ಬಾಲಿವುಡ್ನ ಖ್ಯಾತ ನಟ ನವಾಜುದ್ದೀನ್ ಸಿದ್ಧೀಕಿಗೆ ಒಂದಾದ ಮೇಲೊಂದರಂತೆ ವಿಘ್ನಗಳು ಎದುರಾಗುತ್ತಿವೆ. ಸಹೋದರಿಯ ನಿಧನ ಒಂದು ಕಡೆಯಾದರೆ, ಈ ಆಘಾತದಿಂದ 71 ವರ್ಷದ ಅವರ ತಾಯಿ ಎರಡು ಬಾರಿ ಅನಾರೋಗ್ಯಕ್ಕೀಡಾಗಿದ್ದರು. ಹೀಗಿರುವಾಗಲೇ ನವಾಜುದ್ದೀನ್ ಮತ್ತು ಅವರ ಪತ್ನಿ ಆಲಿಯಾ ಸಿದ್ಧೀಕಿಯ ದಶಕದ ದಾಂಪತ್ಯವೂ ಕೊನೆಯಾಗುತ್ತಿದೆ.
2009ರಲ್ಲಿ ಮದುವೆಯಾಗಿದ್ದರು ನವಾಜುದ್ದೀನ್ ಮತ್ತು ಆಲಿಯಾ. ಆದರೆ, ಕಳೆದ ಹಲವು ವರ್ಷಗಳಿಂದ ಇಬ್ಬರ ನಡುವೆ ಒಂದಲ್ಲ ಒಂದು ಕಾರಣಕ್ಕೆ ಭಿನ್ನಾಭಿಪ್ರಾಯಗಳು ಏರ್ಪಡುತ್ತಲೇ ಇದ್ದವು. ಆ ಜಗಳಗಳು ತಾರಕಕ್ಕೆ ಹೋಗಿದ್ದೂ ಉಂಟು. ಇದೀಗ ಅದೆಲ್ಲದಕ್ಕೂ ಇತಿಶ್ರೀ ಹಾಡುವ ನಿಟ್ಟಿನಲ್ಲಿ, ಆಲಿಯಾ ಹೆಜ್ಜೆ ಇಟ್ಟಿದ್ದಾರೆ. ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ, ನೋಟಿಸನ್ನು ನವಾಜುದ್ದೀನ್ಗೆ ಸೋಮವಾರ ವಾಟ್ಸಾಪ್ ಮೂಲಕ ರವಾನಿಸಿದ್ದಾರೆ. ಅದರಲ್ಲಿ ಜೀವನಾಂಶಕ್ಕೂ ಬೇಡಿಕೆ ಇಟ್ಟಿದ್ದಾರೆ.
ಅಷ್ಟೇ ಅಲ್ಲ, ನವಾಜುದ್ದೀನ್ ಜತೆಗೆ ಮದುವೆಯಾದ ನಂತರ ಆಲಿಯಾ ಸಿದ್ದಿಕಿ ಎಂದು ಹೆಸರು ಬದಲಿಸಿಕೊಂಡಿದ್ದ
ಅಂಜನಾ ಕಿಶೋರ್ ಪಾಂಡೆ, ಇದೀಗ ಮೂಲ ಹೆಸರಿಗೆ ಮರಳುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ‘ನನ್ನ ಮೂಲ ಹೆಸರಿನಲ್ಲೇ ಮುಂದುವರಿಯಲು ಇಚ್ಛಿಸಿದ್ದೇನೆ. ಇನ್ನೊಬ್ಬರ ಅನುಕೂಲಕ್ಕಾಗಿ ನನ್ನ ಹೆಸರನ್ನು ಬದಲಿಸಿಕೊಳ್ಳುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. -ಏಜೆನ್ಸೀಸ್