ಸಿನಿವಾಣಿ

ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಿ, ನನ್ನ ಆತ್ಮೀಯರಲ್ಲಿ ಹಾರ್ಟ್​ ಪೇಷೆಂಟ್ಸ್​ ಇದ್ದಾರೆ: ಎಸ್​.ಜಾನಕಿ

ಬೆಂಗಳೂರು: ಹಿರಿಯ ಗಾಯಕಿ ಎಸ್​.ಜಾನಕಿಯವರು ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಜೂ.29ರಂದು ಬಹುದೊಡ್ಡ ಸುದ್ದಿಯಾಗಿಬಿಟ್ಟಿತ್ತು. ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಬರೀ ಇದೇ ವಿಚಾರವೇ ಹರಿದಾಡುತ್ತಿತ್ತು. ನಂತರ ಅದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಯಿತು.

ಈ ಸುಳ್ಳು ಸುದ್ದಿಯ ಬಗ್ಗೆ ಗಾಯಕ ಎಸ್​.ಪಿ.ಬಾಲಸುಬ್ರಹ್ಮಣ್ಯ, ಸಂಯೋಜಕ ಧೀನಾ ಮತ್ತಿತರರು ಕಿಡಿಕಾರಿದ್ದರು. ಎಸ್​.ಜಾನಕಿ ಅವರ ಸಾವಿನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ತಕ್ಕ ಶಾಸ್ತ್ರಿಯಾಗಬೇಕು ಎಂದು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸಿದ್ದಾರೆ.

ಎಸ್​. ಜಾನಕಿ ಇನ್ನಿಲ್ಲ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಅವರ ಆಪ್ತರು, ಅಭಿಮಾನಿಗಳು ಹಲವರು ಅವರಿಗೆ ಕರೆ ಮಾಡಿದ್ದಾರೆ. ಹೀಗೆ ಕರೆ ಮಾಡಿದವರೋರ್ವರೊಂದಿಗೆ ಜಾನಕಿ ಅಮ್ಮನವರು ಮಾತನಾಡಿದ ಆಡಿಯೋವೊಂದು ಇದೀಗ ವೈರಲ್​ ಆಗಿದೆ.

ನಾನು ಆರಾಮಾಗಿದ್ದೇನೆ. ಹೀಗೆ ಕರೆ ಮಾಡುವವರ ಪ್ರಶ್ನೆಗೆ ಉತ್ತರಿಸಿಯೇ ಬಳಲಿ ಹೋದೆ ಎಂದು ಹೇಳಿದ್ದನ್ನು ಆಡಿಯೋದಲ್ಲಿ ಕೇಳಬಹುದು.

ಅಷ್ಟೇ ಅಲ್ಲದೆ, ನಾನು ಆರೋಗ್ಯವಾಗಿಯೇ ಇದ್ದೇನೆ. ಆದರೂ ಕೆಲವರು ಪದೇಪದೆ ನಾನು ನಿಧನಳಾಗಿದ್ದೇನೆ ಎಂಬ ಸುದ್ದಿಯನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಬ್ಬಿಸುತ್ತಾರೆ. ನಾನು ಮೃತಳಾಗಿದ್ದೇನೆಂದು ಸುಳ್ಳು ಸುದ್ದಿ ಹರಡುತ್ತಿರುವುದು ಇದು ಆರನೇಬಾರಿ. ನೋಡಿ ಈಗ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ..ಇನ್ನೊಂದು ಕರೆ ಬರುತ್ತಿದೆ. ಅವರೂ ಇದೇ ಪ್ರಶ್ನೆ ಕೇಳಲು ಫೋನ್​ ಮಾಡುತ್ತಿದ್ದಾರೆ. ನನ್ನ ಬಗ್ಗೆ ಕಾಳಜಿ ಇರುವವರ ಸಮಾಧಾನ ಪಡಿಸುವುದೇ ಕೆಲಸವಾಗಿಬಿಡುತ್ತದೆ. ಅದರಲ್ಲೇ ಸಮಯ ಹೋಗುತ್ತದೆ. ಏನೆಂದು ಉತ್ತರಿಸಲಿ? ಎಷ್ಟೆಂದು ಸ್ಪಷ್ಟನೆ ನೀಡಲಿ ಎಂದು ಎಸ್​. ಜಾನಕಿ ಅವರು ಹೇಳಿದ್ದಾರೆ.

ನನಗೆ ನನ್ನ ಅಭಿಮಾನಿಗಳು ತುಂಬ ಮುಖ್ಯ. ಅದರಲ್ಲಿ ನನ್ನ ತುಂಬ ಹತ್ತಿರದ ಒಂದಷ್ಟು ಜನರು, ಹಾರ್ಟ್​ ಪೇಶೆಂಟ್ಸ್​ ಇದ್ದಾರೆ. ಅವರೆಲ್ಲ ತುಂಬ ಗಾಬರಿಯಿಂದ ಕರೆ ಮಾಡುತ್ತಾರೆ. ನನಗೂ ಅವರ ಬಗ್ಗೆ ಆತಂಕವಾಗುತ್ತದೆ. ದಯವಿಟ್ಟು ಇನ್ನಾದರೂ ಜನರು ಇಂಥ ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಬೇಕು ಎಂದಿದ್ದಾರೆ.

ಇನ್ನು ಎಸ್​.ಪಿ. ಬಾಲಸುಬ್ರಹ್ಮಣ್ಯ ಅವರೂ ಕೂಡ ಎಸ್​. ಜಾನಕಿ ಸಾವಿನ ಬಗ್ಗೆ ವದಂತಿ ಹಬ್ಬಿಸುವವರ ವಿರುದ್ಧ ಕಿಡಿ ಕಾರಿದ್ದರು. ಜೂ.29ರಂದು ವಿಡಿಯೋ ಪೋಸ್ಟ್ ಮಾಡಿದ್ದ ಅವರು, ಮುಂಜಾನೆಯಿಂದಲೂ 20ಕ್ಕಿಂತಲೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಮಾತನಾಡಿದ್ದೇನೆ. ಎಲ್ಲರೂ ಕೇಳುವುದು ಒಂದೇ ಪ್ರಶ್ನೆ, ಜಾನಕಮ್ಮನವರ ಆರೋಗ್ಯ ಹೇಗಿದೆ? ಅವರಿಗೆ ಏನಾಗಿದೆ ಎಂದು ಕೇಳುತ್ತಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಚೆನ್ನಾಗಿಯೇ ಇದ್ದಾರೆ ಎಂದಿದ್ದರು.

ಎಸ್​.ಜಾನಕಿಯವರು ದಕ್ಷಿಣ ಭಾರತದ ನೈಟಿಂಗೇಲ್​ ಎಂದೇ ಪ್ರಸಿದ್ಧ. 2016ರಲ್ಲೇ ಕೊನೇ ಬಾರಿ ಹಾಡಿದ್ದಾರೆ. ನಾಲ್ಕು ರಾಷ್ಟ್ರ ಪ್ರಶಸ್ತಿಗಳನ್ನು ಹಾಗೂ 32 ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. (ಏಜೆನ್ಸೀಸ್​)