ಸಿನಿವಾಣಿ

ಶತಕದ ಬಳಿಕವೀಗ ಅಭಿನವ ರಮೇಶ್​

kumarvrl

ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿಬಂದಿರುವ, ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ, ‘ಶಿವಾಜಿ ಸುರತ್ಕಲ್’. ಕೊಲೆ ಕೌತುಕದ ಪತ್ತೇದಾರಿ ಮಾದರಿಯ ಈ ವಿಭಿನ್ನ ಸಿನಿಮಾದ ವಿಶೇಷತೆ ಕುರಿತು ನಾಯಕ ರಮೇಶ್ ಅರವಿಂದ್ ಹಂಚಿಕೊಂಡಿರುವ ಅನಿಸಿಕೆಗಳ ಸಂಕ್ಷಿಪ್ತ ರೂಪ ಇಲ್ಲಿದೆ.

 ಬೆಂಗಳೂರು: ರೀಲ್​ನ ‘ಶಿವಾಜಿ ಸುರತ್ಕಲ್’ಗೂ ರಿಯಲ್​ನ ರಮೇಶ್ ಅರವಿಂದ್​ಗೂ ಒಂದು ಸಾಮ್ಯ ಇದೆ. ಅದೇನೆಂದರೆ ‘ಶಿವಾಜಿ ಸುರತ್ಕಲ್’ ಸಿನಿಮಾದಲ್ಲಿ ರಮೇಶ್ 2 ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಈ ಚಿತ್ರದಲ್ಲಿ ಕಥೆ 2 ಕಾಲಘಟ್ಟದಲ್ಲಿ ಸಾಗುತ್ತಿರುತ್ತದೆ. ಹಾಗೆಯೇ ರಮೇಶ್ ಅರವಿಂದ್ ತಮ್ಮ ವೃತ್ತಿಜೀವನದಲ್ಲೂ ಮತ್ತೊಂದು ಕಾಲಘಟ್ಟಕ್ಕೆ ಪ್ರವೇಶಿಸಿದ್ದಾರೆ. ಅದರ ಮೊದಲ ಮೆಟ್ಟಿಲೇ ‘ಶಿವಾಜಿ ಸುರತ್ಕಲ್: ದಿ ಕೇಸ್ ಆಫ್ ರಣಗಿರಿ ರಹಸ್ಯ’.

ಅಂದರೆ ತಮ್ಮ 101ನೇ ಚಿತ್ರವಾಗಿರುವ ಇದರಲ್ಲಿ ಅವರು ಇದುವರೆಗಿನ ನೂರು ಸಿನಿಮಾಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಇನ್ನುಮುಂದೆ ಅವರು ಇನ್ನೂ ವಿಭಿನ್ನ ಹಾಗೂ ವಿನೂತನವಾಗಿ ಕಾಣಿಸಿಕೊಳ್ಳುತ್ತ ಹೋಗಲಿದ್ದಾರಂತೆ.

‘ಇದು 2020ರಲ್ಲಿನ ನನ್ನ ಮೊದಲ ಸಿನಿಮಾ. ಅಷ್ಟೇ ಅಲ್ಲ, ಇದರೊಂದಿಗೆ ನನ್ನ ಇನ್ನೊಂದು ಇನ್ನಿಂಗ್ಸ್ ಕೂಡ ಆರಂಭವಾಗಿದೆ. ಇದುವರೆಗೆ ನೋಡಿರದಂಥ ರಮೇಶ್​ಅನ್ನು ನೀವು ಈ ಚಿತ್ರದಲ್ಲಿ ನೋಡಲಿದ್ದೀರಿ..’ ಎನ್ನುತ್ತ ‘ಇದುವರೆಗಿನ ರಮೇಶೇ ಬೇರೆ, ಇನ್ನುಮುಂದಿನ ರಮೇಶೇ ಬೇರೆ..’ ಎಂದು ‘ಶಿವಾಜಿ ಸುರತ್ಕಲ್’ ಸಿನಿಮಾ ಹಾಗೂ ಭವಿಷ್ಯದ ರಮೇಶ್ ಅರವಿಂದ್ ಕುರಿತು ಒಂದಷ್ಟು ವಿಷಯಗಳನ್ನು ಮುಕ್ತವಾಗಿ ಹೇಳಿದರು ಕನ್ನಡದ ಕಮಲಹಾಸನ್.

‘ಒಂದಷ್ಟು ವರ್ಷ ಪ್ರೀತಿಯ ಕುರಿತಾದ ಸಿನಿಮಾಗಳನ್ನೇ ಮಾಡಿದೆ. ಮತ್ತೊಂದಷ್ಟು ವರ್ಷ ಹಾಸ್ಯಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದೆ. ಮಗದೊಂದಷ್ಟು ವರ್ಷ ಕೌಟುಂಬಿಕ ಕಥೆಗಳಿರುವ ಸಿನಿಮಾಗಳಲ್ಲಿ ನಟಿಸಿದೆ. ಆದರೆ ಈ ಚಿತ್ರದಲ್ಲಿ ಅವೆಲ್ಲದಕ್ಕೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಇದೊಂದು ಕ್ರೖೆಂ-ಥ್ರಿಲ್ಲರ್ ಸಿನಿಮಾ. ಕೊಲೆ ಪ್ರಕರಣ ಭೇದಿಸುವ ಪತ್ತೇದಾರಿ ಪಾತ್ರದಲ್ಲಿ ನಾನು ಇದುವರೆಗೂ ಕಾಣಿಸಿಕೊಂಡಿರಲಿಲ್ಲ. ಇಲ್ಲಿ ರಮೇಶ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ನಿರೀಕ್ಷೆ ಮಾಡಬಹುದಾದ ಎಲ್ಲ ಅಂಶಗಳೂ ಇವೆ. ಆದರೆ ಅವುಗಳ ಜತೆಗೆ ಒಂದಷ್ಟು ಹೊಸ ಆಯಾಮಗಳೂ ಇವೆ’ ಎನ್ನುತ್ತ ರಣಗಿರಿಯತ್ತ ಚಿತ್ತ ಹರಿಸಿದರು ರಮೇಶ್.

‘ರಣಗಿರಿ ಎಂಬುದೊಂದು ವಿಚಿತ್ರ ಊರು. ಅಲ್ಲಿ ಬಹಳ ವಿಚಿತ್ರವಾದ ವಿಷಯಗಳು ನಡೆಯುತ್ತಿರುತ್ತವೆ. ಅದು ಆ ಊರಿನವರಿಗೆ ಗೊತ್ತಿದ್ದರೂ ಅದರ ಬಗ್ಗೆ ಹೇಳುವುದಿಲ್ಲ. ಅಂಥ ಊರಲ್ಲಿ ಒಂದು ವಿಚಿತ್ರವಾದ ಕೊಲೆ ನಡೆದು ಹೋಗುತ್ತದೆ. ಆ ಪ್ರಕರಣವನ್ನು ಭೇದಿಸಲು ಇನ್ನೂ ವಿಚಿತ್ರವಾದ ಒಬ್ಬ ಪೊಲೀಸ್ ಅಧಿಕಾರಿ ಬರುತ್ತಾನೆ. ಆ ಪ್ರಕರಣವನ್ನು ಆತ 48 ಗಂಟೆಗಳಲ್ಲಿ ಹೇಗೆ ಭೇದಿಸುತ್ತಾನೆ ಎಂಬುದೇ ಈ ಸಿನಿಮಾ’ ಎನ್ನುತ್ತ ಅವರು ಕಥಾಹಂದರ ತಿಳಿಸಿದರು.

‘ಈ ಚಿತ್ರದಲ್ಲಿ ನಾನು ಶಿವಾಜಿ ಸುರತ್ಕಲ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೇನೆ. ಇಲ್ಲಿ ಎರಡು ಲುಕ್​ನಲ್ಲಿ ಅಂದರೆ ಒಮ್ಮೆ ಗಡ್ಡಧಾರಿ ಆಗಿ, ಇನ್ನೊಮ್ಮೆ ಕ್ಲೀನ್ ಶೇವ್ಡ್ ಆಗಿ ಕಾಣಿಸಿಕೊಳ್ಳುತ್ತೇನೆ. ಹಾಗಂತ ಇಲ್ಲಿ ನನ್ನದು ದ್ವಿಪಾತ್ರವಲ್ಲ. ಪಾತ್ರ ಒಂದೇ, ಆದರೆ ಕಥೆ 2 ಕಾಲಘಟ್ಟದಲ್ಲಿ ಸಾಗುವುದರಿಂದ ಆ ವ್ಯತ್ಯಾಸ ಗೊತ್ತಾಗಲಿ ಅಂತ 2 ಲುಕ್ ಸೃಷ್ಟಿಸಲಾಗಿದೆ. ತುಂಬ ಗಟ್ಟಿಯಾದ ಪಾತ್ರವಾದರೂ ಈ ಶಿವಾಜಿ ಒಂಥರ ವಿಚಿತ್ರ ಮನುಷ್ಯ. ಬಹಳ ಸಿಟ್ಟು, ನಿದ್ರೆ ಬರಲ್ಲ, ಘೋರ ಫ್ಲ್ಯಾಷ್​ಬ್ಯಾಕ್, ತಲೆಯಲ್ಲಿ ಏನೇನೋ ಯೋಚನೆಗಳು, ಅವನದೇ ಒಂದಷ್ಟು ಸಮಸ್ಯೆಗಳು.. ಇವೆಲ್ಲದರ ನಡುವೆ ಆತ ಹೇಗೆ ಪ್ರಕರಣ ಭೇದಿಸುತ್ತಾನೆ ಎಂಬುದೇ ವಿಶೇಷ’ ಎಂದು ತಮ್ಮ ಪಾತ್ರದ ಬಗ್ಗೆಯೂ ಹೇಳಿದರು ರಮೇಶ್.

ಈ ಚಿತ್ರದಲ್ಲಿ ಶಿವಾಜಿ ಹೇಗೆ ಎಚ್ಚರವಾಗಿ ಇರುತ್ತಾನೋ ಪ್ರೇಕ್ಷಕ ಕೂಡ ಅಷ್ಟೇ ಜಾಗೃತವಾಗಿ ಇರುತ್ತಾನೆ ಎಂಬುದು ರಮೇಶ್ ಅನಿಸಿಕೆ. ಏಕೆಂದರೆ ಈ ಸಿನಿಮಾ ಅಷ್ಟರಮಟ್ಟಿಗೆ ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟಿರುತ್ತದೆಯಂತೆ. ‘ನನ್ನ ಪ್ರಕಾರ ಗಮನ ಸೆಳೆಯುವುದು, ಸೆಳೆದ ಗಮನವನ್ನು ಹಾಗೇ ಹಿಡಿದಿಟ್ಟುಕೊಳ್ಳುವುದೇ ನಿಜವಾದ ಮನರಂಜನೆ. ಅಂಥ ಶಕ್ತಿ ಈ ಶಿವಾಜಿಗಿದೆ. ಇದು ಪ್ರೇಕ್ಷಕನ ಕಣ್ಣು, ಕಿವಿ, ಮೆದುಳು ಎಲ್ಲವನ್ನೂ ಜಾಗೃತವಾಗಿ ಇರಿಸುತ್ತದೆ. ಅಷ್ಟೊಂದು ಕೌತುಕ ಉಂಟುಮಾಡುವಂತೆ ಚಿತ್ರದ ಕಥೆ ಹೆಣೆಯಲಾಗಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ 13 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡುತ್ತಿರುವವರು, ಬಹಳ ಚೆನ್ನಾಗಿ ಈ ಸಿನಿಮಾ ಮಾಡಿದ್ದಾರೆ’ ಎಂಬ ಅಭಿಪ್ರಾಯ ರಮೇಶ್ ಅವರದು.

ದೃಶ್ಯಶ್ರಾವ್ಯ ರಣಗಿರಿ ರಹಸ್ಯ: ರಣಗಿರಿ ಎಂಬುದೇ ಒಂದು ಅತಿವಿಶಿಷ್ಟ ಕಾಲ್ಪನಿಕ ಸ್ಥಳ. ಅಂಥದ್ದೊಂದು ಚಿತ್ರಣಕ್ಕಾಗಿ ಸೂಕ್ತ ಪ್ರದೇಶ ಹುಡುಕಲು ಚಿತ್ರತಂಡ ಭಾರಿ ಹುಡುಕಾಟ ನಡೆಸಿದೆ. ‘ವಿಚಿತ್ರ ಬಾವಿ, ಸ್ವಿಮ್ಮಿಂಗ್ ಪೂಲ್, ಆರು ರೂಮ್. ಹೀಗೆ ಇವೆಲ್ಲವನ್ನೂ ಪರದೆ ಮೇಲೆ ಮೂಡಿಸುವಂಥ ಸೂಕ್ತ ಜಾಗ ಕಾಡೊಳಗೇ ಬೇಕಿತ್ತು. ಅದನ್ನು ಸೆಟ್ ಹಾಕಿಸಿದರೂ ಸಹಜ ಅನಿಸುತ್ತಿರಲಿಲ್ಲ. ಹಾಗಾಗಿ ಬಹಳ ಹುಡುಕಾಟದ ಬಳಿಕ ಮಡಿಕೇರಿಯ ಶುಂಠಿಕೊಪ್ಪ ಬಳಿ ಅಂಥದ್ದೊಂದು ಸ್ಥಳ ಸಿಕ್ಕಿತು’ ಎಂದು ‘ರಣಗಿರಿಯ ರಹಸ್ಯ’ ತೆರೆದಿಟ್ಟರು ರಮೇಶ್. ‘ಈ ಚಿತ್ರದಲ್ಲಿ ಶಬ್ದಾನುಭವವೂ ತುಂಬ ವಿಭಿನ್ನವಾಗಿರಲಿದೆ. ದೃಶ್ಯದಲ್ಲಿ ಹಿಂದೆ ಹಕ್ಕಿ ಕೂಗಿದರೆ ಅದು ಪ್ರೇಕ್ಷಕನಿಗೂ ತನ್ನ ಹಿಂದೆಯೇ ಕೇಳಿಸಿದಂತಾಗುತ್ತದೆ. ಅಲ್ಲಿ ಪರದೆಯಲ್ಲಿ ತಲೆ ಮೇಲೆ ಏನಾದರೂ ಬಿದ್ದರೆ ಪ್ರೇಕ್ಷಕನಿಗೂ ತಲೆ ಮೇಲೆಯೇ ಬಿದ್ದಂತಾಗುತ್ತದೆ’ ಎಂದು ಸೌಂಡ್ ಎಫೆಕ್ಟ್​ನ ವಿಶೇಷತೆಯನ್ನು ರಮೇಶ್ ವಿವರಿಸಿದರು.

ಇರುವವರು 13, ಕೊಲೆಗಾರ ಯಾರು?: ಈ ಸಿನಿಮಾದಲ್ಲಿ ಪ್ರೇಕ್ಷಕನ ಊಹೆ ಸುಳ್ಳಾಗುತ್ತಲೇ ಹೋಗುತ್ತದೆ. ಏಕೆಂದರೆ ಒಂದಷ್ಟು ಪಾತ್ರಗಳ ಸುತ್ತ ಸುತ್ತುವ ಕಥೆ ಇವ ಕೊಲೆಗಾರನಾ, ಅವ ಕೊಲೆಗಾರನಾ ಎಂದು ಕುತೂಹಲ ಕೆರಳಿಸುತ್ತಲೇ ಹೋಗುತ್ತದಂತೆ. ‘ಸಿನಿಮಾದಲ್ಲಿ ರಾಧಿಕಾ ನಾರಾಯಣ್ ನಾಯಕಿ. ಅವರು ನನಗೆ ಜೋಡಿಯಾಗಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಆರೋಹಿ ನಾರಾಯಣ್ ಸೇರಿ 13 ಪ್ರಮುಖ ಪಾತ್ರಗಳು ಈ ಚಿತ್ರದಲ್ಲಿವೆ. ಅವರಲ್ಲಿ ಕೊಲೆಗಾರರು ಯಾರು ಎಂಬುದೇ ಕೌತುಕ ಹುಟ್ಟಿಸುವ ಅಂಶ’ ಎನ್ನುತ್ತಾರೆ ರಮೇಶ್.

ಈ ಕೊಲೆ ಎಂಬುದೇ ಕುತೂಹಲಕಾರಿ!: ಟೈಟಲ್​ನಲ್ಲಿರುವ ‘ಸುರತ್ಕಲ್’, ಟೀಸರ್​ನಲ್ಲಿರುವ ತುಳು ಸಂಭಾಷಣೆಯ ತುಣುಕುಗಳಿಂದ ಕರಾವಳಿಯ ಪ್ರೇಕ್ಷಕರು ಸೆಳೆಯಲ್ಪಡುವುದು ಸಹಜ. ಆದರೆ ಉಳಿದವರನ್ನು ಇದು ಹೇಗೆ ಸೆಳೆಯುತ್ತದೆ? ಎಂಬುದಕ್ಕೆ ರಮೇಶ್ ಬೇರೆಯದೇ ವ್ಯಾಖ್ಯಾನ ನೀಡುತ್ತಾರೆ. ‘ಒಂದು ಕೊಲೆಯೇ ದೊಡ್ಡ ಕುತೂಹಲಕಾರಿ ಅಂಶ. ಎಲ್ಲಿಯೇ ಆಗಲಿ.. ಕೊಲೆ ಆಗಿದೆ ಎಂದರೆ ಹೇಗಾಯಿತು, ಯಾಕಾಯಿತು, ಮಾಡಿದ್ಯಾರು? ಎಂಬೆಲ್ಲ ಕುತೂಹಲ ಮೂಡಿಬಿಡುತ್ತದೆ. ಈ ಕುತೂಹಲ ಪ್ರಾದೇಶಿಕತೆಯನ್ನೂ ಮೀರಿದ್ದು. ಇಂಥ ವಿಷಯಗಳು ಕಥೆ, ನಾಟಕ, ಸಿನಿಮಾ ಯಾವ ಥರ ಬಂದರೂ ಜನರ ಕುತೂಹಲ ಸೆಳೆಯುತ್ತದೆ’ ಎಂದರು ರಮೇಶ್.

ನೂರು ನೂರೊಂದರ ಮಧ್ಯೆ ಅಂತರ ಮೂರು

2017ರಲ್ಲಿ ತೆರೆ ಕಂಡಿದ್ದ ‘ಪುಷ್ಪಕ ವಿಮಾನ’ ರಮೇಶ್ ಅರವಿಂದ್ ಅಭಿನಯದ ನೂರನೇ ಸಿನಿಮಾ. ಇದೀಗ ಬಿಡುಗಡೆ ಆಗಿರುವ ‘ಶಿವಾಜಿ ಸುರತ್ಕಲ್’ 101ನೇ ಸಿನಿಮಾ. ಆದರೆ ಈ 2 ಚಿತ್ರಗಳ ನಡುವೆ 3 ವರ್ಷಗಳ ಅಂತರ ಏಕಾಯಿತು ಎಂಬುದಕ್ಕೆ ರಮೇಶ್ ಹೀಗೆನ್ನುತ್ತಾರೆ. ‘ಈ ನಡುವೆ ನಾನು 2 ಸಿನಿಮಾಗಳ ನಿರ್ದೇಶನ ಮಾಡಿದೆ. ‘ವೀಕೆಂಡ್ ವಿಥ್ ರಮೇಶ್’, ‘ಕೋಟ್ಯಧಿಪತಿ’ ಶೋಗಳಲ್ಲಿ ಭಾಗವಹಿಸಿದ್ದೆ. ಜತೆಗೆ ಇನ್ನೆರಡು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದೆ. ಆ ಚಿತ್ರಗಳೂ ಇದೇ ವರ್ಷ ಬಿಡುಗಡೆ ಆಗಲಿವೆ. ಹೀಗೆ ಬಿಜಿ ಆಗಿದ್ದರಿಂದ ಸ್ವಲ್ಪ ಗ್ಯಾಪ್ ಆಯಿತು. ಅಲ್ಲದೆ ನೂರು ಸಿನಿಮಾ ಮುಗಿದಿರುವುದರಿಂದ ನಂತರದ ಸಿನಿಮಾ ವಿಭಿನ್ನವಾಗಿರಬೇಕು ಎಂದು ಒಂದೊಳ್ಳೆಯ ಕಥೆಗಾಗಿ ಕಾಯುತ್ತಿದ್ದೆ..’ ನೂರರ ನಂತರದ ಸಿನಿಮಾಗಳಷ್ಟೇ ವಿಭಿನ್ನವಲ್ಲ, ಪಾತ್ರವೂ ವಿಶಿಷ್ಟವಾಗಿರಬೇಕು ಎಂಬುದು ರಮೇಶ್ ಅವರ ಇಂಗಿತ. ಇನ್ನು ಮುಂದೆ ಹೊಸಥರದ ಚಿತ್ರಕಥೆ-ನಿರೂಪಣೆ, ವಿನೂತನ ಚಿಂತನೆಯ ಸಿನಿಮಾಗಳಿಗೆ ಆದ್ಯತೆ ನೀಡುತ್ತೇನೆ. ನನ್ನ ವಯಸ್ಸು ಹಾಗೂ ಇಂದಿನ ಪೀಳಿಗೆಗೆ ಸೂಕ್ತ ಎನಿಸುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಒಟ್ಟಿನಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳುವ ನನ್ನ ಪಾತ್ರ-ಚಿತ್ರಗಳಲ್ಲಿ ಹೊಸತನ ಇದ್ದೇ ಇರುತ್ತದೆ. ಹೊಸ ರಮೇಶ್​ನನ್ನು ಕಾಣುತ್ತಿರುತ್ತೀರಿ’ ಎನ್ನುತ್ತಾರೆ ರಮೇಶ್.

ರವಿಕಾಂತ ಕುಂದಾಪುರ