ಚೆನ್ನೈ: ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಹಿಂದೊಮ್ಮೆ ತಾನು ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದೆ ಎಂದು ಹೇಳಿಕೊಂಡಿದ್ದರು. ಕ್ರಮೇಣ ಅದರಿಂದ ಚೇತರಿಸಿಕೊಂಡು, ಮಾನಸಿಕ ಸಮಸ್ಯೆಗೆ ತುತ್ತಾದವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. ಆದರೆ, ಈಗಲೂ ಶ್ರುತಿ ಆಗಾಗ ಅದೇ ಕಾರಣಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ.
ಇತ್ತೀಚೆಗೆ ಶ್ರುತಿ ಅಭಿನಯದ 'ವಾಲ್ಟರ್ ವೀರಯ್ಯ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಶ್ರುತಿ ಹಾಜರಿರಲಿಲ್ಲ. ಶ್ರುತಿ ಬರದೇ ಇದ್ದಿದ್ದಕ್ಕೆ ಕಾರಣ ಅವರಿಗೆ ಮಾನಸಿಕ ಸಮಸ್ಯೆಯಂತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಎಂದು ಸುದ್ದಿಯಾಯಿತು. ಕೆಲವು ವೆಬ್ಸೈಟ್ಗಳಲ್ಲೂ ಇದು ಪ್ರಕಟವಾಯಿತು.
ಇದನ್ನು ಓದಿ ಶ್ರುತಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅವರು, 'ಈ ತರಹ ಸುಳ್ಳುಸುದ್ದಿ ಹರಡುವುದರಿಂದ, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದಕ್ಕೆ ಜನ ಹೆದರುತ್ತಾರೆ. ಸಮಸ್ಯೆ ಇದ್ದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಇದೆಲ್ಲ ನಡೆಯಲ್ಲ. ನನ್ನ ಬಗ್ಗೆ ಎಷ್ಟೇ ಸುಳ್ಳುಸುದ್ದಿ ಹಬ್ಬಿಸಿದರೂ, ನಾನು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ, ಸಮಸ್ಯೆಯಲ್ಲಿ ಇರುವವರಿಗೆ ಸೂಕ್ತವಾಗಿ ಸ್ಪಂದಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಶ್ರುತಿ ತಾನ್ಯಾಕೆ 'ವಾಲ್ಟರ್ ವೀರಯ್ಯ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಾಗಲಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ. 'ನನಗೆ ವೈರಲ್ ಫೀವರ್ ಇದ್ದುದರಿಂದ ಹೋಗಲಾಗಲಿಲ್ಲ. ನಿಮಗೇನಾದರೂ ಸಮಸ್ಯೆ ಇದ್ದರೆ, ದಯವಿಟ್ಟು ಒಳ್ಳೆಯ ವೈದ್ಯರಿಗೆ ತೋರಿಸಿಕೊಳ್ಳಿ' ಎಂದು ತಮ್ಮನ್ನು ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.