ಸಿನಿವಾಣಿ

ಶ್ರೇಯಸ್​, ಪ್ರಿಯಾ ಪ್ರಕಾಶ್​ ವಾರಿಯರ್​ ನಟಿಸಿರುವ ‘ವಿಷ್ಣುಪ್ರಿಯಾ‘ ಫೆ. 21ಕ್ಕೆ ರಿಲೀಸ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್​ ಮತ್ತು ಮಾಲಿವುಡ್​ ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ "ವಿಷ್ಣುಪ್ರಿಯಾ'. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ತೆರೆಗೆ ಬಂದು ಮೂರು ವರ್ಷಗಳಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡವಾಗಿ ಇದೀಗ ರಿಲೀಸ್​ಗೆ ರೆಡಿಯಾಗಿದೆ. ಇತ್ತೀಚೆಗಷ್ಟೆ ಚಿತ್ರತಂಡ ಇದೇ ಫೆ.21ರಂದು ಸಿನಿಮಾ ರಿಲೀಸ್​ ಎಂದು ಘೋಷಿಸಿದೆ.

ಟೈಟಲ್​ ಹೇಳುವಂತೆ ಚಿತ್ರದಲ್ಲಿ ನಾಯಕನ ಹೆಸರು ವಿಷ್ಣು ಮತ್ತು ನಾಯಕಿಯ ಹೆಸರು ಪ್ರಿಯಾ. ಇದು 90ರ ದಶಕದ ಪ್ರೇಮಕಥೆಯಾಗಿದ್ದು ಮಲಯಾಳಂ ನಿರ್ದೇಶಕ ವಿ.ಕೆ. ಪ್ರಕಾಶ್​ ಆ್ಯಕ್ಷನ್​ -ಕಟ್​ ಹೇಳಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ಚಿತ್ರಗಳಾದ "ಪುನರಾದಿವಾಸಂ' ಮತ್ತು "ನಿರ್ಣಾಯಕಂ' ಸೇರಿ 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತಿ ಅವರದು. ಈ ಹಿಂದೆ 2010ರಲ್ಲಿ ಕನ್ನಡದ "ಐದೊಂದ್ಲಾ ಐದು' ಚಿತ್ರ ನಿರ್ದೇಶಿಸಿದ್ದ ಪ್ರಕಾಶ್​ ಇದೀಗ "ವಿಷ್ಣುಪ್ರಿಯಾ'ಗೆ ಆ್ಯಕ್ಷನ್​-ಕಟ್​ ಹೇಳುವ ಮೂಲಕ ಸ್ಯಾಂಡಲ್​ವುಡ್​ಗೆ ವಾಪಸ್ಸಾಗಿದ್ದಾರೆ.

ಚಿತ್ರದ ಬಗ್ಗೆ ನಾಯಕ ಶ್ರೇಯಸ್​, "ಜೀವನದಲ್ಲಿ ಪ್ರೀತಿ ಎಂಬುದು ಎಷ್ಟು ಮುಖ್ಯ ಎಂದು ತೋರಿಸಲಾಗಿದೆ. ಕೌಟುಂಬಿಕ ಮೌಲ್ಯಗಳಿಗೆ ಹೆಚ್ಚು ಮಹತ್ವವಿದ್ದು, ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿ ಎನ್ನುವ ಯುವಕನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದರ ಸುತ್ತ ಕಥೆ ಸಾಗುತ್ತದೆ' ಎಂದು ಹೇಳಿಕೊಳ್ಳುತ್ತಾರೆ. ಶ್ರೇಯಸ್​, ಪ್ರಿಯಾ ಜತೆ ಅಚ್ಯುತ್​ ಕುಮಾರ್​, ಸುಚೇಂದ್ರ ಪ್ರಸಾದ್​ ಪ್ರಮುಖ ತಾರಾಗಣದಲ್ಲಿದ್ದಾರೆ.