ಊರಹಬ್ಬದ ವಿಷಯದಲ್ಲಿ ರಾಮದುರ್ಗದ ರಾಮೇಗೌಡನಿಗೂ ರಾಯದುರ್ಗದ ರಾಯಪ್ಪನಿಗೂ ಪೈಪೋಟಿ. ರಾಮೇಗೌಡ ರಾಮನಂಥ ವ್ಯಕ್ತಿತ್ವದವನಾದರೆ, ರಾಯಪ್ಪ ರಾವಣನಂಥವನು. ಅವರಿಬ್ಬರ ನಡುವಿನ ಪೈಪೋಟಿಯಲ್ಲಿ ರಾಯಪ್ಪನ ಮಗ ಕಣ್ಮುಚ್ಚುತ್ತಾನೆ. ಸಿಟ್ಟಾಗುವ ರಾಯಪ್ಪ, ರಾಮೇಗೌಡನ ವಂಶವನ್ನು ನಿರ್ವಂಶ ಮಾಡುವುದಾಗಿ ಶಪಥ ಮಾಡುತ್ತಾನೆ. ಈ ಜಟಾಪಟಿಯಲ್ಲಿ ರಾಮೇಗೌಡನ ಮಗ ಊರು ಬಿಟ್ಟು ಓಡಿ ಹೋಗುತ್ತಾನೆ ...’
‘ಶಿವಾರ್ಜುನ’ ಚಿತ್ರ ಆರಂಭವಾದ ಐದು ನಿಮಿಷಗಳಲ್ಲಿ ಇಷ್ಟೆಲ್ಲ ನಡೆದುಹೋಗುತ್ತದೆ. ಹಾಗೆ ಓಡಿಹೋದ ಹುಡುಗ ಏನಾದ ಎಂಬ ಉತ್ತರಕ್ಕೆ ದ್ವಿತೀಯಾರ್ಧದವರೆಗೂ ಕಾಯಬೇಕು. ಹಾಗಾದರೆ ಚಿತ್ರದ ಮೊದಲಾರ್ಧದಲ್ಲಿ ಏನಿದೆ ಎಂದರೆ ಮೂರು ಫೈಟು, ಎರಡು ಹಾಡು, ಸುಸ್ತಾಗುವಷ್ಟು ಕಾಮಿಡಿ, ಒಂದಿಷ್ಟು ಬೇಡದ ದೃಶ್ಯಗಳು. ಹಾಗಂತ ದ್ವಿತೀಯಾರ್ಧದಲ್ಲಿ ಚಿತ್ರ ಟ್ರ್ಯಾಕ್ಗೆ ಬಂದುಬಿಡುತ್ತದೆ ಎಂದು ಹೇಳುವ ಹಾಗಿಲ್ಲ. ಏಕೆಂದರೆ, ದ್ವಿತೀಯಾರ್ಧದಲ್ಲೂ ಅದೇ ಮುಂದುವರಿಯುತ್ತದೆ. ಮೊದಲಾರ್ಧದಲ್ಲಿದ್ದ ಒಂದಷ್ಟು ಜನ ಬದಲಾಗಿ, ಇನ್ನೊಂದಿಷ್ಟು ಜನ ಬಂದು ಹೋಗುತ್ತಾರೆ. ಅವರೆಲ್ಲ ಚಿತ್ರವನ್ನು ಇನ್ನಷ್ಟು ನಿಧಾನ ಮಾಡುತ್ತಾರೆ. ಈ ಮಧ್ಯೆ ರಾಮೇಗೌಡ ಮತ್ತು ರಾಯಪ್ಪನ ಕಥೆ ಮುಂದುವರಿಯುತ್ತದೆ. ಕೊನೆಗೆ ರಾಮೇಗೌಡನ ವಂಶವನ್ನು ನಿರ್ವಂಶ ಮಾಡುವುದಕ್ಕೆ ರಾಯಪ್ಪನಿಂದ ಸಾಧ್ಯವಾಗುತ್ತದಾ ಎಂಬುದೇ ‘ಶಿವಾರ್ಜುನ’ ಚಿತ್ರದ ಕ್ಲೈಮ್ಯಾಕ್ಸ್.
ಎರಡು ಕುಟುಂಬಗಳ ಜಿದ್ದಾಜಿದ್ದಿಯ ಕಥೆ ಪ್ರೇಕ್ಷಕರಿಗೆ ಹೊಸದೇನಲ್ಲ. ಆದರೆ, ಚಿರಂಜೀವಿ ಸರ್ಜಾಗೆ ಹೊಸದು. ಇತ್ತೀಚಿನ ವರ್ಷಗಳಲ್ಲಿ ಅವರು ಇಂಥ ಚಿತ್ರಗಳಲ್ಲಿ ನಟಿಸಿರಲಿಲ್ಲ. ಹಾಗಾಗಿ ಇದು ಅವರ ಮಟ್ಟಿಗೆ ಹೊಸ ಪ್ರಯತ್ನ. ಇಲ್ಲಿ ಚಿರು ತಮ್ಮ ಆಟ- ಹುಡುಗಾಟ- ಹೊಡೆದಾಟಗಳಿಂದ ಖುಷಿ ಕೊಡುತ್ತಾರೆ. ‘ಶಿವಾರ್ಜುನ’ ಒಂದು ಪಕ್ಕಾ ಕಮರ್ಷಿಯಲ್ ಚಿತ್ರ. ಮಾಸ್ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಏನೆಲ್ಲ ಬೇಕೋ ಅವೆಲ್ಲವೂ ಈ ಚಿತ್ರದಲ್ಲಿದೆ. ಹಾಗಾಗಿಯೇ ಈ ಚಿತ್ರ ಕ್ಲಾಸ್ ಪ್ರೇಕ್ಷಕರಿಗೆ ಅರಗಿಸಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಬಹುದು. ಇಲ್ಲಿ ಕಥೆ, ಲಾಜಿಕ್ ಹುಡುಕುವುದಕ್ಕೆ ಹೋಗಬಾರದು. ಮಾಸ್ ಪ್ರೇಕ್ಷಕರನ್ನು ಮನರಂಜಿಸುವ ಏಕೈಕ ಉದ್ದೇಶ ಚಿತ್ರತಂಡದ್ದಾದ್ದರಿಂದ ಅವರ ಮನರಂಜನೆಗೆ ಹೆಚ್ಚು ಒತ್ತು ಕೊಡಲಾಗಿದೆ. ಚಿರಂಜೀವಿ ಸರ್ಜಾಗೆ ಇಲ್ಲಿ ಇಬ್ಬಿಬ್ಬರು ನಾಯಕಿಯರು. ಈ ಪೈಕಿ ಅಮೃತಾ ಹಳ್ಳಿಹುಡುಗಿಯಾಗಿ ನಟಿಸಿದರೆ, ಅಕ್ಷತಾ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಹೇಳುವುದು ಕಷ್ಟ. ಇನ್ನು ಅವಿನಾಶ್, ತಾರಾ, ಕಿಶೋರ್ ಎಂದಿನಂತೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಧು ಕೋಕಿಲ, ಶಿವರಾಜ್ ಕೆ.ಆರ್. ಪೇಟೆ ಮತ್ತು ವಿಶ್ವ ಅವರ ಕಾಮಿಡಿ ಅಷ್ಟೇನೂ ನಗು ತರಿಸುವುದಿಲ್ಲ. ಇನ್ನು ಚಿತ್ರದ ಗೌಜು-ಗದ್ದಲದಲ್ಲಿ ಹಾಡುಗಳಾಗಲೀ, ಇತರೆ ತಾಂತ್ರಿಕ ಅಂಶಗಳಾಗಲೀ ಗಮನದಲ್ಲಿ ಉಳಿಯುವುದಿಲ್ಲ.
ಚಿತ್ರ: ಶಿವಾರ್ಜುನ ನಿರ್ದೇಶನ: ಶಿವತೇಜಸ್ ನಿರ್ವಣ: ಶಿವಾರ್ಜುನ ಪಾತ್ರವರ್ಗ: ಚಿರಂಜೀವಿ ಸರ್ಜಾ, ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್, ರವಿಕಿಶನ್, ಕಿಶೋರ್, ಅವಿನಾಶ್, ತಾರಾ, ಸಾಧುಕೋಕಿಲ ಮತ್ತಿತರರರು
| ಚೇತನ್ ನಾಡಿಗೇರ್ ಬೆಂಗಳೂರು