಮಾಧವನ್ ಮುಂತಾದವರು ಈ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಾ. 22ರಂದು ನಡೆಯಲಿರುವ ಜನತಾ ಕರ್ಫ್ಯೂಗೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಮಾರಕ ಕಾಯಿಲೆಯನ್ನು ತಡೆಯುವುದಕ್ಕೆ ಸತತವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. | ಅಮಿತಾಭ್ ಬಚ್ಚನ್ ಬೇರೆಯವರ ಜತೆ ಸಂವಹನ ಕಡಿಮೆ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಜನತಾ ಕರ್ಫ್ಯೂ ಒಂದು ಒಳ್ಳೆಯ ಕ್ರಮ. ಇದನ್ನು ಇನ್ನಷ್ಟು ಮುಂದುವರಿಸುವ ಅವಶ್ಯಕತೆ ಇದೆ. ಹರಡುತ್ತಿರುವ ವೈರಸ್ ಕಟ್ಟಿಹಾಕುವ ಅಗತ್ಯವಿದೆ. | ಶಾರುಖ್ ಖಾನ್ ಇದು ನಾನ್​ಸೆನ್ಸ್ ಅಲ್ಲ. ಎಲ್ಲ ಭಾರತೀಯರನ್ನು ಒಂದು ಮಾಡುವ ಮಾಸ್ಟರ್ ಸ್ಟ್ರೋಕ್. | ಶಬಾನಾ ಆಜ್ಮಿ ಜನತಾ ಕರ್ಫ್ಯೂ ಫಾಲೋ ಮಾಡುವುದರ ಮೂಲಕ ಎಲ್ಲರೂ ಸ್ವಯಂ ಕರ್ಫ್ಯೂ ಹಾಕಿಕೊಳ್ಳಬೇಕು. ವೈರಸ್ ಹರಡುವುದನ್ನು ತಡೆಗಟ್ಟಬೇಕು. | ಅನುಷ್ಕಾ ಶರ್ಮ ಜನತಾ ಕರ್ಫ್ಯೂಗೆ ಎಲ್ಲರೂ ಸಹಕಾರ ನೀಡುವುದರ ಜತೆಗೆ, ಮಾ.22ರಂದು ಸಂಜೆ ಐದಕ್ಕೆ, ಎಲ್ಲರ ಆರೋಗ್ಯಕ್ಕಾಗಿ ಸತತವಾಗಿ ಶ್ರಮಿಸುತ್ತಿರುವ ಜನರಿಗೆ ನಮ್ಮ ಅಭಿನಂದನೆ ಸಲ್ಲಿಸೋಣ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ, ಎಲ್ಲರೂ ಸುರಕ್ಷಿತವಾಗಿರಿ. | ಸಂಜಯ್ ದತ್ ಇದೇ ಭಾನುವಾರ ಬೆಳಗ್ಗೆ ಏಳರಿಂದ ರಾತ್ರಿ ಒಂಬತ್ತರವರೆಗೆ ಜನತಾ ಕರ್ಫ್ಯೂ ಪಾಲಿಸುವುದರ ಮೂಲಕ ಇಡೀ ಜಗತ್ತಿಗೇ ನಾವು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಬೇಕಿದೆ. | ಅಕ್ಷಯ್ ಕುಮಾರ್