‘ಇಂಥದ್ದೇ ಪಾತ್ರ ಮಾಡಬೇಕೆಂಬ ಹಂಬಲ ಇಲ್ಲ. ಸ್ಕ್ರಿಪ್ಟ್ ಏನೆಲ್ಲ ಡಿಮಾಂಡ್ ಮಾಡುತ್ತೋ ಅದನ್ನು ಕೊಡಲು ನೂರರಷ್ಟು ಶ್ರಮ ಹಾಕುತ್ತೇನೆ ...’ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಅವರ ಮಾತಿದು. ಸದ್ಯ ರೀಷ್ಮಾ ನಟನೆಯ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿಲ್ಲ. ಆದರೂ ಸಾಲುಸಾಲು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಸಿನಿಮಾ ಖಾತೆಗೆ ಹೊಸ ಸೇರ್ಪಡೆ, ‘ರಾಣ’.
ಗುಜ್ಜಲ್ ಪುರುಷೋತ್ತಮ್ ನಿರ್ವಣದ ನಂದಕಿಶೋರ್ ಮತ್ತು ಶ್ರೇಯಸ್ ಮಂಜು ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ಮೊದಲ ಚಿತ್ರವಿದು. ಇತ್ತೀಚೆಗಷ್ಟೇ ಮುಹೂರ್ತವೂ ಮುಗಿದಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ಉಪೇಂದ್ರ ನಿರ್ದೇಶನ ಮಾಡಿದ್ದು ವಿಶೇಷ. ಶೀರ್ಷಿಕೆಗೆ ತಕ್ಕಂತೆ ಶ್ರೇಯಸ್ಗೆ ಮಾಸ್ ಮತ್ತು ಆಕ್ಷನ್ ಅವತಾರ ಈ ಚಿತ್ರದಲ್ಲಿರಲಿದೆ. ಅದಕ್ಕಾಗಿ ಈಗಾಗಲೇ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರವರು. ಇತ್ತ ಅವರಿಗೆ ನಾಯಕಿಯಾಗಿ ಆಯ್ಕೆಯಾಗಿರುವ ರೀಷ್ಮಾ ಸಹ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಆ ಖುಷಿಯನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
‘ನಂದಕಿಶೋರ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅಲ್ಲಿ ನಾಯಕನ ಪಾತ್ರದಷ್ಟೇ ನಾಯಕಿ ಪಾತ್ರಕ್ಕೂ ಮಹತ್ವ ಇರುತ್ತದೆ. ‘ರಾಣ’ ಚಿತ್ರದಲ್ಲಿಯೂ ನನ್ನ ಪಾತ್ರವೂ ಅಷ್ಟೇ ವಿಶೇಷತೆಯಿಂದ ಕೂಡಿದೆ. ಈ ಹಿಂದಿನ ಸಿನಿಮಾಕ್ಕೆ ಹೋಲಿಕೆ ಮಾಡಿದರೆ, ಸಂಪೂರ್ಣ ವಿಭಿನ್ನ ಪಾತ್ರ ಸಿಕ್ಕಿದೆ. ಯಾವುದಕ್ಕೂ ಹೆದರದೆ, ಅನಿಸಿದ್ದನ್ನು ನೇರವಾಗಿ ಮಾತನಾಡುವ ಪಾತ್ರ ಇಲ್ಲಿದೆ’ ಎನ್ನುವ ರೀಷ್ಮಾ, ತಮ್ಮ ಇನ್ನೆರಡು ಚಿತ್ರಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಾರೆ. ‘ಪ್ರೇಮ್ ಅವರ ನಿರ್ದೇಶನದಲ್ಲಿ ನಿರ್ವಣವಾಗಿರುವ ‘ಏಕ್ ಲವ್ ಯಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ ಸಿನಿಮಾದ ಬಿಡುಗಡೆಗೂ ಕಾಯುತ್ತಿದ್ದೇನೆ.
ಇತ್ತ ಮೋಹನ್ ನಿರ್ದೇಶನದ ‘ಮಾರ್ಗ’ ನನಗೆ ಸಿಕ್ಕ ಹೊಸ ತರಹದ ಸಿನಿಮಾ. ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲಿಯೇ ಬಾಕಿ ಉಳಿದ ಶೂಟಿಂಗ್ ಮತ್ತೆ ಶುರುವಾಗಲಿದೆ. ಆ ಚಿತ್ರದಲ್ಲಿಯೂ ಭಾಗಿಯಾಗಲಿದ್ದೇನೆ’ ಎನ್ನುತ್ತಾರೆ. ನಟನೆ ಮತ್ತು ಪಾತ್ರಗಳ ಆಯ್ಕೆ ವಿಚಾರದಲ್ಲಿಯೂ ರೀಷ್ಮಾ ತಮ್ಮದೇ ನಿಲುವು ಹೊಂದಿದ್ದಾರೆ ‘ಪಾತ್ರಗಳ ಆಯ್ಕೆ ವಿಚಾರದಲ್ಲಿ ನಾನು ಚ್ಯೂಸಿಯಲ್ಲ. ಬದಲಿಗೆ ಒಪ್ಪಿಕೊಂಡ ಕಥೆ ಅಥವಾ ಸ್ಕ್ರಿಪ್ಟ್ ಹೇಗೆ ಡಿಮಾಂಡ್ ಮಾಡುತ್ತದೋ ಅದಕ್ಕೆ ನಾನು ಬದ್ಧ ಎಂಬುದು ರೀಷ್ಮಾ ಮಾತು.