ಸಿನಿವಾಣಿ

ಘೋಸ್ಟ್ ಶಿವಣ್ಣ: ಶ್ರೀನಿ ನಿರ್ದೇಶನದಲ್ಲಿ ಆ್ಯಕ್ಷನ್​ ಥ್ರಿಲ್ಲರ್..

ಬೆಂಗಳೂರು: ‘ಓಲ್ಡ್ ಮಾಂಕ್’ ನಂತರ ಆರ್​ಜೆ ಶ್ರೀನಿ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಾರಿ ಅವರು ಶಿವರಾಜಕುಮಾರ್ ಅಭಿನಯದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸುವುದಕ್ಕೆ ಮುಂದಾಗಿದ್ದು, ಚಿತ್ರಕ್ಕೆ ‘ಘೋಸ್ಟ್’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್​ನಡಿ ಸಂದೇಶ್ ನಾಗರಾಜ್ ನಿರ್ವಿುಸುತ್ತಿದ್ದಾರೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಶ್ರೀನಿ, ‘ಲಾಕ್​ಡೌನ್ ಸಮಯದಲ್ಲಿ ಒಂದು ಥ್ರಿಲ್ಲರ್ ಕಥೆ ಮಾಡಿಟ್ಟುಕೊಂಡಿದ್ದೆ. ಇತ್ತೀಚೆಗೊಮ್ಮೆ ಸಂದೇಶ್ ನಾಗರಾಜ್ ಸಿಕ್ಕಿದ್ದರು. ಶಿವಣ್ಣಗೆ ಒಳ್ಳೆಯ ಕಥೆ ಇದ್ದರೆ ಹೇಳಿ ಎಂದರು. ಇದೆ ಎಂದೆ. ಮರುದಿನ ಮೀಟಿಂಗ್ ಫಿಕ್ಸ್ ಆಯಿತು. ಕಥೆ ಕೇಳಿ ಶಿವಣ್ಣ ಖುಷಿಯಾದರು. ಟೈಟಲ್ ಕೂಡಾ ಅವರಿಗೆ ಇಷ್ಟವಾಗಿದೆ’ ಎಂದು ಅವರು ಹೇಳುತ್ತಾರೆ.

ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕಥೆ ಜೈಲಿನಲ್ಲಿ ಸಾಗುತ್ತದಂತೆ. ‘ವಿಭಿನ್ನ ಥ್ರಿಲ್ಲರ್ ಚಿತ್ರವಿದು. ಬಹುತೇಕ ಜೈಲಿನಲ್ಲಿ ಸಾಗುತ್ತದೆ. ನಾಯಕಿ ಇರುವುದಿಲ್ಲ. ಒಂದಿಷ್ಟು ಪಾತ್ರಗಳ ಸುತ್ತ ಈ ಚಿತ್ರ ಸುತ್ತುತ್ತದೆ. ಸದ್ಯಕ್ಕೆ ಬೇರೆ ಯಾವ ಕಲಾವಿದರು ಮತ್ತು ತಂತ್ರಜ್ಞರು ಆಯ್ಕೆ ಆಗಿಲ್ಲ. ಕಥೆ ಓಕೆ ಆಗಿದ್ದು, ಮುಂದಿನ ತಿಂಗಳ ಹೊತ್ತಿಗೆ ಸ್ಕ್ರಿಪ್ಟ್ ಕೆಲಸ ಪೂರ್ತಿಯಾಗುತ್ತದೆ’ ಎನ್ನುತ್ತಾರೆ ಶ್ರೀನಿ.