ಸಿನಿವಾಣಿ

ಮದುವೆ ಆಗದೆಯೇ ಸೆಟಲ್ ಆಗಿದ್ದೀನಿ!; ಕಿಯಾರಾ ಅಡ್ವಾನಿ ಖಡಕ್ ಉತ್ತರ

ಬಾಲಿವುಡ್ ಸುಂದರಿ ಕಿಯಾರಾ ಅಡ್ವಾನಿ ಸೆಟಲ್ ಆಗಿದ್ದಾರಂತೆ. ಹಾಗಂತ ಮದುವೆ ಆಗಿದ್ದಾರೆ ಅಂತ ಅರ್ಥವಲ್ಲ. ಬದಲಾಗಿ ಕೈತುಂಬಾ ಸಿನಿಮಾಗಳಿವೆ, ಚೆನ್ನಾಗಿ ಹಣ ಮಾಡುತ್ತಿದ್ದಾರೆ ಅಂತರ್ಥ. ಹೌದು, ಸದ್ಯ ಕಿಯಾರಾ ‘ಭೂಲ್ ಬುಲಯ್ಯಾ 2’ ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಕಳೆದ ಶುಕ್ರವಾರ (ಮೇ 20) ತೆರೆಗೆ ಬಂದ ‘ಭೂಲ್...’ ಕೇವಲ ಮೂರು ದಿನಗಳಲ್ಲಿ 56 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ರಿಲೀಸ್ ಆದ ಯಾವುದೇ ಹಿಂದಿ ಚಿತ್ರಕ್ಕೆ ಇಷ್ಟು ಒಳ್ಳೆಯ ಗಳಿಕೆ ಆಗಿರಲಿಲ್ಲ. ಆ ಯಶಸ್ಸಿನ ಬೆನ್ನಲ್ಲೇ ಕಿಯಾರಾ ಅವರ ಮತ್ತೊಂದು ಚಿತ್ರ ‘ಜುಗ್ ಜುಗ್ ಜೀಯೊ’ ಟ್ರೇಲರ್ ಕೂಡ ಬಿಡುಗಡೆ ಆಗಿದೆ. ಟ್ರೇಲರ್ ಬಿಡುಗಡೆ ಸಮಯದಲ್ಲಿ ಕಿಯಾರಾ ಅಡ್ವಾನಿ ಅವರಿಗೆ ಯಾವಾಗ ಸೆಟಲ್ ಆಗುತ್ತೀರಿ ಎಂಬ ಪ್ರಶ್ನೆ ಎದುರಾಗಿದೆ. ಆಗ ಬುದ್ಧಿವಂತಿಕೆ ಉಪಯೋಗಿಸಿದ ಕಿಯಾರಾ, ‘ಮದುವೆ ಆಗದೆಯೂ ನಾನು ಸೆಟಲ್ ಆಗಬಹುದಲ್ವಾ? ಕೆಲಸ ಮಾಡುತ್ತಿದ್ದೇನೆ, ಹಣ ಮಾಡುತ್ತಿದ್ದೇನೆ ಹಾಗೂ ಖುಷಿಯಾಗಿಯೂ ಇದ್ದೇನೆ. ಅಷ್ಟು ಸಾಕಲ್ವಾ’ ಎಂದು ಉತ್ತರಿಸಿದ್ದಾರೆ.

ಅಂದಹಾಗೆ, ಈ ಚಾಲಾಕಿ ಚೆಲುವೆ ಕಳೆದ ಕೆಲ ತಿಂಗಳಿನಿಂದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಜತೆ ಓಡಾಡುತ್ತಿದ್ದಾರೆ. ಹೀಗಾಗಿ ಈ ಜೋಡಿ ಸ್ವಲ್ಪದರಲ್ಲೇ ಮದುವೆ ಅಥವಾ ನಿಶ್ಚಿತಾರ್ಥದ ಬಗ್ಗೆ ಗುಟ್ಟು ಬಿಟ್ಟುಕೊಡಬಹುದು ಎಂಬ ಕುತೂಹಲ ಅಭಿಮಾನಿಗಳದ್ದು. ಇನ್ನು ಸಿನಿಮಾದ ವಿಷಯಕ್ಕೆ ಬಂದರೆ, ಈ ತಿಂಗಳು ಕಿಯಾರಾ ನಟಿಸಿರುವ ಒಂದು ಚಿತ್ರ ತೆರೆಗೆ ಬಂದಿದ್ದರೆ, ಮುಂದಿನ ತಿಂಗಳು ಎರಡು ಚಿತ್ರಗಳು ಬಿಡುಗಡೆ ಆಗಲಿವೆ. ಜೂನ್ 10ರಂದು ‘ಗೋವಿಂದ ನಾಮ್ ಹೇ ಮೇರಾ’ ಹಾಗೂ ಜೂನ್ 24ರಂದು ‘ಜುಗ್ ಜುಗ್ ಜೀಯೊ’ ತೆರೆಗೆ ಬರಲಿವೆ. ಆ ಬಳಿಕ ರಾಮ್ರಣ್ ತೇಜಾ ನಾಯಕನಾಗಿರುವ 15ನೇ ಚಿತ್ರದಲ್ಲಿ ಕಿಯಾರಾ ಬಿಜಿಯಾಗಲಿದ್ದಾರೆ. - ಏಜೆನ್ಸೀಸ್