| ಹರ್ಷವರ್ಧನ್ ಬ್ಯಾಡನೂರು
‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ‘ಬಾಹುಬಲಿ’ ಪ್ರಭಾಸ್ ನಾಯಕನಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’. ಎಲ್ಲವೂ ಅಂದುಕೊಂಡಂತಾಗಿದ್ದರೆ ಸಿನಿಮಾ ಇದೇ ಸೆ. 28ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವ ಕಾರಣ ನವೆಂಬರ್‌ಗೆ ಅಥವಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಮತ್ತೊಂದೆಡೆ ‘ಸಲಾರ್’ನಿಂದಾಗಿ ಹಲವು ಕಡಿಮೆ ಹಾಗೂ ಸಾಧಾರಣ ಬಜೆಟ್ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡದೇ ಕಾಯುತ್ತಿದ್ದವು. ಇದೀಗ ‘ಸಲಾರ್’ ಮುಂದೂಡಿದ ಬೆನ್ನಲ್ಲಿ ತೆರೆಗೆ ಬರಲು ಸಾಲು ಸಾಲು ಸಿನಿಮಾಗಳು ತುದಿಗಾಲಿನಲ್ಲಿ ನಿಂತಿವೆ. ಸೆ. 28 ಗುರುವಾರವಾಗಿದ್ದು ಈದ್ ಮಿಲಾದ್ ಹಬ್ಬವಿರುವ ಕಾರಣ ರಜೆಯಿರಲಿದೆ. ನಂತರ ಸೆ. 30 ಹಾಗೂ ಅ.1 ಶನಿವಾರ ಮತ್ತು ಭಾನುವಾರವಾಗಿದ್ದು, ಅ. 2 ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ರಜೆ ಇರಲಿದೆ. ಹೀಗಾಗಿ ಗುರುವಾರ ಆರಂಭವಾಗುವ ರಜೆ ಸೋಮವಾರದವರೆಗೂ ಮುಂದುವರಿಯಲಿದೆ. ಆ ಮೂಲಕ ಸೆ. 28ರಿಂದ ಅ. 2ರವರೆಗೆ ಐದು ದಿನಗಳ ಕಾಲ ಎರಡು ದಿನ ಹೆಚ್ಚುವರಿ ವೀಕೆಂಡ್ ಸಿಗಲಿದ್ದು, ಗಳಿಕೆ ವಿಷಯದಲ್ಲಿ ಪ್ರೇಕ್ಷಕರು ಕೈಹಿಡಿಯುವ ಭರವಸೆ ಚಿತ್ರತಂಡಗಳದ್ದು. ಹೀಗಾಗಿಯೇ ಚಿತ್ರಗಳು ನಾ ಮುಂದು ತಾ ಮುಂದು ಅಂತ ರಿಲೀಸ್‌ಗೆ ಮುಂದಾಗಿವೆ.
ಇದನ್ನೂ ಓದಿ : ಚಿತ್ರರಂಗಕ್ಕೆ ಅನುಷ್ಕಾ ಶೆಟ್ಟಿ ಕಮ್ಬ್ಯಾಕ್; ಯುಎಸ್ ಬಾಕ್ಸ್ ಆಫೀಸ್ನಲ್ಲಿ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಗಳಿಸಿದ್ದೆಷ್ಟು?
ಟಾಲಿವುಡ್‌ನಲ್ಲಿ ನಾಲ್ಕು ಚಿತ್ರಗಳು
ಬೊಯಪಾಟಿ ಸೀನು ನಿರ್ದೇಶನದ, ರಾಮ್ ಪೋತಿನೇನಿ, ಕನ್ನಡತಿ ಶ್ರೀಲೀಲಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಸ್ಕಂದ’ ಅಂದು ತೆರೆಗೆ ಬರಲಿದೆ. ಸೆ. 15ರಂದು ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿದ ಚಿತ್ರತಂಡ ಇದೀಗ ‘ಸಲಾರ್’ ಮುಂದಕ್ಕೆ ಹೋದ ಸಂಭ್ರಮದಲ್ಲಿ ಅಂದೇ ರಿಲೀಸ್ ಡೇಟ್ ಫಿಕ್ಸ್ ಮಾಡಿದೆ. ಜತೆಗೆ ಕಿರಣ್ ಅಬ್ಬಾವರಂ ಹಾಗೂ ಕನ್ನಡದ ಹುಡುಗಿ ನೇಹಾ ಶೆಟ್ಟಿ ಅಭಿನಯದ ‘ರೂಲ್ಸ್ ರಂಜನ್’ ಸಹ ಇದೇ 28ರಂದು ರಿಲೀಸ್ ಆಗಲಿದೆ. ಎನ್‌ಟಿಆರ್ ಕುಟುಂಬದ ಕುಡಿ ಯುವನಟ ನಿತಿನ್ ನಟಿಸಿರುವ ‘ಮ್ಯಾಡ್’ಹಾಗೂ ಶ್ರೀಕಾಂತ್ ಅವರ ‘ಪೆದ್ದ ಕಾಪು 1’ ಸೆ. 29ರಂದು ತೆರೆಗೆ ಬರಲಿದೆ. ಸದ್ಯಕ್ಕೆ ನಾಲ್ಕು ತೆಲುಗು ಚಿತ್ರಗಳು ರಿಲೀಸ್ ಆಗಲಿದ್ದು, ಮುಂದೆ ಆ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಕಾಲಿವುಡ್‌ನಲ್ಲೂ ಸ್ಲಾಟ್ ಖಾಲಿ ಇಲ್ಲ!
ಈ ಲಾಂಗ್ ವೀಕೆಂಡ್‌ಅನ್ನು ಸದ್ಬಳಕೆ ಮಾಡಿಕೊಳ್ಳಲು ತಮಿಳು ಚಿತ್ರರಂಗವೂ ಹಿಂದೆ ಬಿದ್ದಿಲ್ಲ. ಸಿದ್ಧಾರ್ಥ್ ನಟಿಸಿರುವ ‘ಚಿತ್ತ’, ಅಮೀರ್ ಅಭಿನಯದ ‘ಉಯಿರ್ ತಮಿಳುಕ್ಕು’ ಚಿತ್ರಗಳನ್ನು ಅಂದೇ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಲಾಗಿದೆ. ಜತೆಗೆ ಜಯಂ ರವಿ ನಾಯಕನಾಗಿರುವ ಹಾಗೂ ನಯನತಾರಾ ನಾಯಕಿಯಾಗಿರುವ ‘ಇರೈವಾನ್’, ವಿಜಯ್ ಆ್ಯಂಟನಿ ಅಭಿನಯದ ‘ರಥಂ’, ಮತ್ತು ಹರೀಶ್ ಕಲ್ಯಾಣ್ ನಟಿಸಿರುವ ‘ಪಾರ್ಕಿಂಗ್’ ಸೇರಿ ಇನ್ನೂ ಕೆಲ ಚಿತ್ರಗಳು ಅಂದೇ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ : ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ನಿಧನ!
ಕನ್ನಡದಲ್ಲೂ ಲಾಂಗ್ ವೀಕೆಂಡ್ ಸಂಭ್ರಮ
ಈದ್ ಮಿಲಾದ್‌ನಿಂದ ಗಾಂಧಿ ಜಯಂತಿವರೆಗಿನ ಐದು ದಿನಗಳ ಲಾಂಗ್ ವೀಕೆಂಡ್ ರಜೆಗಳನ್ನು ಸ್ಯಾಂಡಲ್‌ವುಡ್ ಸಹ ಸದ್ಬಳಕೆ ಮಾಡುತ್ತಿದೆ. ಇತ್ತೀಚೆಗಷ್ಟೆ ಗಣೇಶ್, ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಅಭಿನಯದ, ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನದಾರಿಯಲ್ಲಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ಚಿತ್ರವನ್ನು ಸೆ. 28ರಂದು ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಜತೆಗೆ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಕುರಿತ ದಕ್ಷಿಣ ಭಾರತದ ಮೊದಲ ಬಯೋಪಿಕ್ ಎಂಬ ಹೆಗ್ಗಳಿಕೆಯ ಆದತ್ ನಿರ್ದೇಶಿಸಿ, ಅಜಿತ್ ಜೈರಾಜ್ ಭಗತ್ ಸಿಂಗ್ ಪಾತ್ರದಲ್ಲಿ ನಟಿಸಿರುವ ‘ಕ್ರಾಂತಿವೀರ’ ಚಿತ್ರವನ್ನೂ ಅಂದೇ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು. ಹಾಗೇ ಇನ್ನೂ ಕೆಲ ಚಿತ್ರತಂಡಗಳು ಅಂದೇ ರಿಲೀಸ್ ಘೋಷಿಸುವ ಸಾಧ್ಯತೆಯಿದೆ.
ಜತೆಗೆ ಬಾಲಿವುಡ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್-ಕಟ್ ಹೇಳಿರುವ, ಸಪ್ತಮಿ ಗೌಡ ನಟಿಸಿರುವ ‘ದಿ ವ್ಯಾಕ್ಸೀನ್ ವಾರ್’ ಹಾಗೂ ‘ಫುಕ್ರೇ 3’ ಸಿನಿಮಾಗಳು ಸೆ. 28ರಂದು ರಿಲೀಸ್ ಆಗಲಿವೆ.