ಸುಶಾಂತ್ ಸಿಂಗ್ ಸಾವಿನ ನಂತರ ಸಿಕ್ಕಾಪಟ್ಟೆ ಸುದ್ದಿಯಾದವರೆಂದರೆ ಅದು ಕರಣ್ ಜೋಹರ್. ನೆಪೋಟಿಂ ವಿಷಯದಲ್ಲಿ ಕರಣ್ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿ ಹಾಕಿದರು. ಇದರಿಂದ ಬೇಸತ್ತ ಕರಣ್, ಸೋಷಿಯಲ್ ಮೀಡಿಯಾದಿಂದ ಕಾಲ್ಕಿತ್ತಿದ್ದೂ ಆಯಿತು.
ಇದನ್ನೂ ಓದಿ: ಪಾತ್ರಕ್ಕಾಗಿ ಯಾವ ಹೀರೋ ಜತೆಗೂ ಮಲಗಿಲ್ಲ: ರವೀನಾ ಟಂಡನ್
ಇದೀಗ ಕರಣ್ ಜೋಹರ್ ಪರವಾಗಿ ಹಿರಿಯ ನಟ ಶತ್ರುಘ್ನ ಸಿನ್ಹಾ ಬಂದಿದ್ದಾರೆ. ಇವತ್ತು ಕರಣ್ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರಬೇಕಾದರೆ, ಅದು ತಮ್ಮ ಶ್ರದ್ಧೆ ಮತ್ತು ಕೆಲಸದಿಂದ ಹೊರತು, ಅವರು ಯಶ್ ಜೋಹರ್ ಮಗ ಎಂಬ ಕಾರಣಕ್ಕಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನು ಕರಣ್ ತಂದೆ ಯಶ್ ಜತೆಗೆ ಕೆಲಸ ಮಾಡಿದ್ದೇನೆ. ಅವರು ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಅವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿರಬಹುದು. ಆದರೆ, ಕರಣ್ ಇವತ್ತು ದೊಡ್ಡ ಹೆಸರು ಮಾಡಿದ್ದಾರೆ ಮತ್ತು ದೇಶದ ಉದ್ದಗಲಕ್ಕೂ ಹೆಸರು ಮಾಡಿದ್ದಾರೆ ಎಂದರೆ ಅದಕ್ಕೆ ಕಾರಣ, ಅವರು ಮಾಡಿರುವ ಚಿತ್ರಗಳು' ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
'ದೊಡ್ಡ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಯಶಸ್ವಿಯಾಗೋಕೆ ಆಗುವುದಿಲ್ಲ. ಹಾಗೆಯೇ ಹೊರಗಿನಿಂದ ಬಂದವರಿಗೆ ಸ್ಟಾರ್ಪಟ್ಟ ಸಿಗುವುದಿಲ್ಲ ಎಂದು ಹೇಳೋಕೂ ಆಗುವುದಿಲ್ಲ. ಎಲ್ಲದಕ್ಕೂ ಶ್ರಮ ಹಾಕಲೇ ಬೇಕು. ನನ್ನ ಪ್ರಕಾರ, ಸುಶಾಂತ್ ಹೊರಗಿನಿಂದ ಬಂದರೂ, ತಮ್ಮದೇ ರೀತಿಯಲ್ಲಿ ಒಬ್ಬ ಯಶಸ್ವಿ ನಟರಾಗಿದ್ದರು' ಎಂದು ಶತ್ರುಘ್ನ ಸಿನ್ಹಾ ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ಕಂಗನಾ ಬಗ್ಗೆ ಮಾತನಾಡಿದ್ದ ಅವರು, 'ಬಹಳಷ್ಟು ಜನ ಕಂಗನಾ ವಿರುದ್ಧ ಮಾತಾಡುತ್ತಾರೆ. ಅದಕ್ಕೆ ಕಾರಣ ಆಕೆಯ ಬಗ್ಗೆ ಅವರೆಲ್ಲರಿಗೂ ಹೊಟ್ಟೆ ಉರಿ. ಆಕೆ ಯಾವ ಕ್ಯಾಂಪ್ನಲ್ಲೂ ಗುರುತಿಸಿಕೊಂಡಿಲ್ಲ. ಆಕೆಗೆ ಗಾಡ್ಫಾದರ್ ಇಲ್ಲ. ತನ್ನ ಸ್ವಂತ ಪ್ರತಿಭೆಯನ್ನು ನಂಬಿಕೊಂಡು ಬಂದ ಆಕೆ, ಇಂದು ಎಲ್ಲರನ್ನೂ ಹಿಂದಕ್ಕೆ ಸರಿಸಿ, ಸಾಧನೆ ಮಾಡಿರುವುದು ಸಹಜವಾಗಿಯೇ ಎಲ್ಲರಿಗೂ ಹೊಟ್ಟೆ ಉರಿ ಇದ್ದೇ ಇರುತ್ತದೆ' ಎಂದು ಹೇಳಿದ್ದರು.