ಸಿನಿವಾಣಿ

ಕಿಂಗ್ ಖಾನ್​ಗೆ 40 ಮಿಲಿಯನ್ ಹಿಂಬಾಲಕರು

ಮುಂಬೈ: ಬಾಲಿವುಡ್ ಬಾದ್​ಷಾ ಶಾರೂಖ್ ಖಾನ್ ಹೊಸ ದಾಖಲೆ ಬರೆದಿದ್ದಾರೆ. ಟ್ವಿಟರ್​ನಲ್ಲಿ 40 ಮಿಲಿಯನ್ ಫಾಲೋವರ್​ಗಳನ್ನು ಪಡೆಯುವುದರ ಮೂಲಕ 40 ಮಿಲಿಯನ್ ಕ್ಲಬ್​ಗೆ ಸೇರಿದ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟ್ವಿಟರ್​ನಲ್ಲಿ ಭಾರತೀಯರ ಹವಾ ದೊಡ್ಡ ಮಟ್ಟಿಗಿದೆ. ಅದರಲ್ಲೂ ಸೆಲೆಬ್ರಿಟಿಗಳಿಗೆ ಟ್ವಿಟರ್​ನಲ್ಲಿ ಲಕ್ಷಲಕ್ಷ ಅಭಿಮಾನಿಗಳಿರುವುದಷ್ಟೇ ಅಲ್ಲ, ಒಬ್ಬೊಬ್ಬ ಸೆಲೆಬ್ರಿಟಿಯ ಹಲವು ಅಭಿಮಾನಿ ಸಂಘಗಳಿವೆ. ಈ ಪೈಕಿ 40 ಮಿಲಿಯನ್ ಹಿಂಬಾಲಕರನ್ನು ತಮ್ಮದಾಗಿಸಿಕೊಂಡ ಸೆಲೆಬ್ರಿಟಿಗಳ ಸಾಲಿಗೆ ಶಾರೂಖ್ ಖಾನ್ ಸಹ ಸೇರಿದ್ದಾರೆ. ಟ್ವಿಟರ್ ಲೋಕಕ್ಕೆ ಶಾರೂಖ್ ಖಾನ್ ಎಂಟ್ರಿ ಕೊಟ್ಟಿದ್ದು 2010ರಲ್ಲಿ. ಈ 10 ವರ್ಷಗಳಲ್ಲಿ ತೆರೆಯ ಮೇಲಷ್ಟೇ ಅಲ್ಲ, ತಮ್ಮ ಅದ್ಭುತ ಒನ್​ಲೈನರ್​ಗಳಿಂದ ಟ್ವಿಟರ್​ನಲ್ಲೂ ಅಭಿಮಾನಿಗಳನ್ನು ಶಾರೂಖ್ ಖಾನ್ ರಂಜಿಸುತ್ತಾ ಬಂದಿದ್ದಾರೆ. ಶಾರೂಖ್ ಅವರ ಈ ಸಾಧನೆಗೆ, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಇನ್ನು ಟ್ವಿಟರ್​ನಲ್ಲಿ ಸಕ್ರಿಯವಾಗಿರುವ ಮತ್ತು ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಇತರೆ ಸೆಲೆಬ್ರಿಟಿಗಳೆಂದರೆ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ರಾಮ್ ಗೋಪಾಲ್ ವರ್ಮ, ದೀಪಿಕಾ ಪಡುಕೋಣೆ, ಅಮೀರ್ ಖಾನ್, ಪ್ರಿಯಾಂಕಾ ಚೋಪ್ರಾ ಮುಂತಾದವರೂ ಇದ್ದಾರೆ.

ಇನ್ನೂ ‘ಜೀರೋ’ ಚಿತ್ರದ ಸೋಲಿನ ನಂತರ ಒಂದೂವರೆ ವರ್ಷಗಳಿಂದ ಯಾವುದೇ ಸಿನಿಮಾ ಒಪ್ಪದಿದ್ದ ಶಾರೂಖ್, ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್ ಮುಂತಾದವರು ಅಭಿನಯಿಸಿರುವ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ವಿಜ್ಞಾನಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈ ಚಿತ್ರ, ಈ ವರ್ಷದ ಕೊನೆಗೆ ಬಿಡುಗಡೆಯಾಗುತ್ತಿದೆ. (ಏಜೆನ್ಸೀಸ್)