ಬೆಂಗಳೂರು: ಗಾಯಕಿ ಅನನ್ಯಾ ಭಟ್ ಈಗಾಗಲೇ ‘ಸೇನಾಪುರ’ ಎಂಬ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಆ ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಅವರು ಇನ್ನೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಅದೇ ‘ಗಿಬ್ಸಿ’. ಶ್ರೀನೇಶ್ ಎಸ್. ನಾಯರ್ ಎನ್ನುವವರು ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳಿದ್ದು, ಒಂದು ಪಾತ್ರದಲ್ಲಿ ಅನನ್ಯಾ ಭಟ್ ಕಾಣಿಸಿಕೊಂಡರೆ, ಇನ್ನೆರಡು ಪಾತ್ರಗಳನ್ನು ಪ್ರಿಯಾಂಕಾ ತಿಮ್ಮೇಶ್ ಮತ್ತು ‘ಗೊಂಬೆಗಳ ಲವ್’ ಖ್ಯಾತಿಯ ಅರುಣ್ ಮಾಡುತ್ತಿದ್ದಾರೆ.
ಕಥೆಗೆ ಟ್ವಿಸ್ಟ್ ಕೊಡುವಂತಹ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳುವ ಅನನ್ಯಾ, ಬಹಳ ಹಸಿಹಸಿಯಾದ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, ‘ನಿರ್ದೇಶಕರು ನನ್ನ ಅಭಿನಯವನ್ನು ನೋಡಿಲ್ಲ. ಆದರೆ, ನನ್ನನ್ನು ನೋಡಿ ಈ ಪಾತ್ರಕ್ಕೆ ನಾನೇ ಸೂಕ್ತ ಎಂದು ಹೇಳಿದರು. ನನ್ನಿಂದ ಅಭಿನಯ ತೆಗೆಸುವ ವಿಶ್ವಾಸ ವ್ಯಕ್ತಪಡಿಸಿದ್ದರಿಂದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದು ಹೇಳುತ್ತಾರೆ ಅನನ್ಯಾ. ಫೆಬ್ರವರಿ ಒಂದರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ದಾಂಡೇಲಿ, ಬೆಂಗಳೂರು ಮುಂತಾದ ಕಡೆ ನಡೆಯಲಿದೆಯಂತೆ.