ಮುಂಬೈ: ಬಾಲಿವುಡ್ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿದ್ದ ಕಂಗನಾ ಕೆಲವು ದಿನಗಳಿಂದ ಸ್ವಲ್ಪ ಶಾಂತರಾಗಿದ್ದಾರೆ. ಅದಕ್ಕೆ ಕಾರಣ, 'ತಲೈವಿ' ಚಿತ್ರದ ಚಿತ್ರೀಕರಣದಲ್ಲಿ ಕಂಗನಾ ತೊಡಗಿಸಿಕೊಂಡಿರುವುದು. ಹಾಗಾಗಿ ಅವರು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ.
ಕಂಗನಾ ಮಾತನಾಡದಿದ್ದರೂ, ಅವರು ಹಿಂದೊಮ್ಮೆ ಆಡಿದ ಮಾತುಗಳ ಬಗ್ಗೆ ಇನ್ನೂ ಚರ್ಚೆಯಾಗುತ್ತಲೇ ಇದೆ. ಈಗ ಹಿರಿಯ ನಟಿ ಶಬಾನಾ ಆಜ್ಮಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಕಂಗನಾ ಇಷ್ಟೆಲ್ಲಾ ಮಾಡ್ತಿರೋದು ಸುದ್ದಿಯಲ್ಲಿರೋದಕ್ಕೆ ಮತ್ತು ಪ್ರಚಾರ ಪಡೆಯುವುದಕ್ಕೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಶಾಬಾನಾ, 'ಕಂಗನಾ ತಾನು ಹೇಳಿದ ಸುಳ್ಳುಗಳನ್ನೇ ನಂಬುತ್ತಿದ್ದಾಳೆ. ಚಿತ್ರರಂಗಕ್ಕೆ ಮಹಿಳಾವಾದ ಮತ್ತು ರಾಷ್ಟ್ರೀಯವಾದ ಪರಿಚಯಿಸಿದ್ದೇ ತನ್ನ ಚಿತ್ರಗಳು ಎಂದು ಮಾತನಾಡುತ್ತಿದ್ದಾಳೆ. ಬೇರೆ ಯಾರೂ ಇದನ್ನು ಗುರುತಿಸುತ್ತಿಲ್ಲ ಮತ್ತು ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕೆಯೇ ಪದೇಪದೇ ಈ ವಿಷಯವಾಗಿ ಮಾತಾಡುತ್ತಿದ್ದಾಳೆ' ಎನ್ನುತ್ತಾರೆ ಶಬಾನಾ.
ಬಹುಶಃ ತಾನು ಹೆಚ್ಚುಕಾಲ ಸುದ್ದಿಯಲ್ಲಿರುವುದಕ್ಕೆ ಸಾಧ್ಯವಿಲ್ಲ ಎಂದನಿಸಿರುವುದರಿಂದಲೇ ಚಿತ್ರ-ವಿಚಿತ್ರ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವುದಕ್ಕೆ ಹಪಹಪಿಸುತ್ತಿದ್ದಾಳೆ ಎಂದು ಆರೋಪಿಸಿರುವ ಶಬಾನಾ, 'ಕಂಗನಾ ಒಳ್ಳೆಯ ನಟಿ. ಇಷ್ಟೆಲ್ಲಾ ಮಾಡುವ ಬದಲು, ಅಭಿನಯದಿಂದ ಇನ್ನೂ ಎತ್ತರಕ್ಕೆ ಬೆಳೆಯುವ ಬಗ್ಗೆ ಯೋಚಿಸಿದ್ದರೆ ಚೆನ್ನಾಗಿರುತಿತ್ತು' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಗತಿ ಸ್ಟುಡಿಯೋದ ನಾಗೇಶ್ ಬಾಬ ಇನ್ನಿಲ್ಲ
ಹಾಗಂತ ಆಗಿದ್ದೆಲ್ಲವನ್ನು ತಾನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದಿರುವ ಅವರು, 'ಚಿತ್ರರಂಗದಲ್ಲಿ ಹಲವು ಸಮಸ್ಯೆಗಳಿವೆ. ಹಾಗಂತ ಇಡೀ ಚಿತ್ರರಂಗವೇ ಕೆಟ್ಟದ್ದು ಎಂದು ಹೇಳುವುದು ತಪ್ಪಾಗುತ್ತದೆ. ಇನ್ನು ಗಹನವಾದ ವಿಷಯದಿಂದ ಎಲ್ಲರ ಗಮನವನ್ನು ಸರಿಸಬೇಕೆಂದರೆ, ಬಾಲಿವುಡ್ನವರ ಮೇಲೆ ಏನಾದರೂ ಆರೋಪ ಮಾಡಿದರೆ, ಸಾಕು ಅದರಿಂದ ತನ್ನಿಂತಾನೇ ಗಮನ ಬೇರೆ ಕಡೆ ಸರಿಯುತ್ತದೆ' ಎಂದು ಶಬಾನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.