ವರನಟ ಡಾ.ರಾಜಕುಮಾರ್ ಅವರು ಭೌತಿಕವಾಗಿ ನಮ್ಮಿಂದ ದೂರವಾಗಿ 19 ವರ್ಷಗಳಾದರೂ, ಸರಳತೆ, ಸಿನಿಮಾಗಳು ಹಾಗೂ ಜೀವನದ ಆದರ್ಶಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೊಮ್ಮಗ, ನಟ ಷಣ್ಮುಖ ಗೋವಿಂದರಾಜು ತಾತ ಹೇಳಿಕೊಟ್ಟ ಬದುಕಿನ ಸಿದ್ಧಾಂತಗಳು ಹಾಗೂ ಅವರೊಂದಿಗೆ ಕಳೆದ ಸುಂದರ ಕ್ಷಣಗಳ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.
ನಾವು ಚಿಕ್ಕವರಿದ್ದಾಗ ತಾತ ಯಾವಾಗಲೂ ಬಿಜಿ ಇರುತ್ತಿದ್ದರು. ಆ ಮಧ್ಯೆಯೂ ಮೊಮ್ಮಕ್ಕಳ ಪ್ರೀತಿಗೆ ಕೊರತೆ ಮಾಡಿದವರಲ್ಲ. ರಜೆ ಬಂದರೆ ಸಾಕು ನಾವು ಅವರ ಬಳಿ ಹೋಗುತ್ತಿದ್ದೆವು. ಆ ಸಮಯದಲ್ಲಿ ಶೂಟಿಂಗ್ ಇದ್ದರೆ ನಮ್ಮನ್ನು ಅಲ್ಲಿಗೇ ಕರೆದುಕೊಂಡು ಹೋಗುತ್ತಿದ್ದರು. ಮೊಮ್ಮಕ್ಕಳು ಎಂದರೆ ತುಂಬಾ ಪ್ರೀತಿ. ನಾನು ಮತ್ತು ಅಕ್ಕ ತಾತನ ಜತೆ ಹೆಚ್ಚು ಕಾಲ ಕಳೆದಿದ್ದೇವೆ. ಸ್ವಲ್ಪ ದೊಡ್ಡವರಾಗುತ್ತಾ ನಮ್ಮ ತಾತ ದೊಡ್ಡ ಸ್ಟಾರ್ ನಟ ಅಂತ ನಮಗೆ ಗೊತ್ತಾಗಿದ್ದು. ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಅವರನ್ನು ನೋಡಲೆಂದೇ ಜನ ಕಾದು ಕುಳಿತಿರುತ್ತಾರೆ ಅಂತ. ಎಷ್ಟೇ ಬಿಜಿಯಿದ್ದರೂ ಮೊಮ್ಮಕ್ಕಳಿಗೆ ಸಮಯ ನೀಡುವುದನ್ನು ಅವರು ತಪ್ಪಿಸುತ್ತಿರಲಿಲ್ಲ. ಅವರೊಬ್ಬ ದೊಡ್ಡ ಸ್ಟಾರ್ ಎಂಬುದನ್ನು ನಮ್ಮ ಮುಂದೆ ಯಾವತ್ತೂ ತೋರಿಸಿಕೊಂಡವರಲ್ಲ. ಬದುಕಿನಲ್ಲಿ ಅವರು ಏನೆಲ್ಲ ಪಡೆಯಬಹುದಿತ್ತು. ಆದರೆ, ಯಾವುದಕ್ಕೂ ಆಸೆ ಪಟ್ಟವರಲ್ಲ. ಏನೂ ಬೇಡ ಎನ್ನುವ ಮನೋಭಾವವೇ ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ದೊಡ್ಡ ಸಂಗತಿ ಎಂದು ಭಾವಿಸುತ್ತೇನೆ.
ಶಿಸ್ತಿನ ಮಾದರಿ: ನಮ್ಮ ತಾತನವರ ಬದುಕೇ ಮಾದರಿ ಹಾಗೂ ಆದರ್ಶ. ಶ್ರದ್ಧೆ ಹಾಗೂ ಶಿಸ್ತು ಮುಖ್ಯ ಎಂದು ಒತ್ತಿ ಹೇಳುತ್ತಿದ್ದರು. ಅವರು ಕೂಡ ಹಾಗೆಯೇ ಬದುಕುತ್ತಿದ್ದರು. 70 ವರ್ಷವಿದ್ದಾಗಲೂ ‘ಶಬ್ದವೇದಿ’ ಶೂಟಿಂಗ್ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಇರುತ್ತಿದ್ದರು. ಸಮಯ ಪಾಲನೆ ಅವರಿಂದ ನೋಡಿನೇ ನಾವೆಲ್ಲ ಕಲಿಯಬೇಕು. ಅವರು ಶಿಸ್ತಿನ ವ್ಯಕ್ತಿ. ರಾತ್ರಿ ನಿಯಮಿತವಾಗಿ ಊಟ ಮಾಡುತ್ತಿದ್ದರು, ಸರಿಯಾದ ಸಮಯಕ್ಕೆ ಮಲಗುತ್ತಿದ್ದರು. ಅವರು ಹೇಳಿದಂತೆಯೇ ಬದುಕಿದವರು. ಅವರು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಎಂದಿಗೂ ಯಾರಿಗೂ ಏಕವಚನ ಬಳಸಿದವರಲ್ಲ. ಬಹುವಚನದಿಂದ ಅವರೇ, ಇವರೇ ಎಂದು ಮಾತನಾಡಿಸುತ್ತಿದ್ದರು. ಅದೆಲ್ಲವನ್ನೂ ಅವರನ್ನು ನೋಡಿಯೇ ನಾವೂ ಕಲಿತಿದ್ದು.
ಅಗಳು ಅನ್ನಕ್ಕೂ ಗೌರವ: ತಾತನವರಲ್ಲಿ ನನಗೆ ತುಂಬಾ ಇಷ್ಟವಾದ ಹಾಗೂ ನಾನು ಇಂದಿಗೂ ಪಾಲಿಸುವುದು ಊಟದ ವಿಷಯ. ಒಂದು ಅಗಳು ಅನ್ನವನ್ನೂ ಅವರು ಚೆಲ್ಲುತ್ತಿರಲಿಲ್ಲ. ಮನೆಯಲ್ಲಿ ಕಾಲಿಗೆ ಒಂದು ಅಗಳು ಸಿಕ್ಕಿಬಿಟ್ಟರೇ ಪೇಚಾಡಿಬಿಡುತ್ತಿದ್ದರು. ಕೊನೆಗೆ ಅಗಳು ಅನ್ನವನ್ನು ಕಣ್ಣಿಗೆ ಒತ್ತಿಕೊಂಡು ಡಸ್ಟ್‌ಬಿನ್‌ಗೆ ಹಾಕುತ್ತಿದ್ದರು. ಮನೆಯಲ್ಲಿ ನಾವು ತಾತನ ಜತೆ ಕುಳಿತು ಊಟ ಮಾಡುವುದಕ್ಕೆ ಭಯ ಪಡುತ್ತಿದ್ದೆವು. ಚೂರು ಆಹಾರ ಕೂಡ ವೇಸ್ಟ್ ಮಾಡಲು ಬಿಡುತ್ತಿರಲಿಲ್ಲ. ಎಲ್ಲವನ್ನೂ ತಿನ್ನಿಸುತ್ತಿದ್ದರು. ಆಗ ಚಿಕ್ಕವರಿದ್ದೆವು. ಅಷ್ಟು ತಿನ್ನಲು ಆಗಲ್ಲ ಎಂದರೆ, ಎಷ್ಟು ಬೇಕು ಅಷ್ಟೇ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದರು. ಅದರಿಂದಾಗಿ ನಾನು ಇಂದಿಗೂ ಒಂಚೂರು ಅನ್ನ ವೇಸ್ಟ್ ಮಾಡುವುದಿಲ್ಲ. ಊಟದ ವಿಚಾರಕ್ಕೆ ನಾನು ತಾತನನ್ನು ದಿನ ನೆನಪಿಸಿಕೊಳ್ಳುತ್ತೇನೆ.
ಫಿಟ್‌ನೆಸ್ ಐಡಲ್: ದೇಹ ದಂಡನೆ, ಫಿಟ್‌ನೆಸ್ ಹಾಗೂ ಆರೋಗ್ಯ ವಿಚಾರವಾಗಿ ನನಗೆ ಇಂದಿಗೂ ತಾತನೇ ಸ್ಫೂರ್ತಿ. ಅವರು ಜ್ವರ, ನೆಗಡಿ ಬಂದು ಮಲಗಿರುವುದು ನಾನೆಂದೂ ನೋಡೇ ಇಲ್ಲ. ಅಷ್ಟು ಚೆನ್ನಾಗಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಬೆಳಗ್ಗೆ ಎದ್ದು ಯೋಗ, ಧ್ಯಾನ ಮಾಡುತ್ತಿದ್ದರು. ಸರಿಯಾಗಿ ದೇಹ ದಂಡಿಸುತ್ತಿದ್ದರು. ಕೊನೆಯ ದಿನಗಳವರೆಗೆ ಅವರ ಪ್ಯಾಂಟ್ ಸೈಜ್ 32 ಇತ್ತು ಅಂತ ಮನೆಯಲ್ಲಿ ಹೇಳುತ್ತಾರೆ. ಅದು ನನಗೆ ಅಚ್ಚರಿ ಎನಿಸುತ್ತದೆ.
ಅಣ್ಣಾವ್ರಲ್ಲೊಬ್ಬ ಕನ್ನಡ ಗುರು: ತಾತನಲ್ಲಿ ಒಬ್ಬ ಕನ್ನಡದ ಮೇಷ್ಟ್ರು ಇದ್ದರು. ನಮಗೆ ಅವರು ಅದ್ಭುತವಾಗಿ ಕನ್ನಡ ಪಾಠ ಮಾಡುತ್ತಿದ್ದರು. ಶಬ್ದಗಳ ಉಚ್ಛಾರ ಹಾಗೂ ಅಲ್ಪಪ್ರಾಣ, ಮಹಾಪ್ರಾಣದ ತಪ್ಪು ಮಾಡಿದಾಗ ತಿಳಿಸಿ ಹೇಳುತ್ತಿದ್ದರು. ‘ಅ’ ಕಾರ, ‘ಹ’ ಕಾರಗಳ ವ್ಯತ್ಯಾಸ ತಿಳಿಸುವಾಗ ‘ಅಕ್ಕಿ’ ಊಟ ಮಾಡುವುದು, ‘ಹಕ್ಕಿ’ ಆಕಾಶದಲ್ಲಿ ಹಾರುವುದು ಎಂದು ಇದೇ ತರಹದ ಹಲವಾರು ವಿಚಾರಗಳನ್ನು ಉದಾಹರಣೆ ಸಮೇತ ಹೇಳುತ್ತಿದ್ದರು. ಇದು ನಮಗೆ ಮನಮುಟ್ಟುತ್ತಿತ್ತು. ಇದೇ ಕಾರಣಕ್ಕೆ ಅವರೇ ನನ್ನ ಕನ್ನಡದ ಮೊದಲ ಗುರು ಎಂದು ಹೇಳಬಲ್ಲೆ.