ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ. ಅದೇ ಸಾಲಿಗೆ ಸೇರುವ ಸಿನಿಮಾ ‘ಯಂಗ್ ಮ್ಯಾನ್’. ವಿಶೇಷ ಅಂದರೆ ನಿರ್ದೇಶಕ ಮುತ್ತುರಾಜ್ ಒಂದೇ ಟೇಕ್‌ನಲ್ಲಿ 2 ತಾಸು 38 ನಿಮಿಷಗಳ ಚಿತ್ರವನ್ನು ಚಿತ್ರೀಕರಿಸಿದ್ದಾರೆ. ಕೆಲ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಮುತ್ತುರಾಜ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು.
‘ಈ ಹಿಂದೆ ಶಂಕರ್ ನಾಗ್, ಎಸ್. ನಾರಾಯಣ್ ಅವರು ಈ ಪ್ರಯತ್ನ ಮಾಡಿದ್ದಾರೆ. ಅವರ ಚಿತ್ರಗಳ ಸ್ಪೂರ್ತಿಯಿಂದ ನಾನು ಈ ಸಿನಿಮಾ ಮಾಡಿದ್ದೇನೆ. ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೆ. ಬಹುತೇಕ ಹೊಸ ಕಲಾವಿದರು ನಟಿಸಿದ್ದು, ಅವರಿಗೆ ತರಬೇತಿ ನೀಡಿ ನಂತರ ಚಿತ್ರೀಕರಣ ಮಾಡಿದೆವು. ಇದೊಂದು ದೇಶಪ್ರೇಮ ಆಧರಿಸಿದ ಕಥೆ. ಕ್ಲೈಮ್ಯಾಕ್ಸ್ ಯಾರೂ ಊಹಿಸಲು ಸಾಧ್ಯವಿಲ್ಲ’ ಎಂದು ಮುತ್ತುರಾಜ್ ಮಾಹಿತಿ ನೀಡಿದರು. ಕನಕಪುರದ ಬಳಿ ಮನೆಯೊಂದರಲ್ಲಿ ವಿಶೇಷ ಕ್ಯಾಮರಾಗಳನ್ನು ಬಳಸಿ ಶೂಟಿಂಗ್ ಮಾಡಿದ ಬಗ್ಗೆ ಛಾಯಾಗ್ರಾಹಕ ವೀನಸ್ ನಾಗರಾಜ್ ತಿಳಿಸಿದರು.
ಚಿತ್ರವನ್ನು ಲಿಮ್ಕಾ ದಾಖಲೆ ಹಾಗೂ ಕೆಲವು ಚಿತ್ರೋತ್ಸವಗಳಿಗೆ ಕಳುಹಿಸುವ ಆಲೋಚನೆ ಚಿತ್ರತಂಡದ್ದು. ಸುನೀಲ್ ಗೌಡ, ನಯನಾ ಪುಟ್ಟಸ್ವಾಮಿ, ಹರೀಶ್ ಆಚಾರ್ಯ, ಆನಂದ್, ರಾಶಿಕಾ, ತನುಜಾ, ಶೃತಿ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.