ಸಿನಿವಾಣಿ

ನೃತ್ಯ ಮಾಡುತ್ತ ಶ್ರುತಿ ವಾಪಸ್

chandru

ಬೆಂಗಳೂರು: ನಟಿ ಶ್ರುತಿ ಹರಿಹರನ್ ಮಗಳು ಜಾನಕಿ ಜತೆ ಚೆಂದನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ಪೂರ್ತಿ ಸಮಯವನ್ನು ಮುದ್ದು ಮಗಳಿಗಾಗಿಯೇ ಮೀಸಲಿಟ್ಟಿದ್ದ ಅವರು, ಇದೀಗ ಸಿನಿಮಾಕ್ಕೂ ಒಂದಷ್ಟು ಸಮಯ ಮಾಡಿಕೊಂಡು ಮತ್ತೆ ಅದರತ್ತ ಮುಖ ಮಾಡಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಸೂರ್ಯ ವಸಿಷ್ಠ. ಈ ಹಿಂದೆ ರೂಪಾ ರಾವ್ ಅವರೊಂದಿಗೆ ‘ಗಂಟುಮೂಟೆ’ ಚಿತ್ರದಲ್ಲಿ ನಟಿಸಿದ್ದ ಸೂರ್ಯ, ಈಗ ಚೊಚ್ಚಲ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಇನ್ನೇನು ಮಗು ಆಯ್ತು. ಸಿನಿಮಾ ಕಡೆ ಹೊರಳುವುದು ಅನುಮಾನ ಎಂದೇ ಭಾವಿಸಲಾಗಿತ್ತು. ಆದರೆ, ಪುನಃ ಸಿನಿಮಾಕ್ಕೆ ಬರುವ ವಿಚಾರವನ್ನು ಸ್ವತಃ ಶ್ರುತಿ ಹೇಳಿಕೊಂಡು, ಸರ್ಪ್ರೖೆಸ್ ನೀಡಿದ್ದಾರೆ. ಈ ಚಿತ್ರದಲ್ಲಿ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳಲಿರುವ ಅವರು, ಮಾಯಾ ಹೆಸರಿನ ಪಾತ್ರವನ್ನು ಪೋಷಿಸಲಿದ್ದಾರೆ.

ಸೂರ್ಯ, ನಾಲ್ಕು ವರ್ಷದ ಹಿಂದೆಯೇ ಶ್ರುತಿಗೆ ಈ ಕಥೆ ಹೇಳಿದ್ದರಂತೆ. ಸಾಲುಸಾಲು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದರಿಂದ ಚಿತ್ರ ಶುರುವಾಗಿರಲಿಲ್ಲ. ಇದೀಗ ಒಂದಷ್ಟು ಬದಲಾವಣೆ ಜತೆಗೆ ತಂಡ ಆಗಮಿಸುತ್ತಿದೆ. ಫೆಬ್ರವರಿಯಲ್ಲಿ ‘ಆದ್ಯಾ’ ಸಿನಿಮಾ ತೆರೆಕಂಡಿದ್ದನ್ನು ಬಿಟ್ಟರೆ, ಬೇರಾವ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿರುವ ಅವರು, ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸುವ ನಿರೀಕ್ಷೆ ಇದೆ.