ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ನಂತಹ ಪ್ರಮುಖ ಒಟಿಟಿ ವೇದಿಕೆಗಳು ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದೀಗ ಈ ಒಟಿಟಿಗಳಿಗೆ ಸೆಡ್ಡು ಹೊಡೆದಿರುವ ಕನ್ನಡ ಸಿನಿಮಾ ಶೋಷಿತೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಟೆಕ್ಕಿ ಶಶಿಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಕಲನ ಮಾಡಿ ಆ್ಯಕ್ಷನ್-ಕಟ್ ಮಾಡಿರುವ ಈ ಚಿತ್ರ 2023ರ ಡಿಸೆಂಬರ್ನಲ್ಲಿ ಥಿಯೇಟರ್ಗಳಲ್ಲಿ ರಿಲೀಸ್ ಆಗಿತ್ತು. ನಿರೂಪಕಿ, ನಟಿ ಡಾ. ಜಾನ್ವಿ ರಾಯಲ, ರೂಪಾ ರಾಯಪ್ಪ, ಪ್ರಶಾಂತ್, ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.
ನಿರ್ದೇಶಕರು ಎಂಟು ತಿಂಗಳಿಗೂ ಹೆಚ್ಚು ಕಾಲ ಅಮೆಜಾನ್, ನೆಟ್‌ಫ್ಲಿಕ್ಸ್ ನಂತಹ ಪ್ರಮುಖ ಒಟಿಟಿ ವೇದಿಕೆಗಳನ್ನು ಸಂಪರ್ಕಿಸಿದರೂ, ಸ್ಪಂದಿಸಿರಲಿಲ್ಲ. ಹಾಗಂತ ಧೃತಿಗೆಡದ ಚಿತ್ರತಂಡ ಕನ್ನಡದ ಶೋಷಿತೆ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ಶ್ರೀಮತಿ ಎಂಬ ಟೈಟಲ್ನಲ್ಲಿ ನೇರವಾಗಿ ಯೂಟ್ಯೂಬ್ನಲ್ಲಿ ರಿಲೀಸ್ ಮಾಡಿದ್ದು, ಕೇವಲ ಒಂದು ತಿಂಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಶೇಷ ಅಂದರೆ, ಯೂಟ್ಯೂಬ್ ಲಿಂಕ್ನಲ್ಲಿ ಕೆಲವರು ಟಿಕೆಟ್ ದರ ಅಂತ ಹಣವನ್ನೂ ಪಾವತಿಸಿ, ಚಿತ್ರತಂಡದ ಪ್ರಯತ್ನವನ್ನು ಬೆಂಬಲಿಸಿದ್ದಾರೆ.
ಈ ಯಶಸ್ಸಿನ ಬೆನ್ನಲ್ಲೇ ಕಳೆದ ಕೆಲ ದಿನಗಳ ಹಿಂದಷ್ಟೇ ಕನ್ನಡದ ಶೋಷಿತೆಯನ್ನೂ ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲಾಗಿದ್ದು, 25 ಲಕ್ಷಕ್ಕೂ ಹೆಚ್ಚು ಸಿನಿಮಾ ವೀಕ್ಷಿಸಿದ್ದಾರೆ. ಆ ಮೂಲಕ ಸ್ಟಾರ್ಗಳಿಲ್ಲದಿದ್ದರೂ, ಒಟಿಟಿಗಳು ಸಪೋರ್ಟ್ ಮಾಡದಿದ್ದರೂ ಜನ ಉತ್ತಮ ಕಂಟೆಂಟ್ ಚಿತ್ರಗಳನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಚಿತ್ರತಂಡ ಸಂಭ್ರಮಿಸಿದೆ. ಇದೇ ಖುಷಿಯಲ್ಲಿ ಮುಂದಿನ ದಿನಗಳಲ್ಲಿ ಚಿತ್ರವನ್ನು ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.