ಸಿನಿವಾಣಿ

ಕಿಚ್ಚ ಸುದೀಪ್ ನಾಯಕತ್ವದ ಫ್ಯಾಂಟಮ್​ಗೆ ಶ್ರದ್ಧಾ ನಾಯಕಿ?

‘ಕಿಚ್ಚ’ ಸುದೀಪ್ ನಾಯಕತ್ವದ ‘ಫ್ಯಾಂಟಮ್ ಸಿನಿಮಾಕ್ಕೆ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

‘ಈಗ’ ಚಿತ್ರದ ಬಳಿಕ ಸುದೀಪ್- ಸಮಂತಾ ಜೋಡಿ ಮತ್ತೊಮ್ಮೆ ತೆರೆಮೇಲೆ ಮೋಡಿ ಮಾಡಲಿದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿರುವಾಗಲೇ, ಸುದೀಪ್ ಜೊತೆಗೆ ನಟಿಸುವ ಅವಕಾಶ ಕನ್ನಡತಿ ಶ್ರದ್ಧಾ ಶ್ರೀನಾಥ್ ಪಾಲಿಗೆ ಒಲಿದಿದೆ ಎನ್ನಲಾಗಿದೆ. ಅನೂಪ್ ಭಂಡಾರಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಫ್ಯಾಂಟಮ್ ಚಿತ್ರೀಕರಣಕ್ಕೆ ಸೋಮವಾರ ಚಾಲನೆ ಸಿಕ್ಕಿದೆ.

ಈ ಚಿತ್ರದಲ್ಲಿ ಸುದೀಪ್ ಜೊತೆಗೆ ನಿರೂಪ್ ಭಂಡಾರಿ ಸಹ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಈಗ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆಯಾದರೂ, ಚಿತ್ರತಂಡ ಇನ್ನಷ್ಟೇ ಈ ಸುದ್ದಿಯನ್ನು ಅಧಿಕೃತ ಮಾಡಬೇಕಿದೆ.

ಹಾಗಾದರೆ, ಸಮಂತಾ ವಿಷಯ ಏನಾಯ್ತು? ಟಾಲಿವುಡ್ ಮೂಲಗಳ ಪ್ರಕಾರ, ಸಮಂತಾ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಯಾವ ಹೊಸ ಚಿತ್ರವನ್ನೂ ಒಪ್ಪಿಕೊಳ್ಳುತ್ತಿಲ್ಲವಾದ್ದರಿಂದ ‘ಫ್ಯಾಂಟಮ್​ನಿಂದ ದೂರವೇ ಉಳಿದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.