ಸಿನಿವಾಣಿ

seesakaddi film review: ‘ಸೀಸ್‌ಕಡ್ಡಿ’ಯಲ್ಲಿ ಜೀವನದ ತತ್ವ

ಚಿತ್ರ: ಸೀಸ್‌ಕಡ್ಡಿ

ನಿರ್ದೇಶನ: ರತನ್ ಗಂಗಾಧರ್

ತಾರಾಬಳಗ: ಸಿತಿನ್ ಅಪ್ಪಯ್ಯ, ಸಂಜಯ್ ಗೌಡ, ಶ್ರೇಷ್ಠ ಜುಪ್ತಿಮಠ, ಮಾನ್ವಿ, ಅನುಷ್ಕಾ ತಕ್ಕಲಕ್ಕಿ, ಪ್ರಥಮ್ ರಾಜೇ ಅರಸ್, ಸೌಮ್ಯ ಮತ್ತಿತರರು

ಶಿವ ಸ್ಥಾವರಮಠ

ಪೆನ್ಸಿಲ್ ಅನ್ನು ಶಾರ್ಪ್ ಮಾಡಿದಷ್ಟು ಹರಿತವಾಗುತ್ತದೆ. ಬರೆಯಲು ಕೂಡ ಸರಾಗ ಎನಿಸುತ್ತದೆ. ಅಂತೆಯೇ ನಾವು ದಿನದಿಂದ ದಿನಕ್ಕೆ ಹೊಸದನ್ನು ಕಲಿತಷ್ಟು ಮತ್ತು ಜನರ ನಡುವೆ ಒಡನಾಡಿದಷ್ಟು ಹೊಸ ಅನುಭವಗಳಿಂದ ನಮ್ಮ ಬದುಕು ಸುಂದರವಾಗುತ್ತದೆ ಎಂಬ ತತ್ವದೊಂದಿಗೆ ತೆರೆಕಂಡಿರುವ ಸಿನಿಮಾ ‘ಸೀಸ್‌ಕಡ್ಡಿ’. ಇಲ್ಲಿ ನಿರ್ದೇಶಕ ರತನ್ ಗಂಗಾಧರ್ ಒಂದು ವಿಶಿಷ್ಟ ಬಗೆಯೆ ಹಾಗೂ ಸದಭಿರುಚಿಯ ಕಥೆ ಹೇಳಿದ್ದಾರೆ.

ರತನ್ ‘ಸೀಸ್‌ಕಡ್ಡಿ’ ಮೂಲಕ ಜೀವನದ ಬೋಧನೆ ಮಾಡಿದ್ದಾರೆ. ಕಲಿಕೆ, ಆಕರ್ಷಣೆ ಹಾಗೂ ಅನುಭವ ಹೀಗೆ ನಾನಾ ವಿಚಾರಗಳನ್ನು ವಿವಿಧ ಪಾತ್ರಗಳ ಮನದಟ್ಟ ಮಾಡಿಸಿಲು ಯತ್ನಿಸಿದ್ದಾರೆ. ನಾಲ್ಕು ಮುಖ್ಯ ಪಾತ್ರಗಳಲ್ಲಿ ರೀದ್ (ಸಂಜಯ್) ಬದುಕನ್ನು ಅನ್ವೇಷಿಸಿ ಪುಸ್ತಕ ಬರೆಯಲು ಹಳ್ಳಿಗೆ ಬಂದಿದ್ದಾನೆ. ಆತನ ಸಾಹಸಕ್ಕೆ ತಿರುವು ನೀಡುವವಳೇ ಮಂಜಿ (ಅನುಷ್ಕಾ). ಇನ್ನೊಬ್ಬ ತೌಫಿಕ್ (ಶ್ರೇಷ್ಠ), ವೃತ್ತಿಯಲ್ಲಿ ಮೆಕ್ಯಾನಿಕ್. ಆದರೆ, ಸಿನಿಮಾ ಅಭಿಮಾನಿ. ಚಿತ್ರ ನೋಡಿದ ಮೇಲೆಯೇ ಟಿಕೆಟ್ ಬೆಲೆಯನ್ನು ನಿರ್ಧರಿಸುತ್ತಾನೆ. ಇಂತಹ ತೌಫಿಕ್, ಒಬ್ಬ ಸಿನಿಮಾ ನಿರ್ದೇಶಕ ಚಿಂತನೆಯನ್ನೇ ಬದಲಿಸಿಬಿಡುತ್ತಾನೆ. ಇನ್ನು ಹೆಸರಿಲ್ಲದ ಹುಡುಗಿ (ಅನನ್ಯಾ) ಈಕೆಗೆ ಸಾಥ್ ನೀಡುವವರು ಅನುರಾಧಾ (ಸೌಮ್ಯ). ಅನುರಾಧಾಗೆ ಮಾತು ಬರುವುದಿಲ್ಲ ಹಾಗೂ ಕಿವಿಯೂ ಕೇಳುವುದಿಲ್ಲ. ಕೊನೆಯ ಪಾತ್ರ ರವೀಶ್. ಆತನ ಮುದ್ದಾದ ಬರಹಗಳಿಗೆ ಶಿವು ಸರ್ ಬೆಂಬಲವಾಗಿ ನಿಂತು ರಾಜ್ಯಮಟ್ಟದ ಪ್ರಶಸ್ತಿ ತಂದುಕೊಡುತ್ತಾರೆ. ಒಂದೊಂದು ಪ್ರಮುಖ ಪಾತ್ರಕ್ಕೂ ಇನ್ನೊಂದು ವ್ಯಕ್ತಿ ಜೋಡಿಯಾಗಿದ್ದು, ಪಾತ್ರ ನಿರೂಪಿಸುವಾಗ ಅದು ನಮ್ಮೊಳಗಿನ ಅಂತಃಶಕ್ತಿ ಎಂಬಂತೆ ಬಿಂಬಿಸಲಾಗಿದೆ. ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಕಲಾವಿದರಿಗೂ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ದೊರೆತಿದೆ.

ಕಥೆಯು ಮೊದಲಿಗೆ ಸ್ವಲ್ಪ ನಿಧಾನ ಎನಿಸುತ್ತದೆ. ಕೆಲ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಪಾತ್ರಗಳ ತೀವ್ರತೆ ಹೆಚ್ಚಿದ್ದು, ಅಷ್ಟೇ ಭಾವುಕ ಹಾಗೂ ಯೋಚನಾಶೀಲರನ್ನಾಗಿಸುತ್ತದೆ. ಯಾವುದೇ ಗೊಂದಲ ಇಲ್ಲದೇ, ಸರಳವಾಗಿ ಕಥೆ ಹೇಳಿದ್ದು, ಪಾತ್ರಗಳಲ್ಲಿ ಅಡಗಿರುವ ಜೀವನ ತತ್ವವನ್ನು ಒಗಟಿನಂತೆ ಬಿಡಿಸಿದ್ದಾರೆ ರತನ್. ಬಾಲಸಾರಂಗನ್ ಸಂಗೀತದ ಬಿಟ್ ಸಾಂಗ್ ಪದೇ ಪದೇ ಕೇಳಬೇಕಿನಿಸುತ್ತದೆ. ಸುನೀಲ್ ಛಾಯಾಗ್ರಹಣದಲ್ಲಿ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.