ಸಿನಿವಾಣಿ

ಲಾಕ್​ಡೌನ್ ಪ್ರೀತಿಯಲ್ಲಿ ಬಿದ್ದ ಶ್ರುತಿ; ಕನ್ನಡದಲ್ಲಿ ಹೀಗೊಂದು ಹೊಸ ಪ್ರಯತ್ನ...

Webdesk - Ravikanth

ಬೆಂಗಳೂರು: ಲಾಕ್​ಡೌನ್ ಪರಿಕಲ್ಪನೆಯಲ್ಲಿ ಹಲವು ಸಿನಿಮಾ ಸೆಟ್ಟೇರಿರುವುದು ಗೊತ್ತಿರುವ ವಿಚಾರ. ಇದೀಗ ಅಂಥದ್ದೆ ಮತ್ತೊಂದು ಚಿತ್ರ ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಆ ಚಿತ್ರದ ಹೆಸರು ‘ಲವ್ ಇನ್ ದಿ ಟೈಮ್ ಆಫ್ ಕೋವಿಡ್’. ಈ ಚಿತ್ರದಲ್ಲಿ ನಟಿ ಶ್ರುತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದು, ರಾಕೇಶ್ ಮಯ್ಯ ನಾಯಕರಾಗಿದ್ದಾರೆ. ಜಯಂತ್ ಸೀಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಹಿಂದೆಂದೂ ಆಗದ ಪ್ರಯತ್ನ ಈ ಚಿತ್ರದಲ್ಲಾಗಿದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ ನಿರ್ದೇಶಕ ಜಯಂತ್.

‘ಮಲಯಾಳಂನಲ್ಲಿ ‘ಸೀ ಯೂ ಸೂನ್’ ಚಿತ್ರ ತೆರೆಗೆ ಬಂದಿತ್ತು. ಆ ಶೈಲಿಯಲ್ಲಿ ಈ ಸಿನಿಮಾ ಚಿತ್ರೀಕರಿಸಿದ್ದೇವೆ. ಗ್ರಾಫಿಕ್ಸ್ ಕೆಲಸವೂ ತುಂಬ ಇದೆ. ಎಲ್ಲ ಕಲಾವಿದರೂ ಅವರವರ ಮನೆಯಿಂದಲೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಒಬ್ಬರನ್ನೊಬ್ಬರು ಮುಖಕ್ಕೆ ಮುಖ ಕೊಟ್ಟು ಯಾರೂ ಕಾಣಿಸಿಕೊಂಡಿಲ್ಲ’ ಎನ್ನುವ ನಿರ್ದೇಶಕರು. ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ’ ಎಂದೂ ಹೇಳುತ್ತಾರೆ. ಕಳೆದ ಡಿಸೆಂಬರ್​ನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಈಗಾಗಲೇ ಶೇ. 90 ಭಾಗದ ಶೂಟಿಂಗ್ ಮುಗಿದಿದೆ. ಸದ್ಯ, ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ಇನ್ನು, ಈ ಚಿತ್ರದ ಬಗ್ಗೆ ತುಂಬ ಎಗ್ಸೈಟ್​ ಆಗಿರುವ ಶ್ರುತಿ, ‘ಈ ಚಿತ್ರದ ಕಥೆ ಕೇಳುತ್ತಿದ್ದಂತೆ ಅಚ್ಚರಿ ಅನಿಸಿತು. ಇಲ್ಲಿಯವರೆಗೂ ಸಹ ಕಲಾವಿದರ ಜತೆಗೆ ನಟಿಸಿದ್ದೆ. ಇದೀಗ ಮೊದಲ ಬಾರಿ ನಾನೊಬ್ಬಳೇ ಕ್ಯಾಮರಾ ಜತೆ ನಟಿಸಿದ್ದೇನೆ. 10 ವರ್ಷದ ಬಳಿಕ ಕಾಲೇಜು ಸ್ನೇಹಿತ ಆನ್​ಲೈನ್​ನಲ್ಲಿ ಸಿಗ್ತಾನೆ. ಮುಂದೆ ಇಬ್ಬರ ಒಡನಾಟ ಎಲ್ಲಿಗೆ ಹೋಗುತ್ತದೆ ಎಂಬುದೇ ಚಿತ್ರದ ಕಥೆ. ಇಲ್ಲಿ ಶೀಲಾ ಹೆಸರಿನ ಪಾತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ. ಇನ್ನುಳಿದಂತೆ ಅಪೂರ್ವ ಭಾರದ್ವಾಜ್, ಗೌತಮ್ ಶಂಕರ್​ವುೂರ್ತಿ, ಶ್ರವಣ್ ಐತಾಳ್, ಪವನ್ ವೇಣುಗೋಪಾಲ್ ಪಾತ್ರವರ್ಗದಲ್ಲಿದ್ದಾರೆ. ಭರತ್ ಬಿಜೆ ಸಂಗೀತ, ಪ್ರದೀಪ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ.