ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಅವರು. ಹಾಗಂತ ಚಪ್ಪಲಿ ಎಸೆಯುವುದಕ್ಕೆ ಅನುಮತಿ ಕೊಟ್ಟವರು ಯಾರು?
ಹಾಗಂತ ಕೆಲವು ದಿನಗಳ ಹಿಂದೆ ಕಂಗನಾ ಪ್ರಶ್ನಿಸಿದ್ದರು. ಹಲವು ವರ್ಷಗಳ ಹಿಂದೆ, ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರು ಕಂಗನಾ ಮೇಲೆ ಚಪ್ಪಲಿ ಎಸೆದಿದ್ದರಂತೆ. ಈ ಕುರಿತು ಕೆಲವು ದಿನಗಳ ಹಿಂದೆ ಕಂಗನಾ ಬೇಸರಿಸಿಕೊಂಡಿದ್ದರು. ಈ ಬಗ್ಗೆ ಸೋಷಿಯಲ್
ಮೀಡಿಯಾದಲ್ಲೂ ಸಾಕಷ್ಟು ಚರ್ಚೆಯಾಗಿತ್ತು.
ಭಾನುವಾರವಷ್ಟೇ ಗಾಯಕ ಸೋನು ನಿಗಮ್ ಸಹ ಕಂಗನಾ ಪರವಾಗಿ ಮಾತನಾಡಿದ್ದರು. ಕಂಗನಾ ಈ ವಿಷಯದಲ್ಲಿ ಸುಳ್ಳು ಹೇಳುವುದಕ್ಕೆ ಚಾನ್ಸೇ ಇಲ್ಲ, ಯಾರಾದರೂ ಯಾಕೆ ಈ ತರಹ ಸುಳ್ಳು ಹೇಳಬೇಕು ಎಂದು ಅವರು ಪ್ರಶ್ನಿಸಿದ್ದರು.
ಆದರೆ, ಕಂಗನಾ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ ಮತ್ತು ಈ ಘಟನೆಗೆ ನಾನೇ ಸಾಕ್ಷಿಯಾಗಿದ್ದೆ ಎಂದು ಬರಹಗಾರ್ತಿ ಶಗುಫ್ತಾ ರಫೀಕ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಕಳೆದ ಹಲವು ದಿನಗಳಿಂದ ಈ ವಿಷಯವಾಗಿ ಕೇಳುತ್ತಲೇ ಬಂದಿದ್ದೇನೆ. ಆದರೆ, ಇದು ಅಪ್ಪಟ ಸುಳ್ಳು. ಏಕೆಂದರೆ, ನಾನು ಸಹ ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದೆ. ಇದಾಗಿದ್ದು 2006ರಲ್ಲಿ, 'ವೋ ಲಮ್ಹೇ' ಚಿತ್ರದ ಸಂದರ್ಭದಲ್ಲಿ. ಚಿತ್ರೀಕರಣಕ್ಕೆ ಕಂಗನಾ ತಡವಾಗಿ ಬಂದರು. ಇದರಿಂದ ಸಿಟ್ಟಾದ ಮಹೇಶ್ ಭಟ್, ಸಿಕ್ಕಾಪಟ್ಟೆ ಬೈದರು. ಅವರು ಯಾವತ್ತೂ ಆ ರೀತಿ ಬೈದಿದ್ದು ನಾನು ನೋಡಿಯೇ ಇಲ್ಲ. ಅವರು ಎಲ್ಲರ ಮುಂದೆ ಬೈದಿದ್ದು ಸ್ವಲ್ಪ ಜಾಸ್ತಿಯಾದರೂ, ಅವರು ಕೈಎತ್ತಿದ್ದು, ಚಪ್ಪಲಿ ಎಸೆದಿದ್ದು ಎಲ್ಲವೂ ಸುಳ್ಳು' ಎಂದು ಹೇಳಿಕೊಂಡಿದ್ದಾರೆ ಶಗುಫ್ತಾ.
ಇದನ್ನೂ ಓದಿ: ಸುಶಾಂತ್ ಸಿಂಗ್ ಉಗುರುಗಳಲ್ಲಿ ಅಡಗಿದೆಯಾ ಸಾವಿನ ಹಿನ್ನೆಲೆ?; ಮುಂಬೈ ಪೊಲೀಸ್ ಕಾಯುತ್ತಿದೆ ಆ ವರದಿಗಾಗಿ…
ಈ ಘಟನೆಗೆ ಅವರೊಬ್ಬರೇ ಸಾಕ್ಷಿಯಲ್ಲವಂತೆ. ಆ ಸಂದರ್ಭದಲ್ಲಿ ನಿರ್ದೇಶಕ ಮೋಹಿತ್ ಸೂರಿ, ಮಹೇಶ್ ಭಟ್ ಅವರ ಸಹೋದರ ಮುಕೇಶ್ ಭಟ್ ಮತ್ತು ಚಿತ್ರದಲ್ಲಿ ಕೆಲಸ ಮಾಡಿದ ಹಲವು ಕಲಾವಿದರು ಮತ್ತು ತಂತ್ರಜ್ಱರು ಸಹ ಸಾಕ್ಷಿಯಾಗಿದ್ದರು ಎನ್ನುತ್ತಾರೆ ಶಗುಫ್ತಾ.
ಇನ್ನು ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಮಾತನಾಡುವ ಅವರು, ಮಹೇಶ್ ಭಟ್ ಯಾವತ್ತೂ ಇಂಥದ್ದನ್ನೆಲ್ಲಾ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದ್ದಾರೆ. 'ಭಟ್ ಇದುವರೆಗೂ ಹಲವರು ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅಷ್ಟೇ ಏಕೆ, ನಾನು ಮೊದಲು ಬಾರ್ಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ನನ್ನ ಪ್ರತಿಭೆ ಗುರುತಿಸಿ ಬರೆಯುವುದಕ್ಕೆ ಅವಕಾಶ ಕೊಟ್ಟವರು ಅವರು. ಅವರ ಚಿತ್ರಗಳಿಂದ ನನಗೆ ಬ್ರೇಕ್ ಸಿಕ್ಕಿತು ಮತ್ತು ನನ್ನ ಬದುಕೇ ಬದಲಾಯಿತು' ಎಂದು ಶಗುಫ್ತಾ ಹೇಳಿಕೊಂಡಿದ್ದಾರೆ.