ಸಿನಿವಾಣಿ

ಕ್ಯೂನಲ್ಲಿ ಶ್ರೇಯಸ್; ಈ ಚಿತ್ರಕ್ಕೂ ನಾಗಶೇಖರ್ ನಿರ್ದೇಶನ

vinaymk1969

ಬೆಂಗಳೂರು: ‘ಡಾರ್ಲಿಂಗ್’ ಕೃಷ್ಣ ಅಭಿನಯದಲ್ಲಿ ನಾಗಶೇಖರ್, ‘ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್​ಕಾಂ’ ಎಂಬ ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಬಂದಿತ್ತು. ಇದೀಗ, ನಿರ್ವಪಕ ಕೆ. ಮಂಜು ಮಗ ಶ್ರೇಯಸ್ ಅಭಿನಯದಲ್ಲಿ ‘ಕ್ಯೂ’ ಎಂಬ ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿರುವ ಸುದ್ದಿ ಬಂದಿದೆ.

ಶ್ರೇಯಸ್ ಅಭಿನಯದಲ್ಲಿ ‘ಕ್ಯೂ’ ಎಂಬ ಚಿತ್ರ ನಿರ್ದೇಶಿಸುತ್ತಿರುವುದಾಗಿ ನಾಗಶೇಖರ್ ಘೋಷಿಸಿದ್ದು, ಈಗಾಗಲೇ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ಹಾಗಂತ ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ, ಚಿತ್ರ ಶುರುವಾಗುತ್ತದೆ ಎಂದಲ್ಲ. ಚಿತ್ರ ಶುರುವಾಗುವುದೇನಿದ್ದರೂ ಮುಂದಿನ ವರ್ಷವೇ. ಮೊದಲು ‘ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್​ಕಾಂ’ ಮುಗಿಯಬೇಕು. ಆ ನಂತರ ‘ಕ್ಯೂ’ ಶುರುವಾಗಲಿದೆ.

ಹೊಸ ಚಿತ್ರದ ಬಗ್ಗೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಶ್ರೇಯಸ್, ‘ಇತ್ತೀಚೆಗೆ ನಾಗಶೇಖರ್ ಅವರು ಮನೆಗೆ ಬಂದಿದ್ದಾಗ, ನನಗೆ ಸಿನಿಮಾ ಮಾಡುವುದಿಲ್ಲವಾ ಎಂದು ಕೇಳಿದೆ. ನಾಳೆಯೇ ಒಂದು ಕಥೆ ಹೇಳುತ್ತೀನಿ ಎಂದು ಹೋದ ನಾಗಶೇಖರ್, ಮರುದಿನ ಬಂದು ಚಿತ್ರದ ಒನ್​ಲೈನ್ ಹೇಳಿದರು. ಕಥೆ ಬಹಳ ಇಷ್ಟವಾಯಿತು. ಇನ್ನು ಚಿತ್ರಕಥೆ ಸಿದ್ಧವಾಗಬೇಕು. ಪುರುಷೋತ್ತಮ್ ಅವರು ಈ ಚಿತ್ರ ನಿರ್ವಿುಸುತ್ತಿದ್ದಾರೆ. ‘ಕ್ಯೂ’ ಎಂಬ ರ್ವಂಗ್ ಟೈಟಲ್ ಇಡಲಾಗಿದೆ’ ಎನ್ನುತ್ತಾರೆ.

ಇನ್ನು ಶ್ರೇಯಸ್ ಅಭಿನಯದ ‘ವಿಷ್ಣುಪ್ರಿಯಾ’ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆಯಂತೆ. ‘ರೀ-ರೆಕಾರ್ಡಿಂಗ್ ನಡೆಯುತ್ತಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣ ಆಗಬೇಕಿದೆ. ಲಾಕ್​ಡೌನ್ ಮುಗಿದ ತಕ್ಷಣ, ಚಿತ್ರದ ಕೆಲಸಗಳು ಮುಂದುವರೆಯಲಿವೆ’ ಎನ್ನುತ್ತಾರೆ ಶ್ರೇಯಸ್.