ಸಿನಿವಾಣಿ

'ಛೂ ಮಂತರ್' ಮಾಡಲು ಬರುತ್ತಿದ್ದಾರೆ ಶರಣ್​ …

ಬೆಂಗಳೂರು: ಶರಣ್​ ಅಭಿನಯದ ಎರಡು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಎರಡೂ ಚಿತ್ರಗಳ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಸಿಕ್ಕರೂ, ಅದ್ಯಾಕೋ ಎರಡೂ ಚಿತ್ರಗಳು ಬಾಕ್ಸ್​-ಆಫೀಸ್​​ನಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ಹೀಗಿರುವಾಗಲೇ, ಶರಣ್​ ಹೊಸ ವರ್ಷಕ್ಕೆ ಹೊಸ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ.

ಅಂದಹಾಗೆ, ಶರಣ್​ ಅಭಿನಯದ ಹೊಸ ಚಿತ್ರದ ಹೆಸರು 'ಛೂ ಮಂತರ್​'. ಇದೊಂದು ಹಾರರ್​ ಕಾಮಿಡಿ ಚಿತ್ರವಾಗಿದ್ದು, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶರಣ್​ ಮತ್ತು ಚಿಕ್ಕಣ್ಣ ಒಟ್ಟಿಗೆ ನಟಿಸಿದೇ ಕೆಲವು ವರ್ಷಗಳಾಗಿದ್ದವು. ಈ ಚಿತ್ರದ ಮೂಲಕ ಇಬ್ಬರೂ ವಾಪಸ್ಸಾಗುತ್ತಿದ್ದಾರೆ.

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಚಿತ್ರ. ಇನ್ನು 'ಕರ್ವ' ಖ್ಯಾತಿಯ ನವನೀತ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ದವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಕಾಂಡ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ನಡೆದಿದೆ. ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ.