ಬೆಂಗಳೂರು: ಸುರತ್ಕಲ್ನ ಶಿವಾಜಿ ಮಹಾಶಿವರಾತ್ರಿಯಂದೇ ರಾಜ್ಯಾದ್ಯಂತ ಕಾಣಿಸಿಕೊಳ್ಳಲಿದ್ದಾನೆ. ಅಂದರೆ ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್’ ಶಿವರಾತ್ರಿ ದಿನ (ಫೆ. 21) ಬಿಡುಗಡೆ ಆಗಲಿದೆ.
‘ಅಂಜನಾದ್ರಿ ಸಿನಿಕ್ರಿಯೇಷನ್ಸ್’ ಬ್ಯಾನರ್ನಲ್ಲಿ ಕೆ.ಎನ್.ರೇಖಾ ಮತ್ತು ಅನೂಪ್ ಗೌಡ ನಿರ್ವಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ. ಮರ್ಡರ್ ಮಿಸ್ಟರಿಯ ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಎರಡು ವಿಭಿನ್ನ ಲುಕ್ಗಳಲ್ಲಿ ಕಾಣಿಸಿಕೊಂಡಿರುವುದು ಇಲ್ಲಿನ ವಿಶೇಷ. ತನಿಖಾಧಿಕಾರಿಯ ಪಾತ್ರ ಮಾಡಿರುವ ರಮೇಶ್ ಈ ಚಿತ್ರದ ಒಂದು ಲುಕ್ನಲ್ಲಿ ಕ್ಲೀನ್ ಶೇವ್ ಮಾಡಿಕೊಂಡು ಕಾಣಿಸಿದ್ದರೆ, ಇನ್ನೊಂದರಲ್ಲಿ ಗಡ್ಡಧಾರಿ ಆಗಿ ನಟಿಸಿದ್ದಾರೆ. ‘ಈ ಚಿತ್ರದಲ್ಲಿ ಕಥೆ ಎರಡು ಕಾಲಘಟ್ಟದಲ್ಲಿ ಸಾಗುವುದರಿಂದ ಅವರನ್ನು ಎರಡು ಲುಕ್ನಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್. ವಿಶೇಷವೆಂದರೆ ಈ ಚಿತ್ರವನ್ನು ಕನ್ನಡ ಮಾತ್ರವಲ್ಲದೆ ಇನ್ನೆರಡು ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಎಲ್ಲ ಅಂದುಕೊಂಡಂತೆಯೇ ನಡೆದರೆ ‘ಶಿವಾಜಿ ಸುರತ್ಕಲ್’ ತಮಿಳು-ತೆಲುಗಿನಲ್ಲೂ ಸದ್ದು ಮಾಡಲಿದ್ದಾನೆ.
ಚಿತ್ರದಲ್ಲಿ ರಮೇಶ್ ಜತೆಗೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕಥೆ ರಚನೆಯಲ್ಲಿ ನಿರ್ದೇಶಕರ ಜತೆ ವೈ.ಆರ್.ಅಭಿಜಿತ್ ಕೈಜೋಡಿಸಿದ್ದಾರೆ. ಎಂ.ಜಿ. ಗುರುಪ್ರಸಾದ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಇರುವ ಈ ಸಿನಿಮಾಗೆ ಜಯಂತ ಕಾಯ್ಕಿಣಿ, ಕೆ.ಕಲ್ಯಾಣ್, ಆಕಾಶ್ ಶ್ರೀವತ್ಸ ಸಾಹಿತ್ಯವಿದೆ.