ಸಿನಿವಾಣಿ

ಕನ್ನಡಕ್ಕೆ ಹೊಸ ಓಟಿಟಿ: 'ಟಾಕೀಸ್​'ಗೆ ದಿನಕ್ಕೆ ಒಂದು ರೂ. ಮಾತ್ರ ...

chetannadiger

ಬೆಂಗಳೂರು: ಈ ಹಿಂದೆ ವಿಜಯ್​ ರಾಘವೇಂದ್ರ ನಿರ್ದೇಶನದ 'ಮಾಲ್ಗುಡಿ ಡೇಸ್​' ಚಿತ್ರ ನಿರ್ಮಿಸಿದ್ದ ರತ್ನಾಕರ್​ ಕಾಮತ್​, ಈಗ ತಮ್ ಸ್ವಯಂಪ್ರಭ ಸಂಸ್ಥೆಯ ಮೂಲಕ 'ಟಾಕೀಸ್​' ಎಂಬ ಆಪ್​ ಹೊರತಂದಿದ್ದಾರೆ. ಕನ್ನಡದಿಂದ ಕನ್ನಡಿಗರಿಗಾಗಿ ಎಂಬ ಘೋಷವಾಕ್ಯವಿರುವ ಈ ಆಪ್​ನ್ನು ಇತ್ತೀಚೆಗೆ 'ಕರುನಾಡ ಚಕ್ರವರ್ತಿ' ಶಿವರಾಜಕುಮಾರ್​ ಬಿಡುಗಡೆ ಮಾಡಿದ್ದಾರೆ.

ಸುಮಾರು 200 ಜನರ ಪರಿಶ್ರಮ, 700ಕ್ಕೂ ಅಧಿಕ ತಂತ್ರಜ್ಞರು ಹಾಗೂ 1200 ಕ್ಕೂ ಮೀರಿದ ಕಲಾವಿದರು ಈ 'ಟಾಕೀಸ್'ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ವೆಬ್ ಸೀರೀಸ್, ಧಾರಾವಾಹಿ, ಕಿರುಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳನ್ನು 'ಟಾಕೀಸ್' ಮೂಲಕ ವೀಕ್ಷಿಸಬಹುದಾಗಿದೆ. ಇದಕ್ಕೆ ತಗಲುವ ವೆಚ್ಚ ಒಂದು ವರ್ಷಕ್ಕೆ ಕೇವಲ 365 ರೂಪಾಯಿ ಮಾತ್ರ. ಅಂದಚರೆ, ದಿನಕ್ಕೆ ಒಂದು ರೂಪಾಯಿಯ ಹಾಗೆ ಇಲ್ಲಿ ಕಾರ್ಯಕ್ರಮಗಳನ್ನು ನೋಡಬಹುದು

'ಟಾಕೀಸ್​' ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್​, 'ತಂತ್ರಜ್ನಾನ ಬದಲಾದ ಹಾಗೆ ನಾವು ಸಹ ಬದಲಾಗಬೇಕು. ನಾನು ಈ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದೇನೆ. ಲಾಕ್​ಡೌನ್ ಸಮಯದಲ್ಲಿ ಸಾಕಷ್ಟು ವೆಬ್ ಸೀರೀಸ್ ನೋಡಿದ್ದೀನಿ. ನನ್ನ ಮಗಳು ನಿರ್ಮಿಸಿರುವ ವೆಬ್ ಸೀರೀಸ್ ಸಹ ಸದ್ಯದಲ್ಲೇ ಇದೇ ಆಪ್​ನಲ್ಲಿ ಬರಲಿದೆ. ಮುಂದೆ ನಾನು ಕೂಡ ಒಂದು ವೆಬ್ ಸೀರೀಸ್ ನಿರ್ಮಿಸಿ, ಅದರಲ್ಲಿ ನಟಿಸಲಿದ್ದೇನೆ. 'ಟಾಕೀಸ್' ತಂಡಕ್ಕೆ ಒಳ್ಳೆಯದಾಗಲಿ' ಎಂದರು ಶಿವರಾಜಕುಮಾರ್.

ಸ್ವಯಂಪ್ರಭ ಸಂಸ್ಥೆಯ ರುವಾರಿಗಳು ಹಾಗೂ ಈ ಆಪ್​​ನ ಸ್ಥಾಪಕರೂ ಆದ ರತ್ನಾಕರ್​ ಕಾಮತ್, ಲಕ್ಷ್ಮೀ ರತ್ನಾಕರ್ ಕಾಮತ್ ಹಾಗೂ ಗಣೇಶ್ ರತ್ನಾಕರ್ ಕಾಮತ್ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.