ಬೊಗಳುವ ನಾಯಿ ಕಚ್ಚಲ್ಲ... ಆಕೆಯ ಅಹಂಕಾರದಿಂದ ಚಿತ್ರಕ್ಕೆ ನಷ್ಟ ಎಂದ ನಿರ್ದೇಶಕನ ವಿರುದ್ಧ ವರಲಕ್ಷ್ಮೀ ಗರಂ! Varalaxmi Sarathkumar
- ಬಣ್ಣದ ಲೋಕ ಚಿತ್ರರಂಗದಲ್ಲಿ ವಿವಾದಗಳು ಹೊಸದೇನಲ್ಲ
- ಕಲಾವಿದರ ಭಿನ್ನಾಭಿಪ್ರಾಯಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ
- ಪೊಲೀಸ್ ಕಂಪ್ಲೇಂಟ್ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಸದ್ದು ಮಾಡುತ್ತಿದೆ
- ನಟಿ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ನಿರ್ದೇಶಕ ನಂಜೀವ್ ಮೇಗೋಟಿ ನಡುವೆ ಮಾತಿನ ಸಮರ ನಡೆದಿದೆ
Varalaxmi Sarathkumar : ಬಣ್ಣದ ಲೋಕ ಚಿತ್ರರಂಗದಲ್ಲಿ ವಿವಾದಗಳು ಹೊಸದೇನಲ್ಲ, ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಆದರೆ, ಪ್ರಸ್ತುತ ನಟ ನವೀನ್ ಚಂದ್ರ ಹಾಗೂ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಪೊಲೀಸ್ ಕಂಪ್ಲೇಂಟ್' ಚಿತ್ರಕ್ಕೆ ಸಂಬಂಧಿಸಿದಂತೆ ಎದ್ದಿರುವ ಇತ್ತೀಚಿನ ಹೊಸ ವಿವಾದವೊಂದು ಈಗ ಟಾಲಿವುಡ್ ವಲಯದಲ್ಲಿ ಭಾರೀ ಸಂಚಲನ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.
ಪೊಲೀಸ್ ಕಂಪ್ಲೇಂಟ್ ಸಿನಿಮಾ ಜೂನ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬೆನ್ನಲ್ಲೇ, ನಿರ್ದೇಶಕ ಸಂಜೀವ್ ಮೇಗೋಟಿ ಅವರು ಮಾಡಿರುವ ಕಾಮೆಂಟ್‌ಗಳು ಮತ್ತು ಅದಕ್ಕೆ ನಟಿ ವರಲಕ್ಷ್ಮಿ ಶರತ್‌ಕುಮಾರ್ ನೀಡಿರುವ ಖಡಕ್ ಕೌಂಟರ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಲೈಟ್ ಆಗುತ್ತಿವೆ.
ಸಾಮಾನ್ಯವಾಗಿ ಸಿನಿಮಾಗಳ ಪ್ರಚಾರಕ್ಕಾಗಿ ಇಂತಹ ವಿವಾದಗಳನ್ನು ಸೃಷ್ಟಿಸಲಾಗುತ್ತದೆ ಎಂಬ ಮಾತಿದೆಯಾದರೂ, ಸದ್ಯ ಇವರಿಬ್ಬರ ನಡುವೆ ನಡೆಯುತ್ತಿರುವ ವಾಗ್ದಾಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಕೇವಲ ಪಬ್ಲಿಸಿಟಿ ಸ್ಟಂಟ್ ಅಲ್ಲ, ಬದಲಿಗೆ ಇಬ್ಬರ ನಡುವಿನ ನಿಜವಾದ ಅಸಮಾಧಾನ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಚಿತ್ರದ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಮೈಕ್ ಹಿಡಿದು ತಮ್ಮ ಆಕ್ರೋಶ ಹೊರಹಾಕಿದ ನಿರ್ದೇಶಕ ಸಂಜೀವ್ ಮೇಗೋಟಿ ಅವರು ಇಡೀ ಚಿತ್ರರಂಗವೇ ಬೆಚ್ಚಿಬೀಳುವಂತಹ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಶಿಸ್ತಿನ ವಿಷಯಕ್ಕೆ ಬಂದರೆ ವರಲಕ್ಷ್ಮಿ ಅವರನ್ನು ಅನೇಕರು 'ಲೇಡಿ ಬಾಲಯ್ಯ' ಎಂದು ಕರೆಯುವುದನ್ನು ನಾನು ಕೇಳಿದ್ದೆ, ಅವರು ಶೂಟಿಂಗ್ ಸಮಯದಲ್ಲಿ ನಮಗೆ ಉತ್ತಮ ಸಹಕಾರ ನೀಡಿದ್ದರೂ ಪ್ರಚಾರದ ವಿಷಯಕ್ಕೆ ಬಂದಾಗಲಂತೂ ನರಕ ತೋರಿಸಿದರು ಎಂದು ಕಿಡಿಕಾರಿದ್ದಾರೆ. ಒಪ್ಪಿಕೊಂಡ ಸಂಪೂರ್ಣ ಸಂಭಾವನೆಯನ್ನು ಪಡೆದ ನಂತರವೂ ಅವರು ಪ್ರಚಾರದ ಕಾರ್ಯಕ್ರಮಗಳಿಗೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕರು, ಪ್ರಚಾರಕ್ಕೆ ಬರುವಂತೆ ಎಷ್ಟು ಬಾರಿ ವಿನಂತಿಸಿದರೂ ತಮಗೆ ಸಮಯವೇ ಇಲ್ಲ ಎಂಬಂತೆ ನಡೆದುಕೊಂಡರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ವರಲಕ್ಷ್ಮಿ ಅವರು ಬರೋಬ್ಬರಿ ಮೂರು ತಿಂಗಳುಗಳ ಕಾಲ ಡಬ್ಬಿಂಗ್ ಮಾಡಿಕೊಡದೆ ನಮಗೆ ಕಣ್ಣೀರು ಹಾಕಿಸಿದ್ದರು ಮತ್ತು ಅದೇ ಬಿಡುವಿನ ಅವಧಿಯಲ್ಲಿ ಅವರು ತಾವು ಸ್ವತಃ ನಿರ್ದೇಶಿಸುತ್ತಿದ್ದ 'ಸರಸ್ವತಿ' ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದರು ಎಂದು ನಿರ್ದೇಶಕ ಸಂಜೀವ್ ಆರೋಪಿಸಿದ್ದಾರೆ. ರಾಮ್ ಚರಣ್ ಅವರಂತಹ ಗ್ಲೋಬಲ್ ಸ್ಟಾರ್ಗಳು ಹಾಗೂ 94 ವರ್ಷದ ಹಿರಿಯ ಪ್ರಸಿದ್ಧ ನಿರ್ದೇಶಕ ಸಂಗೀತಂ ಶ್ರೀನಿವಾಸ ರಾವ್ ಅವರೇ ತಮ್ಮ ಚಿತ್ರಗಳ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವಾಗ, ವರಲಕ್ಷ್ಮಿ ಅವರಿಗೆ ಇಷ್ಟೊಂದು ಅಹಂಕಾರವೇಕೆ ಎಂದು ಸಂಜೀವ್ ಅವರು ನೇರವಾಗಿ ಪ್ರಶ್ನಿಸಿರುವುದು ಸಖತ್ ಸಂಚಲನ ಮೂಡಿಸಿದೆ. ನಟಿಯ ಈ ಬೇಜವಾಬ್ದಾರಿಯುತ ನಡವಳಿಕೆಯಿಂದಾಗಿ ಇಡೀ ಸಿನಿಮಾಗೆ ಭಾರಿ ನಷ್ಟ ಉಂಟಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕರ ಈ ಆರೋಪಗಳು ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಸಹಜವಾಗಿಯೇ ಎಲ್ಲರ ಗಮನ ವರಲಕ್ಷ್ಮಿ ಅವರತ್ತ ತಿರುಗಿತು. ಈ ಹಿಂದೆ 'ಕ್ರಾಕ್', 'ನಾಂದಿ', 'ವೀರಸಿಂಹ ರೆಡ್ಡಿ' ಮತ್ತು 'ಹನುಮಾನ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಪವರ್‌ಫುಲ್ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಹಾಗೂ ಇತ್ತೀಚೆಗೆ 'ಶಬರಿ' ಮತ್ತು 'ಸರಸ್ವತಿ' ಸಿನಿಮಾಗಳ ಮೂಲಕ ರಂಜಿಸಿದ್ದ ವರಲಕ್ಷ್ಮೀ, ತಮ್ಮದೇ ಶೈಲಿಯಲ್ಲಿ ನಿರ್ದೇಶಕರಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಈ ವಿವಾದವನ್ನು ಮತ್ತಷ್ಟು ದೊಡ್ಡದು ಮಾಡಲು ತಮಗೆ ಇಷ್ಟವಿಲ್ಲ ಎಂದು ಹೇಳುತ್ತಲೇ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಎದುರಾಳಿಗಳಿಗೆ ಬಲವಾದ ತಿರುಗೇಟು ನೀಡಿದ್ದಾರೆ.
ಚಿತ್ರತಂಡಕ್ಕೆ ತಮ್ನ ಅಗತ್ಯವಿದ್ದಾಗಲೆಲ್ಲಾ ತಾವು ಲಭ್ಯವಿದ್ದಾಗಿ ಹಾಗೂ ಈ ಸಿನಿಮಾಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವಹಿಸಿರುವುದಾಗಿ ವರಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಪ್ರಿ-ರಿಲೀಸ್ ಈವೆಂಟ್‌ನಲ್ಲಿ ನಿರ್ದೇಶಕರು ಏನು ಮಾತನಾಡಿದ್ದಾರೆ ಎಂಬುದು ತಮಗೆ ಸಂಪೂರ್ಣವಾಗಿ ತಿಳಿದಿಲ್ಲ, ಕೆಲವು ವಿಷಯಗಳಲ್ಲಿ ತಮಗೆ ಸ್ವಂತ ಅಭಿಪ್ರಾಯಗಳಿದ್ದು, ಅವರು ಸಾರ್ವಜನಿಕವಾಗಿ ಮಾಡುತ್ತಿರುವ ಇಂತಹ ಆರೋಪಗಳ ಬಗ್ಗೆ ಚರ್ಚಿಸಿ ತಮ್ಮ ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ ಎಂದು ನಟಿ ತಿಳಿಸಿದ್ದಾರೆ.
ಅಷ್ಟಕ್ಕೇ ನಿಲ್ಲದ ವರಲಕ್ಷ್ಮಿ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಮತ್ತೊಂದು ಖಡಕ್ ಕೊಟೇಶನ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಬೊಗಳುವ ನಾಯಿಗಳು ಕಚ್ಚುವುದು ತುಂಬಾ ಅಪರೂಪ, ನಾನು ಮೊರೆವುದಿಲ್ಲ, ನೇರವಾಗಿ ಕಚ್ಚುತ್ತೇನೆ ಎಂದು ಬರೆದುಕೊಂಡಿದ್ದು, ಇದು ನೇರವಾಗಿ ನಿರ್ದೇಶಕ ಸಂಜೀವ್ ಮೇಗೋಟಿ ಅವರಿಗೆ ಬಾರಿಸಿದ ತಿರುಗೇಟು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ತಾವು ಎಲ್ಲರಂತೆ ಅನಗತ್ಯವಾಗಿ ಆರೋಪಗಳನ್ನು ಮಾಡದೆ, ಸದ್ದಿಲ್ಲದೆ ತಮ್ಮ ಕೆಲಸವನ್ನು ಮಾಡುವುದಾಗಿ ಹೇಳುವ ಮೂಲಕ ಅವರು ಪರೋಕ್ಷವಾಗಿ ಬಲವಾದ ಕೌಂಟರ್ ಕೊಟ್ಟಿದ್ದಾರೆ.
ಈ ವಾಗ್ದಾಳಿಯಿಂದಾಗಿ ಜೂನ್ 12ರಂದು ಬಿಡುಗಡೆಯಾಗಲಿರುವ 'ಪೊಲೀಸ್ ಕಂಪ್ಲೇಂಟ್' ಚಿತ್ರದ ಮೇಲಿನ ಪ್ರೇಕ್ಷಕರ ಕುತೂಹಲ ದುಪ್ಪಟ್ಟಾಗಿದೆ. ಇವರಿಬ್ಬರ ನಡುವಿನ ಈ ಕೋಲ್ಡ್ ವಾರ್ ಬಗ್ಗೆ ನೆಟ್ಟಿಗರು ಭಿನ್ನ ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಕೆಲವರು ನಿರ್ದೇಶಕರ ವಾದವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ವರಲಕ್ಷ್ಮಿ ಪರ ಬ್ಯಾಟ್ ಬೀಸುತ್ತಿದ್ದಾರೆ. ಏನೇ ಆದರೂ, ಸಿನಿಮಾ ರಿಲೀಸ್ ಆಗುವ ಮುನ್ನವೇ ಶುರುವಾಗಿರುವ ಈ ವಿವಾದವು ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುವಂತೆ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ನಡುವೆ ನಿರ್ದೇಶಕ ಸಂಜೀವ್ ಅವರು ವರಲಕ್ಷ್ಮೀ ಅವರಿಗೆ ಕ್ಷಮೆ ಕೋರಿದ್ದು, ಅದನ್ನು ವರಲಕ್ಷ್ಮೀ ಕ್ಷಮಿಸಿದ್ದಾರೆ, (ಏಜೆನ್ಸೀಸ್).