ಸಿನಿವಾಣಿ

ಹಾಡಿನೊಂದಿಗೆ ಮುಕ್ತಾಯವಾಯಿತು ಪೃಥ್ವಿ ಅಂಬರ್​, ಮಿಲನಾ ಅಭಿನಯದ ಹೊಸ ಚಿತ್ರ …

chetannadiger

ಬೆಂಗಳೂರು: ಪೃಥ್ವಿ ಅಂಬರ್​ ಮತ್ತು ಮಿಲನಾ ನಾಗರಾಜ್​ ಅಭಿನಯದ 'ಫಾರ್​ ರಿಜಿಸ್ಟ್ರೇಶನ್​' ಚಿತ್ರವನ್ನು ಮುಂದಿನ ವರ್ಷದ ಪ್ರೇಮಿಗಳ ದಿನದಂದು (ಫೆಬ್ರವರಿ 14) ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಣೆ ಮಾಡಿದೆ. ಆದರೆ, ಚಿತ್ರದ ಚಿತ್ರೀಕರಣ ಮಾತ್ರ ಮುಗಿದಿರಲಿಲ್ಲ. ಕೊನೆಯ ಹಾಡಿನ ಚಿತ್ರೀಕರಣ ಮುಗಿಸುವ ಮೂಲಕ ಚಿತ್ರತಂಡ, ಇದೀಗ ಕುಂಬಳಕಾಯಿ ಒಡೆದಿದೆ.

ಹೌದು, 'ಫಾರ್ ರಿಜಿಸ್ಟರೇಷನ್' ಚಿತ್ರದ ಚಿತ್ರೀಕರಣ ಹಾಡೊಂದರ‌ ಚಿತ್ರೀಕರಣದೊಂದಿಗೆ ಮುಕ್ತಾಯವಾಗಿದೆ. ಅಂಡರ್ ವಾಟರ್​ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಈ ಹಾಡಿನ ಚಿತ್ರೀಕರಣಕ್ಕಾಗಿ ಮೋಕೊ ಬೋಟ್ ಎಂಬ ವಿಶಿಷ್ಟ ಕ್ಯಾಮೆರಾವೊಂದನ್ನು ಬಳಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಯಾವುದೇ ಚಿತ್ರಕ್ಕೂ ಈ ತರಹದ ಕ್ಯಾಮೆರಾ ಬಳಿಸಿರಲಿಲ್ಲವಂತೆ. ಈ ಚಿತ್ರಕ್ಕೇ ಮೊದಲು ಬಳಸಿರುವುದು ಎನ್ನುತ್ತಾರೆ ನಿರ್ದೇಶಕ ನವೀನ್ ದ್ವಾರಕನಾಥ್.

ಇಮ್ರಾನ್​ ಸರ್ದಾರಿಯಾ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಅಭಿಷೇಕ್​ ಕಾಸರಗೋಡು ಸೆರೆಹಿಡಿದಿದ್ದು, ಪೃಥ್ವಿ ಮತ್ತು ಮಿಲನಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆರ್​.ಕೆ. ಹರೀಶ್​ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ.

ನಿಶ್ಚಲ್ ಫಿಲಂಸ್​ನಡಿ ಎನ್ .ನವೀನ್ ರಾವ್ ನಿರ್ಮಿಸಿರುವ 'ಫಾರ್ ರಿಜಿಸ್ಟ್ರೇಶನ್​' ಚಿತ್ರದಲ್ಲಿ ಪೃಥ್ವಿ ಮತ್ತು ಮಿಲನಾ ಜತೆಗೆ ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲ ನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ. ನವೀನ್ ದ್ವಾರಕನಾಥ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಭಿಷೇಕ್ ಕಲ್ಲತ್ತಿ ಮತ್ತು ಅಭಿಷೇಕ್ ಕಾಸರಗೋಡು ಇಬ್ಬರೂ ಛಾಯಾಗ್ರಹಣ ಮಾಡಿದ್ದಾರೆ.