ಬೆಂಗಳೂರು: ಕನ್ನಡದಲ್ಲಿ ವೆಬ್ ಸರಣಿಗಳ ಟ್ರೆಂಡ್ ಹೆಚ್ಚಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಜೀ5ನಲ್ಲಿ ’ಅಯ್ಯನ ಮನೆ’ ಎಂಬ ಸರಣಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿತ್ತು. ಇದೀಗ ಅದೇ ಹಾದಿಯಲ್ಲಿ ಮತ್ತೊಂದು ವೆಬ್ ಸಿರೀಸ್ ತೆರೆ ಕಾಣಲು ರೆಡಿಯಾಗಿದೆ. ಅದೇ ‘ಶೋಧ’. ಈಗಾಗಲೇ ಟ್ರೇಲರ್ ಮೂಲಕ ಗಮನಸೆಳೆದಿರುವ ಈ ಸರಣಿ ಇದೇ 29ರಿಂದ ಜೀ 5ನಲ್ಲಿ ಪ್ರದರ್ಶನ ಆರಂಭಿಸಲಿದೆ. ಸುನಿಲ್ ಮೈಸೂರು ನಿರ್ದೇಶನದ ಸಸ್ಪೆನ್ಸ್-ಥ್ರಿಲ್ಲರ್ ‘ಶೋಧ’ದಲ್ಲಿ ‘ಲೂಸಿಯಾ’ ನಿರ್ದೇಶಕ ಪವನ್ ಕುಮಾರ್, ಸಿರಿ ರವಿಕುಮಾರ್, ಅರುಣ್ ಸಾಗರ್, ಅನುಷಾ ರಂಗನಾಥ್ ಕಲಾ ಬಳಗದಲ್ಲಿದ್ದಾರೆ. ನಟಿ ಸಪ್ತಮಿ ಗೌಡ ವಿಶೇಷ ಪಾತ್ರದಲ್ಲಿದ್ದಾರೆ.
ಜೀ ಬಿಜಿನೆಸ್ ಹೆಡ್ ದೀಪಕ್ ರಾಮುಲು, ‘ಜೀ5 ಈ ಮೊದಲು ಒಂದೇ ವೇದಿಕೆಯಾಗಿತ್ತು. ಇದೀಗ ಭಾಷೆಗೊಂದು ಒಟಿಟಿ ಶುರು ಮಾಡಿದ್ದೇವೆ. ಅದಕ್ಕಾಗಿ ಜೀ5 ಈಗ ಜೀ5 ಕನ್ನಡ ಆಗಿದೆ. ಅಲ್ಲದೇ ವೆಬ್ ಸಿರೀಸ್ ಕೂಡ ಶುರು ಮಾಡಿದ್ದೇವೆ. ‘ಅಯ್ಯನ ಮನೆ’ ಮಿನಿ ಸಿರೀಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅದರ ಮುಂದಿನ ಹೆಜ್ಜೆಯೇ ‘ಶೋಧ’ ಎಂದು ಮಾಹಿತಿ ನೀಡಿದರು. ನಾಯಕ ಪವನ್ ಕುಮಾರ್, ‘ನಾನು ಹಿಂದಿಯಲ್ಲಿ ಸಿರೀಸ್ ಮಾಡಿದ್ದೆ. ಆದರೆ, ಕನ್ನಡದಲ್ಲಿ ಸಿರೀಸ್ ಮಾಡಬೇಕು ಎಂದಾಗ ಅದು ರಿಜೆಕ್ಟ್ ಆಗುತ್ತಿತ್ತು. ಇದೀಗ ‘ಶೋಧ’ದಲ್ಲಿ ನಟಿಸಲು ಅವಕಾಶ ನೀಡಿದ್ದು ಖುಷಿ ನೀಡಿದೆ. ವೆಬ್ ಸಿರೀಸ್ ಮೂಲಕ ಒಳ್ಳೊಳ್ಳೆ ಕಥೆಗಳನ್ನು ಹೇಳಬಹುದು. ಇದರಿಂದ ತುಂಬ ಜನ ಬರಹಗಾರರು ಹಾಗೂ ನಿರ್ದೇಶಕರಿಗೆ ಅನುಕೂಲವಾಗಲಿದೆ’ ಎಂದು ಖುಷಿ ಹಂಚಿಕೊಂಡರು. ‘ಶೋಧ’ ಸರಣಿಯಲ್ಲಿ ಆರು ಸಂಚಿಕೆಗಳಿದ್ದು, ಸುಹಾಸ್ ನವರತ್ನ ಕಥೆ ಬರೆದಿದ್ದಾರೆ.