ಸಿನಿವಾಣಿ

ಬಿಗ್​ ಬಾಸ್​ನಲ್ಲಿ 24/7 ಸಂಭ್ರಮದ ಶೈನ್ : ಒಂದೇ ವೇದಿಕೆಯಲ್ಲಿ ಎರಡೆರಡು ಸಂಭ್ರಮ

ಬೆಂಗಳೂರು: ‘ಬಿಗ್​ಬಾಸ್’ ಮನೆಯಲ್ಲಿ ಈ ಸಲ ‘24X7’ ಸಂಭ್ರಮದ ಶೈನ್. ಏಕೆಂದರೆ ಅಲ್ಲಿದ್ದಿದ್ದು ಒಂದೇ ಖುಷಿ ಅಲ್ಲ. ಒಂದೆಡೆ ‘ಬಿಗ್​ಬಾಸ್ ಸೀಸನ್ 7’ರ ವಿಜೇತರ ಹಾಗೂ ಸ್ಪರ್ಧಿಗಳ ಸಂಭ್ರಮವಾದರೆ ಮತ್ತೊಂದೆಡೆ ಅವರ ನಡುವೆ ಬಿಗ್​ಬಾಸ್ ನಿರೂಪಕ ಕಿಚ್ಚ ಸುದೀಪ್​ಗೂ ಸಂತೋಷದ ಸಂದರ್ಭ. ಸುದೀಪ್ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ 24 ವಸಂತಗಳು ಪೂರ್ಣಗೊಂಡು 25ನೇ ವರ್ಷದ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ ಖುಷಿಯನ್ನೂ ಬಿಗ್​ಬಾಸ್ ವಿಜೇತರು ಹಾಗೂ ಸ್ಪರ್ಧಿಗಳು ಅವರಿಗೆ ಶುಭಾಶಯ ಕೋರುವ ಮೂಲಕ ಸಂಭ್ರಮಿಸಿದರು. ಅತ್ತ ಸುದೀಪ್ ವಿಜೇತರು ಮತ್ತು ಸ್ಪರ್ಧಿಗಳಿಗೆ ಹಾರೈಸಿ ಶುಭ ಕೋರಿದರೆ, ಇತ್ತ ವಿಜೇತರು ಮತ್ತು ಸ್ಪರ್ಧಿಗಳೂ ಸುದೀಪ್ ಅವರಿಗೆ ತಾವೇ ಸಂಯೋಜಿಸಿದ ವಿಶೇಷವಾದ ನೃತ್ಯದ ಮೂಲಕ ಶುಭಾಶಯಗಳನ್ನು ಅರ್ಪಿಸಿದರು. ಬಿಗ್​ಬಾಸ್ ಮನೆಯಲ್ಲಿ ವಿಜೇತರು ಸೇರಿ ಸ್ಪರ್ಧಿಗಳೆಲ್ಲ ದಿನದ 24 ಗಂಟೆ ಶ್ರಮಿಸಿದ್ದರೆ, ಸುದೀಪ್ ಕೂಡ ತಮ್ಮ ವೃತ್ತಿಜೀವನದಲ್ಲಿ ಹಗಲಿರುಳೆನ್ನದೆ ಶ್ರಮವಹಿಸಿದ್ದಾರೆ. ಮತ್ತೊಂದೆಡೆ ಈ ವೇದಿಕೆ ಸುದೀಪ್ ಚಿತ್ರರಂಗದಲ್ಲಿ ‘24’ ವರ್ಷಗಳನ್ನು ಪೂರೈಸಿದ, ಇನ್ನೊಂದೆಡೆ ಸೀಸನ್ ‘7’ ಸಮಾರೋಪ ಆದ ಎರಡೂ ಸಂತೋಷ ಸೇರಿ ‘24X7’ ಸಂಭ್ರಮದ ಹೊಳಪು ಹೊಮ್ಮಲು ಕಾರಣವಾಯಿತು.

ನಿಮ್ಮ ಸಂಭ್ರಮವೇ ಮುಖ್ಯ: ‘ಬರೀ ಥ್ಯಾಂಕ್ಸ್ ಹೇಳಿದರೆ ತುಂಬ ಕಡಿಮೆ ಎನಿಸುತ್ತದೆ..’ ಎನ್ನುತ್ತ ತಮ್ಮ 24 ವರ್ಷಗಳ ಸಿನಿಪ್ರಯಾಣದ ಹಿನ್ನೆಲೆಯಲ್ಲಿ ಬಿಗ್​ಬಾಸ್ ಸ್ಪರ್ಧಿಗಳೆಲ್ಲ ಸೇರಿ ವಿಶೇಷವಾದ ನೃತ್ಯದ ಮೂಲಕ ಅಭಿನಂದನೆ ಸಲ್ಲಿಸಿ ಸಂತೋಷ ಹಂಚಿಕೊಂಡಿದ್ದಕ್ಕೆ ಸುದೀಪ್ ಸಂತೋಷದಿಂದ ಪ್ರತಿಕ್ರಿಯಿಸಿದರು. ‘ನಾವು ಚಿತ್ರರಂಗದಲ್ಲಿ ಎಷ್ಟು ವರ್ಷಗಳಿಂದ ಇದ್ದೇವೆ ಎನ್ನುವುದು ಮುಖ್ಯವಲ್ಲ. ನಾವು ಇದ್ದಿದ್ದನ್ನು ನೀವೆಲ್ಲ ಸಂಭ್ರಮಿಸುತ್ತಿರುವುದೇ ಅತ್ಯಂತ ಸಂತಸದ ಸಂಗತಿ. ನನ್ನ 24 ವರ್ಷಗಳ ಪ್ರಯಾಣ ಕೊಟ್ಟಷ್ಟೇ ಖುಷಿಯನ್ನು ನಿಮ್ಮ ಅಭಿನಂದನೆಯ ಈ ನೃತ್ಯ ಕೂಡ ನೀಡಿದೆ’ ಎಂದು ಧನ್ಯವಾದಗಳನ್ನು ತಿಳಿಸಿದರು ಸುದೀಪ್. ಸಾಮಾನ್ಯವಾಗಿ ಬಿಗ್​ಬಾಸ್ ಮನೆಯಲ್ಲಿ ನಡೆಯುವ ಪ್ರತಿಯೊಂದೂ ನನಗೆ ತಿಳಿಯುತ್ತದೆ. ಆದರೆ ನೀವು ಗುಟ್ಟಾಗಿ ಆಯೋಜಿಸಿ ಮಾಡಿದ ಈ ನೃತ್ಯದ ಬಗ್ಗೆ ತಿಳಿಯಲೇ ಇಲ್ಲ. ಇದಕ್ಕೆಲ್ಲ ನೀವು ಮೂವರು (ಶೈನ್, ಕುರಿ ಪ್ರತಾಪ್, ವಾಸುಕೀ) ಕಾರಣ ಅಂತ ಗೊತ್ತು. ಹಾಗಂತ ಎಲಿಮಿನೇಷನ್ ತಪು್ಪವುದಿಲ್ಲ ಎಂದು ತಮಾಷೆಯಾಗಿಯೇ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶೈನ್​ಗೆ ಗೆಲುವಿನ ಸ್ಪೂರ್ತಿ: ‘ಬಿಗ್​ಬಾಸ್ ಕನ್ನಡ ಸೀಸನ್7’ರ ವಿಜೇತ ಶೈನ್ ಶೆಟ್ಟಿ ಮೂಲತಃ ಕುಂದಾಪುರದವರು. ಚಿತ್ರರಂಗದ ಸೆಳೆತದಿಂದ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಇವರು ‘ಲಕ್ಷೀ ಬಾರಮ್ಮ’, ‘ಮೀರಾ ಮಾಧವ’ ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಮಹದಾಸೆ ಹೊಂದಿರುವ ಇವರಿಗೆ ಅದೃಷ್ಟ ಸಹಕರಿಸದ್ದರಿಂದ ಅನಿವಾರ್ಯವಾಗಿ ಹೊಟೇಲ್ ಉದ್ಯಮದತ್ತ ಹೊರಳಬೇಕಾಯಿತು. ‘ಗಲ್ಲಿ ಕಿಚನ್’ ಎಂಬ ಫುಡ್ ಟ್ರಕ್ ಆರಂಭಿಸಿ ಜೀವನ ಸಾಗಿಸುತ್ತಿರುವಾಗ ಇವರಿಗೆ ‘ಬಿಗ್​ಬಾಸ್’ ಸ್ಪರ್ಧಿ ಆಗುವ ಅವಕಾಶ ಒದಗಿ ಬಂತು. ಆಗಿದ್ದಾಗಲಿ ಎಂದು ಬಿಗ್​ಬಾಸ್ ಮನೆಗೆ ಪ್ರವೇಶಿಸಿದ ಶೈನ್ ಈಗ ವಿನ್ನರ್ ಆಗಿ ಹೊರಹೊಮ್ಮಿ ಶೈನ್ ಆಗಿದ್ದಾರೆ.

ಲಕ್ಷ ಲಕ್ಷ ರೂ. ಬಹುಮಾನ: ಗ್ರ್ಯಾಂಡ್ ಫಿನಾಲೆಯ ವಿಜೇತರಾಗಿ ಹೊರಹೊಮ್ಮಿರುವ ಶೈನ್ ಶೆಟ್ಟಿಗೆ ಬಿಗ್​ಬಾಸ್ ವಿನ್ನರ್ ಟ್ರೋಫಿ ಜತೆಗೆ ಬಹುಮಾನದ 50 ಲಕ್ಷ ರೂ. ಚೆಕ್, ಕಾರ್ಯಕ್ರಮದ ಪ್ರಾಯೋಜಕರು ನೀಡಿದ 11 ಲಕ್ಷ ರೂ. ಹಾಗೂ ಟಾಟಾ ಮೋಟರ್ಸ್​ನಿಂದ ಹೊಚ್ಚ ಹೊಸ ಟಾಟಾ ಅಲ್​ಟ್ರೋಜ್ ಕಾರು ಬಹುಮಾನವಾಗಿ ಸಿಕ್ಕಿದೆ. ರನ್ನರ್ ಅಪ್ ಆಗಿರುವ ಹಾಸ್ಯನಟ ಕುರಿ ಪ್ರತಾಪ್​ಗೆ 5 ಲಕ್ಷ ರೂ. ಬಹುಮಾನ ಲಭಿಸಿದೆ. ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಆಗಿದ್ದಕ್ಕಾಗಿ ಶೈನ್ ಶೆಟ್ಟಿ, ಕುರಿ ಪ್ರತಾಪ್, ವಾಸುಕೀ ವೈಭವ್, ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ತಲಾ 1 ಲಕ್ಷ ರೂ. ಬಹುಮಾನವಾಗಿ ಪಡೆದರು. ದೀಪಿಕಾ ದಾಸ್ ನೃತ್ಯ ಸ್ಪರ್ಧೆಯ ವಿಜೇತರಾಗಿರುವುದರಿಂದ ಇಂಡಿಯಾ ಗೇಟ್ ಅವರು ನೀಡಿದ 5 ಲಕ್ಷ ರೂ. ವಿಶೇಷ ಬಹುಮಾನ ಪಡೆದರು. ವಿನ್ನರ್​ಗೆ ನೀಡುವ 10 ಲಕ್ಷ ರೂ. ಮತ್ತು ಮೊದಲ ರನ್ನರ್ ಅಪ್​ಗೆ ನೀಡುವ 5 ಲಕ್ಷ ರೂ. 7 ಅಪ್ ಸಂಸ್ಥೆ ಕೊಟ್ಟಿದೆ. ವಿನ್ನರ್ ಮತ್ತು ಮೊದಲ ರನ್ನರ್ ಅಪ್​ಗೆ ನೀಡುವ ತಲಾ 1 ಲಕ್ಷ ರೂ. ಇಂಡಸ್ 555 ಟಿಎಂಟಿ ಸಂಸ್ಥೆ ನೀಡಿದೆ. ಉಳಿದ ಮೂವರಿಗೆ ನೀಡುವ ತಲಾ 1 ಲಕ್ಷ ರೂ. ಬಹುಮಾನವನ್ನು ಅಯ್ಯಂಗಾರ್ ಪುಳಿಯೋಗರೆ ಮಸಾಲಾ, ಸುಪ್ರೀಂ ಸೋಲಾರ್ ಪ್ರಾಡಕ್ಟ್ಸ್​ ಮತ್ತು ಮಲ್ಲೇಶ್ವರದ ಸುದರ್ಶನ್ ಸಿಲ್ಕ್ಸ್​ರವರು ನೀಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಈ ಸ್ಪರ್ಧಿಗಳು 113 ದಿನ ಇದ್ದಿದ್ದೇ ದೊಡ್ಡ ಸಾಧನೆ. ಈ ಸಲ ಎಲ್ಲ ಸ್ಪರ್ಧಿಗಳು ತುಂಬ ಸ್ಪರ್ಧಾತ್ಮಕವಾಗಿ ಆಡಿದರು. ಮನರಂಜನೆಗೆ ಕಡಿಮೆ ಆಗದಂತೆ ಅವರು ನಡೆದುಕೊಂಡಿದ್ದು ನನಗಂತೂ ತುಂಬ ಸಮಾಧಾನ ತಂದಿದೆ.
| ಸುದೀಪ್ ನಟ, ನಿರೂಪಕ.
ಈ ಸೀಸನ್ ತುಂಬ ಪಾಸಿಟಿವ್ ಆಗಿರಲಿದ್ದು, ಮನರಂಜನೆಗೆ ಒತ್ತು ಇರಲಿದೆ. ಕನ್ನಡದ ಸೊಗಡು ಕೂಡ ಇರಲಿದೆ ಎಂದು ಆರಂಭದಲ್ಲೇ ಹೇಳಿದ್ದೆ. ಸ್ಪರ್ಧಿಗಳು ನನ್ನ ನಿರೀಕ್ಷೆ ನಿಜ ಮಾಡಿದ್ದಾರೆ. ಸದ್ದು, ಗದ್ದಲ, ಜಗಳ, ನೆಗೇಟಿವಿಟಿ ಕಡಿಮೆ ಇದ್ದು ಪರಸ್ಪರ ಗೌರವ, ಸ್ನೇಹ, ಪ್ರೀತಿಯಿಂದಲೂ ಬಿಗ್​ಬಾಸ್ ಸೀಸನ್ ನಡೆಯಬಹುದು ಎಂಬುದಕ್ಕೆ ಈ ಸೀಸನ್ ಕೂಡ ಉದಾಹರಣೆ ಆಗಿದೆ.
| ಪರಮೇಶ್ವರ ಗುಂಡ್ಕಲ್ ಬಿಜಿನೆಸ್ ಹೆಡ್, ಕನ್ನಡ ಕ್ಲಸ್ಟರ್, ವಯಾಕಾಮ್ 18.

ಶೈನ್ ವಿನ್ನರ್​ ಪ್ರತಾಪ್ ​ವಾಸುಕಿ ರನ್ನರ್ಸ್: ನೂರ ಹದಿಮೂರು ದಿನಗಳ ಕಾಲ ಪ್ರೇಕ್ಷಕರ ಕುತೂಹಲ ಉಳಿಸಿಕೊಂಡೇ ಬಂದಿದ್ದ ‘ಬಿಗ್​ಬಾಸ್ ಕನ್ನಡ ಸೀಸನ್ 7’ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಾಗಿ ನಟ ಶೈನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಅವರಿಗೆ ಪ್ರಬಲ ಸ್ಪಧಿಯಾಗಿದ್ದವರ ಪೈಕಿ ಕುರಿ ಪ್ರತಾಪ್ ಮೊದಲನೇ ಹಾಗೂ ವಾಸುಕೀ ವೈಭವ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಗ್ರ್ಯಾಂಡ್ ಫಿನಾಲೆಯ ವಿಜೇತರಾಗುವ ಮೂಲಕ ಶೈನ್ ಶೆಟ್ಟಿ ಬಹುಮಾನದ 50 ಲಕ್ಷ ರೂ. ಸೇರಿ ಒಟ್ಟು 61 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ,

ಅವರಿಗೆ ಹೊಚ್ಚ ಹೊಸ ಮಾಡೆಲ್​ನ ಟಾಟಾ ಅಲ್​ಟ್ರೋಜ್ ಕಾರು ಕೂಡ ಕೊಡುಗೆಯಾಗಿ ಸಿಕ್ಕಿದೆ. ಬಹಳ ಕುತೂಹಲ ಕೆರಳಿಸಿದ್ದ ಈ ಗ್ರ್ಯಾಂಡ್ ಫಿನಾಲೆ ಪ್ರವೇಶಕ್ಕೆ ಶನಿವಾರ ನಡೆದ ಹಣಾಹಣಿಯಲ್ಲಿ ಶೈನ್ ಶೆಟ್ಟಿ, ವಾಸುಕೀ ವೈಭವ್, ಕುರಿ ಪ್ರತಾಪ್, ದೀಪಿಕಾ ದಾಸ್, ಭೂಮಿ ಶೆಟ್ಟಿ ಅವರಿದ್ದಿದ್ದು, ಅದರಲ್ಲಿ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಎಲಿಮಿನೇಟ್ ಆಗಿದ್ದರು. ಹೀಗಾಗಿ ಭಾನುವಾರ ಗ್ರಾ್ಯಂಡ್ ಫಿನಾಲೆಯಲ್ಲಿ ಶೈನ್ ಶೆಟ್ಟಿ, ವಾಸುಕೀ ವೈಭವ್, ಕುರಿ ಪ್ರತಾಪ್ ಸ್ಪರ್ಧಿಗಳಾಗಿದ್ದರು. ಮೂವರೂ ಪ್ರತಿಭಾನ್ವಿತರೇ ಆಗಿರುವುದರಿಂದ ಇವರ ಮಧ್ಯೆ ತೀವ್ರ ಪೈಪೋಟಿ ಇತ್ತು. ಅಲ್ಲದೆ, ಯಾರು ವಿಜೇತರೆನಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಕೆರಳಿತ್ತು. ಗ್ರ್ಯಾಂಡ್ ಫಿನಾಲೆಯ ಬಹಳ ಕೌತುಕದ ಹಂತದಲ್ಲೇ ಮೊದಲಿಗೆ ಗಾಯಕ, ಸಂಗೀತ ನಿರ್ದೇಶಕ ವಾಸುಕೀ ವೈಭವ್ ಔಟ್ ಆಗಿದ್ದರಿಂದ, 2ನೇ ರನ್ನರ್ ಅಪ್ ಎನಿಸಿಕೊಂಡರು. ಬಳಿಕ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ ಪೈಕಿ ಶೈನ್ ಮೇಲುಗೈ ಸಾಧಿಸಿದ್ದರಿಂದ ಅವರು ‘ಬಿಗ್​ಬಾಸ್ ಕನ್ನಡ ಸೀಸನ್ 7ರ ವಿಜೇತರಾಗಿ, ಗೆಲುವಿನ ನಗೆ ಬೀರಿದ್ದಾರೆ. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣಗೊಂಡು ‘ಕಲರ್ಸ್ ಕನ್ನಡ ವಾಹಿನಿ’ಯಲ್ಲಿ 113 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 18 ಸ್ಪರ್ಧಿಗಳು ಪಾಲ್ಗೊಂಡಿದ್ದರು.