ಸಿನಿವಾಣಿ

Shivarajkumar Interview; ಫಿಟ್​ ಆ್ಯಂಡ್​ ಫೈನ್​ ಶಿವಣ್ಣ - ಮತ್ತೆ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬಿಜಿಯಾದ ನಟ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಈಗ ಮೊದಲಿನಂತಾಗಿದ್ದೇನೆ. ನಿಧಾನವಾಗಿ ವಾಕ್​ ಮಾಡಲು ಶುರು ಮಾಡಿ, ಈಗ ಹಿಂದಿನ ವೇಗದಲ್ಲೇ ನಡೆಯುತ್ತೇನೆ. ಮೊದಲು ಊಟ ಸೇರುತ್ತಿರಲಿಲ್ಲ. ಈಗೀಗ ಸ್ವಲ್ಪ ತಿನ್ನುತ್ತಿದ್ದು, ಇಂಪ್ರೂವ್​ ಆಗುತ್ತಿದೆ. ಜೀವನದ ಈ ಏರಿಳಿತದಿಂದ ಪಾಠ ಕಲಿತಿದ್ದೇನೆ' ಎಂದು ನಗುತ್ತಲೇ ಮಾತಿಗಿಳಿದರು ನಟ ಶಿವರಾಜಕುಮಾರ್​. ಕಳೆದ ಜನವರಿಯಲ್ಲಿ ಅಮೆರಿಕದಿಂದ ಚಿಕಿತ್ಸೆ ಪಡೆದು ವಾಪಸ್ಸಾದ ಅವರು, ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಸಿನಿಮಾಗಳತ್ತ ಗಮನ ಹರಿಸಿರುವ ಶಿವಣ್ಣ, ಮಗಳು ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ ಫೈರ್​ಫ್ಲೈ ಟ್ರೇಲರ್​ ಬಿಡುಗಡೆ ಮಾಡಿದ ಬಳಿಕ ಮಾತಿಗೆ ಸಿಕ್ಕಿದ್ದರು.

"ಚಿಕಿತ್ಸೆಗೆ ತೆರಳುವ ಮುನ್ನವೇ ಫೈರ್​ಫ್ಲೈ "ವೀರಚಂದ್ರಹಾಸ', "45' ಚಿತ್ರಗಳ ಶೂಟಿಂಗ್​ ಪೂರ್ಣಗೊಳಿಸಿದ್ದೆ. ನಿವೇದಿತಾ ಫೈರ್​ಫ್ಲೈ ಕಥೆ ಕೇಳಿದಾಗ ವಿಭಿನ್ನವಾಗಿದೆ ಅಂತನ್ನಿಸಿತು. ಬಳಿಕ ವಂಶಿ ನರೇಟ್​ ಮಾಡಿದರು. ಕಮರ್ಷಿಯಲ್​ ಅಂಶಗಳ ಜತೆಗೆ ಎಮೋಷನ್ಸ್​ ಮಿಶ್ರಣವಿರುವ ಚಿತ್ರವಿದು. ಪ್ರತಿಯೊಬ್ಬರೂ ರಿಲೇಟ್​ ಆಗಬಹುದು. ಪ್ರಯೋಗ ಕೂಡ ಹೌದು. ಸಿನಿಮಾ ನೋಡಿ ನನಗೂ ಖುಷಿಯಾಯಿತು. ಅಭಿಲಾಷ್​ ಕಳತ್ತಿ ಛಾಯಾಗ್ರಹಣ, ಚರಣರಾಜ್​ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ನೋಡಿದವರಿಗೆ ಸರ್​ಪೆಸ್​ ಆಗಲಿದೆ' ಎಂದು ಹೇಳಿಕೊಳ್ಳುತ್ತಾರೆ.

ಎಲ್ಲ ಉದ್ಯಮಗಳಲ್ಲೂ ರಿಸ್ಕ್​ ಇದೆ

ಸಿನಿಮಾ ನಿರ್ಮಾಣದ ಬಗ್ಗೆ ಶಿವಣ್ಣ, "ಯಾವುದೇ ಉದ್ಯಮದಲ್ಲೂ ರಿಸ್ಕ್​ ಇರುತ್ತದೆ. ಅದೇ ರೀತಿಯ ರಿಸ್ಕ್​ ಚಿತ್ರ ನಿರ್ಮಾಣದಲ್ಲೂ ಇದೆ. ಹಾಗಂತ ಹಿಂಜರಿಯದೇ ಸಿನಿಮಾಗೆ ಏನು ಬೇಕೋ ಅದನ್ನು ಕೊಡಬೇಕು. ಇದು ರಿಯಾಲಿಟಿಗೆ ಹತ್ತಿರವಾದ ್ಯಾಮಿಲಿ ಎಂಟರ್​ಟೇನರ್​ ಸಿನಿಮಾ. ಎಲ್ಲ ಭಾಷೆಗಳಲ್ಲೂ ಡಬ್​ ಮಾಡಲಿದ್ದೇವೆ. ಈಗಾಗಲೇ ಪರಭಾಷೆಗಳಿಂದ ಆರ್​ ಕೂಡ ಬಂದಿದೆ. ಒಟಿಟಿ, ಟಿವಿಯವರು ಸಿನಿಮಾ ಖರೀದಿಸುತ್ತಿಲ್ಲ ಅಂತ ಭಯಪಡದೇ ಜನರಿಗಾಗಿ ಸಿನಿಮಾ ಮಾಡಲು ಪ್ರಾರಂಭಿಸಿದರೆ ಚಿತ್ರಗಳ ಗುಣಮಟ್ಟ ಹೆಚ್ಚಾಗುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಆ್ಯಕ್ಷನ್​ ಚಿತ್ರಗಳೇ ಹೆಚ್ಚು

ವಿಭಿನ್ನ ರೀತಿಯ ಪಾತ್ರ, ಸಿನಿಮಾಗಳನ್ನು ಮಾಡಲು ನಿರ್ಧರಿಸಿರುವ ಶಿವಣ್ಣಗೆ ಈಗಲೂ ಆ್ಯಕ್ಷನ್​ ಸಿನಿಮಾಗಳೇ ಹೆಚ್ಚಾಗಿ ಬರುತ್ತಿವೆಯಂತೆ. "ಯುವಪ್ರತಿಭೆಗಳು ನನ್ನ ಜತೆ ಸಿನಿಮಾ ಮಾಡಲು ಈಗಲೂ ಬರುತ್ತಾರಲ್ಲಾ ಅದೇ ಖುಷಿಯ ವಿಷಯ. ಯಾರು ಬಂದು ಹೇಳಿದರೂ ಕಥೆ ಕೇಳುತ್ತೇನೆ' ಎನ್ನುತ್ತಾರೆ.

ರಾಮಚರಣ್​ ಜತೆ "ಪೆದ್ದಿ'

ಕೆಲ ದಿನಗಳ ಹಿಂದಷ್ಟೇ ಶಿವಣ್ಣ ರಾಮಚರಣ್​ ತೇಜಾ ನಟಿಸುತ್ತಿರುವ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿರುವ "ಪೆದ್ದಿ' ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. "ಎರಡು ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇದರಲ್ಲಿ ಆ್ಯಕ್ಷನ್​ ಸನ್ನಿವೇಶಗಳೂ ಹೆಚ್ಚಿರುವ ಕಾರಣ, ನಾನೂ ದೈಹಿಕವಾಗಿ ಮತ್ತಷ್ಟು ರೆಡಿಯಾಗಬೇಕಿದೆ. ನನಗೆ ತಂತ್ರಜ್ಞಾನ ಬಳಸಿ ಚೀಟ್​ ಮಾಡಲು ಇಷ್ಟವಿಲ್ಲ. ಹೀಗಾಗಿ ಜುಲೈನಿಂದ ನನ್ನ ಭಾಗದ ಚಿತ್ರೀಕರಣ ಮುಂದುವರಿಯಲಿದೆ. ಈ ರೀತಿ ಪಾತ್ರ ಮಾಡಿದರೆ ಚಂದ ಅಂತ ನಾನು ಅಂದುಕೊಳ್ಳುತ್ತಿದ್ದ ಪಾತ್ರವೇ ಸಿಕ್ಕಿದೆ' ಎಂದು ಮಾಹಿತಿ ನೀಡುತ್ತಾರೆ.

ಮುಂದಿನ ಚಿತ್ರಗಳು...

ಜತೆಗೆ ಈ ಶುಕ್ರವಾರ ಅವರು ವಿಶೇಷ ಪಾತ್ರದಲ್ಲಿ ನಟಿಸಿರುವ "ವೀರಚಂದ್ರಹಾಸ', ಮುಂದಿನ ಶುಕ್ರವಾರ ಫೈರ್​ಫ್ಲೈ ಚಿತ್ರಗಳು ರಿಲೀಸ್​ ಆಗಲಿದ್ದು, ಆ. 15ಕ್ಕೆ ಪ್ಯಾನ್​ ಇಂಡಿಯಾ "45' ತೆರೆಗೆ ಬರಲಿದೆ. ಹಾಗೇ "ಕ್ಯಾಪ್ಟನ್​ ಮಿಲ್ಲರ್​' ಖ್ಯಾತಿಯ ತಮಿಳು ನಿರ್ದೇಶಕ ಅರುಣ್​ ಹೊಸ ಸಿನಿಮಾ, ರಜಿನಿಕಾಂತ್​ ಜತೆ "ಜೈಲರ್​ 2', ಶ್ರೀನಿ ನಿರ್ದೇಶಿಸಲಿರುವ "ಎ ಫಾರ್​ ಆನಂದ್​', ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ ಜತೆ ಒಂದು ಸಿನಿಮಾ ಲೈನಪ್​ನಲ್ಲಿವೆ. ಸದ್ಯಕ್ಕೆ ಹೇಮಂತ್​ ರಾವ್​ ನಿರ್ದೇಶಿಸಲಿರುವ "ಭೈರವನ ಕೊನೆ ಪಾಠ' ಮುಂದಿನ ವರ್ಷಕ್ಕೆ ಹೋಗಿದ್ದು, ಈ ವರ್ಷ ಹೇಮಂತ್​ ಮತ್ತು ಡಾಲಿ ಧನಂಜಯ ಕಾಂಬಿನೇಷನ್​ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.