ಸಿನಿವಾಣಿ

ಅಮರನ್​ ಶಿವಕಾರ್ತಿಕೇಯನ್​ ; ಮೇಜರ್​ ಮುಕುಂದ್​ ವರದರಾಜನ್​ ಬಯೋಪಿಕ್​ ಇದೇ 31ಕ್ಕೆ ರಿಲೀಸ್​

"ಬಾರ್ಡರ್​', "ಉರಿ: ದ ಸರ್ಜಿಕಲ್​ ಸ್ಟ್ರೆ$ಕ್​', "ಶೇರ್​ಶಾಹ್​', "ಮೇಜರ್​', "ದ ಘಾಜಿ ಅಟ್ಯಾಕ್​', "ಸ್ಯಾಮ್​ ಬಹದ್ದೂರ್​', "ಮೇಜರ್​' ಸೇರಿ ಭಾರತೀಯ ಸೈನಿಕರ ಸಾಹಸಗಾಥೆಗಳ ಕುರಿತು ಹಲವು ಬಯೋಪಿಕ್​ಗಳು, ನೈಜ ಟನೆಯಾಧಾರಿತ ಚಿತ್ರಗಳು ಬಂದಿವೆ. ಅದೇ ಸಾಲಿಗೆ ಸೇರುವ ಸಿನಿಮಾ "ಅಮರನ್​'. ರಾಷ್ಟ್ರೀಯ ರೈಲ್ಸ್​ನ ಮೇಜರ್​ ಮುಕುಂದ್​ ವರದರಾಜನ್​ ಜೀವನಾಧಾರಿತ ಚಿತ್ರವಿದು. ಕಾಲಿವುಡ್​ ನಟ ಶಿವಕಾರ್ತಿಕೇಯನ್​ ಮುಕುಂದ್​ ಪಾತ್ರದಲ್ಲಿ ನಟಿಸಿದ್ದು, ಅವರ ಪತ್ನಿ ಇಂದೂ ರೆಬೆಕ್ಕಾ ವರ್ಘೀಸ್​ ಆಗಿ ಸಾಯಿಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇದೇ ತಿಂಗಳ 31ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೆ ಟ್ರೇಲರ್​ ರಿಲೀಸ್​ ಆಗಿದ್ದು, ಎಮೋಷನ್ಸ್​ ಜತೆಗೆ ಆ್ಯಕ್ಷನ್​ ಸನ್ನಿವೇಶಗಳು ಗಮನ ಸೆಳೆಯುವಂತಿವೆ. ಶಿವ್​ ಆರೂರ್​ ಮತ್ತು ರಾಹುಲ್​ ಸಿಂಗ್​ ಬರೆದಿದ್ದ "ಇಂಡಿಯಾಸ್​ ಮೋಸ್ಟ್​ ಫಿಯರ್​ಲೆಸ್​' ಪುಸ್ತಕವನ್ನು ಆಧರಿಸಿ ರಾಜಕುಮಾರ್​ ಪೆರಿಯಾಸ್ವಾಮಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಜಿ.ವಿ. ಪ್ರಕಾಶ್​ ಕುಮಾರ್​ ಸಂಗೀತವಿರಲಿದೆ.

ಯಾರು ಮೇಜರ್​ ಮುಕುಂದ್​?

ತಮಿಳು ನಾಡು ಮೂಲದ ಮೇಜರ್​ ಮುಕುಂದ್​ ವರದರಾಜನ್​ ಸೇನೆ ಹಿನ್ನೆಯೆಲಿಂದ ಬಂದವರು. ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಓದಿದ ಬಳಿಕ ಅಜ್ಜ, ಚಿಕ್ಕಪ್ಪಂದಿರಂತೆ ತಾನೇ ಸೇನೆ ಸೇರಬೇಕು ಅಂತ ಆಸೆಪಟ್ಟ ಅವರು, ತಮ್ಮ 23ನೇ ವಯಸ್ಸಿನಲ್ಲಿ ಸೇನೆ ಸೇರಿದರು. ಆಫೀಸರ್ಸ್​ ಟ್ರೇನಿಂಗ್​ ಅಕಾಡೆಮಿಯಲ್ಲಿ ತರಬೇತಿ ಪಡೆದು 2006ರಲ್ಲಿ ಲೆಫ್ಟಿನೆಂಟ್​ ಆಗಿ ರಜಪುತಾನಾ ರೆಜಿಮೆಂಟ್​ಗೆ ಆಯ್ಕೆಯಾದರು. 2008ರಲ್ಲಿ ಕ್ಯಾಪ್ಟನ್​ ಆಗಿ ಭಡ್ತಿ ಪಡೆದ ಅವರು, ಲೆಬನಾನ್​ನಲ್ಲಿ ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

2012ರಲ್ಲಿ ಮೇಜರ್​ ಆಗಿ ಪ್ರಮೋಷನ್​ ಪಡೆದ ಬಳಿಕ ರಾಷ್ಟ್ರೀಯ ರೈಲ್ಸ್​ನ 44ನೇ ಬೆಟಾಲಿಯನ್​ನೊಂದಿಗೆ ಜಮ್ಮು ಕಾಶ್ಮೀರದ ಶೋಪಿಯಾನ್​ನಲ್ಲಿ ಕಾರ್ಯನಿರ್ವಹಿಸತೊಡಗಿದರು. 2014ರಲ್ಲಿ ಉಗ್ರರ ಕುರಿತ ಮಾಹಿತಿ ದೊರೆತು ತಮ್ಮ ತಂಡದ ಜತೆ ಕಾರ್ಯಾಚರಣೆಗೆ ಹೋದ ಮೇಜರ್​ ಮುಕುಂದ್​, ಆ ಕಾರ್ಯಾಚರಣೆಯಲ್ಲಿ ಹಿಜ್​ಬುಲ್​ ಮುಜಾಹಿದೀನ್​ನ ಕಮಾಂಡರ್​ ಉಗ್ರ ಅಲ್ತಾಫ್​ ವಾನಿ ಸೇರಿ ಮೂವರು ಉಗ್ರರನ್ನು ಸದೆಬಡಿದರು. ಆದರೆ, ಕಾರ್ಯಾಚರಣೆಯ ವೇಳೆ ಮೂರು ಗುಂಡುಗಳು ಅವರ ದೇಹ ಹೊಕ್ಕಿದ್ದವು. 31ನೇ ವಯಸ್ಸಿನಲ್ಲಿ ಮುಕುಂದ್​ ವೀರಮರಣವನ್ನಪ್ಪಿದರು.

ಸಾಯಿ ಹಳೆಯ ಹೇಳಿಕೆ ವಿವಾದ:

"ಅಮರನ್​' ಚಿತ್ರದ ಟ್ರೇಲರ್​ ವೈರಲ್​ ಆಗಿ, ರಿಲೀಸ್​ ದಿನಾಂಕ ಹತ್ತಿರವಾದಂತೆ, ನಟಿ ಸಾಯಿ ಪಲ್ಲವಿಯ ಎರಡು ವರ್ಷದ ಹಿಂದಿನ ವಿವಾದಾತ್ಮಕ ಹೇಳಿಕೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. "ಪಾಕಿಸ್ತಾನದ ಜನ ನಮ್ಮ ಸೈನಿಕರನ್ನು ಭಯೋತ್ಪಾದಕರಂತೆ ನೋಡುತ್ತಾರೆ, ಅಂತೆಯೇ ನಾವು ಕೂಡ ಪಾಕಿಸ್ತಾನದ ಸೈನಿಕರನ್ನು ಉಗ್ರರಂತೆ ನೋಡುತ್ತೇವೆ. ಈ ದೃಷ್ಟಿಕೋನ ಬದಲಾದರೂ, ಹಿಂಸೆಯೇ ನನಗೆ ಅರ್ಥವಾಗುವುದಿಲ್ಲ' ಎಂದಿದ್ದರು. ಇದೀಗ ಈ ವಿಡಿಯೋ ಮತ್ತೆ ವೈರಲ್​ ಆಗಿದ್ದು, ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಇಂತಹ ಹೇಳಿಕೆ ನೀಡುವವರಿಗೆ "ಅಮರನ್​' ಹಾಗೂ "ರಾಮಾಯಣ' ಚಿತ್ರದಲ್ಲಿ ಅವಕಾಶ ಯಾಕೆ ನೀಡುತ್ತಾರೆ ಎಂದು ಜಾಲತಾಣಿಗರು ಪ್ರಶ್ನಿಸಿದ್ದಾರೆ.